Dailyhunt Logo
  • Light mode
    Follow system
    Dark mode
    • Play Story
    • App Story
Uttar Pradesh| 6 ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ ಪ್ರಕರಣ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಪ್ರಮುಖ ಆರೋಪಿಯ ಹತ್ಯೆ

Uttar Pradesh| 6 ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ ಪ್ರಕರಣ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಪ್ರಮುಖ ಆರೋಪಿಯ ಹತ್ಯೆ

ಗ್ರೇಟರ್ ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಹಲ್ದೋನಿ ಗ್ರಾಮದಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಅಪರಾಧ ನಡೆದ ಸ್ಥಳದಲ್ಲಿ ಕೃತ್ಯದ ಮರು ಸೃಷ್ಟಿಗೆ ಆರೋಪಿಯನ್ನು ಕರೆದೊಯ್ದಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಬಾಲಕಿ ಶುಕ್ರವಾರ ಮಧ್ಯಾಹ್ನ ನಾಪತ್ತೆಯಾಗಿದ್ದಳು. ಗ್ರಾಮದ ಸಿಹಿತಿಂಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಕುಟುಂಬದವರು ಶುಕ್ರವಾರ ರಾತ್ರಿ ಇಕೋಟೆಕ್-3 ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಪತ್ತೆಗೆ ಐದು ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಿದ್ದರು.

ಶನಿವಾರ ಬೆಳಿಗ್ಗೆ ಗ್ರಾಮದ ಕೆರೆಯ ಸಮೀಪ ಬಾಲಕಿಯ ಮೃತದೇಹ ಪತ್ತೆಯಾಯಿತು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದ ಬಳಿಕ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮದ ಮುಖ್ಯ ರಸ್ತೆಯಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು.

ಘಟನೆಗೆ ಸಂಬಂಧಿಸಿ ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುತಿಸಿದರು. ಅವರಲ್ಲಿ 40 ವರ್ಷದ ವ್ಯಕ್ತಿಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಿ ಶನಿವಾರ ಮಧ್ಯಾಹ್ನ ವಶಕ್ಕೆ ಪಡೆಯಲಾಯಿತು.

ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಮತ್ತೊಬ್ಬ ಶಂಕಿತನ ಮನೆಯಲ್ಲಿ ನಡೆದಿರಬಹುದು ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಕೇಂದ್ರ ನೋಯ್ಡಾ) ಸ್ವತಂತ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಆಯುಧ ತೋರಿಸುವುದಾಗಿ ಹೇಳಿದ್ದ ಆರೋಪಿ

ಅಪರಾಧಕ್ಕೆ ಬಳಸಿದ ಪಿಸ್ತೂಲ್ ಅನ್ನು ಡಿ-ಪಾರ್ಕ್ ಪೊಲೀಸ್ ಹೊರಠಾಣೆ ಬಳಿಯ ಪೊದೆಗಳಲ್ಲಿ ಬಚ್ಚಿಟ್ಟಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದ. ಹೀಗಾಗಿ ಶನಿವಾರ ಮಧ್ಯಾಹ್ನ ಆತನನ್ನು ಆಯುಧವನ್ನು ಪತ್ತೆಹಚ್ಚಲು ಪೊಲೀಸರು ಆ ಪ್ರದೇಶಕ್ಕೆ ಕರೆದೊಯ್ದಿದ್ದರು. ಈ ವೇಳೆ ಅಪರಾಧ ನಡೆದ ರೀತಿಯನ್ನೂ ಪೊಲೀಸರು ಪುನರ್‌ನಿರ್ಮಿಸುತ್ತಿದ್ದರು.

ಆಗ ಆರೋಪಿ ಪೊಲೀಸರನ್ನು ತಳ್ಳಿ, ಪೊದೆಗಳಲ್ಲಿ ಬಚ್ಚಿಟ್ಟಿದ್ದ ಪಿಸ್ತೂಲ್ ತೆಗೆದು ಪೊಲೀಸ್ ಸಿಬ್ಬಂದಿಯತ್ತ ಗುಂಡು ಹಾರಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಒಬ್ಬ ಕಾನ್‌ಸ್ಟೆಬಲ್ ಗಾಯಗೊಂಡರು. ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದು, ಆರೋಪಿ ಕೂಡ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ವೇಳೆ ಆರೋಪಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಗಾಯಗೊಂಡ ಕಾನ್‌ಸ್ಟೆಬಲ್‌ ಗೆ ಚಿಕಿತ್ಸೆ ಮುಂದುವರಿದಿದೆ ಎಂದು ಡಿಸಿಪಿ ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆ ನಡೆಸಲು ವೈದ್ಯರ ಸಮಿತಿಯನ್ನು ರಚಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊ ಚಿತ್ರೀಕರಣ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi