Dailyhunt
Uttar Pradesh | ಮಾಜಿ ಪತ್ನಿಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಪತಿ!

Uttar Pradesh | ಮಾಜಿ ಪತ್ನಿಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಪತಿ!

ಹರಾಯಿಚ್, ಎ. 3: ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ತನ್ನ ಮಾಜಿ ಪತ್ನಿಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದು ಹತ್ಯೆಗೈಯಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಈ ಘಟನೆ ನಾನ್ಪಾರ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಹಾಗೂ ಆರೋಪಿ ಇಬ್ಬರೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ರಾಮ್‌ಗಾಂವ್ ಪ್ರದೇಶದ ಮುಸಲ್ಲಂಪುರ ಗ್ರಾಮದ ನಿವಾಸಿ ರಹೀಸ್ ಎಂದು ಗುರುತಿಸಲಾಗಿದೆ. ಈತ ನನ್ಪಾರದ ನಿವಾಸಿ ರೇಷ್ಮಾರನ್ನು ವರ್ಷದ ಹಿಂದೆ ವಿವಾಹವಾಗಿದ್ದ. ವಿವಾದಗಳ ಕಾರಣಕ್ಕೆ ಅವರಿಬ್ಬರು ಪ್ರತ್ಯೇಕವಾಗಿದ್ದರು. ಅವರ ವಿಚ್ಛೇದನ ನ್ಯಾಯಾಲಯದಲ್ಲಿ ಜನವರಿಯಲ್ಲಿ ಅಂತ್ಯಗೊಂಡಿತ್ತು. ನಂತರ ರೇಷ್ಮಾ ಅವರು ತಮ್ಮ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು.

ಆರೋಪಿ ಬುಧವಾರ ನನ್ಪಾರಕ್ಕೆ ಬಂದಿದ್ದಾನೆ. ಮನೆಗೆ ಹಿಂದಿರುಗುತ್ತಿದ್ದ ತನ್ನ ಮಾಜಿ ಪತ್ನಿಯನ್ನು ಲಕ್ಷ್ಮಣಪುರ ಮತೇಹಿ ಗ್ರಾಮದ ಬಳಿ ಭೇಟಿಯಾಗಿದ್ದಾನೆ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಹಿಂಸಾಚಾರಕ್ಕೆ ತಿರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನಂತರ ರಹೀಸ್ ತನ್ನ ಮೋಟಾರು ಸೈಕಲ್‌ನಿಂದ ಮಾಜಿ ಪತ್ನಿಗೆ ಢಿಕ್ಕಿ ಹೊಡೆದಿದ್ದಾನೆ. ಬಳಿಕ ಆಕೆಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ಅಳುವುದನ್ನು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಿದರು. ಕೋಪೋದ್ರಿಕ್ತರಾದ ಗುಂಪು ಆರೋಪಿಗೆ ಥಳಿಸಿತು. ಇದರಿಂದ ರಹೀಸ್ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ಪಹುಪ್ ಸಿಂಗ್ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi