Dailyhunt Logo
  • Light mode
    Follow system
    Dark mode
    • Play Story
    • App Story
Uttar Pradesh | ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ: ಕಳಪೆ ರಸ್ತೆಯ ಬಗ್ಗೆ ದೂರು ನೀಡಿದ ಗ್ರಾಮಸ್ಥರಿಗೆ ಬಿಜೆಪಿ ಶಾಸಕನಿಂದ ಬೆದರಿಕೆ

Uttar Pradesh | ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ: ಕಳಪೆ ರಸ್ತೆಯ ಬಗ್ಗೆ ದೂರು ನೀಡಿದ ಗ್ರಾಮಸ್ಥರಿಗೆ ಬಿಜೆಪಿ ಶಾಸಕನಿಂದ ಬೆದರಿಕೆ

ಕ್ನೋ, ಆ. 28: ಕಳಪೆ ರಸ್ತೆಯ ಬಗ್ಗೆ ದೂರು ನೀಡಿದ ಗ್ರಾಮಸ್ಥರಿಗೆ ಬಿಜೆಪಿ ಶಾಸಕನೋರ್ವ ''ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ'' ಎಂದು ಬೆದರಿಕೆ ಒಡ್ಡಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ರಾಜ್ಯ 2027ರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಈ ಮಾತಿನ ಚಕಮಕಿಯ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಕೀಯ ವಿವಾದವನ್ನೇ ಎಬ್ಬಿಸಿವೆ.

ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಸಾಯಿ ರಾಮ್ ಎಂಬವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಿಜೆಪಿ ಶಾಸಕ ಛೋಟೇಲಾಲ್ ವರ್ಮಾ ಅವರು ಬುಧವಾರ ಆಗ್ರಾದ ಫತೇಹಾಬಾದ್ ವಿಧಾನಸಭಾ ಕ್ಷೇತ್ರದ ಗ್ರಾಮವೊಂದಕ್ಕೆ ತೆರಳಿದ ಸಂದರ್ಭ ಈ ಘಟನೆ ನಡೆದಿದೆ.

ಈ ಭೇಟಿಯ ಸಂದರ್ಭ ಕೆಲವು ಗ್ರಾಮಸ್ಥರು ರಸ್ತೆಯ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಸ್ತೆ ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದ್ದು, ಮಳೆಯಿಂದಾಗಿ ನೀರು ನಿಂತು ಕೆಸರಾಗುವುದರಿಂದ ಗ್ರಾಮಸ್ಥರು ಸಂಚರಿಸಲು ಕಷ್ಟವಾಗುತ್ತಿದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಪ್ರಾರಂಭವಾದ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ವರ್ಮಾ ಅವರು ತಮ್ಮ ತಾಳ್ಮೆ ಕಳೆದುಕೊಂಡಂತೆ ಕಂಡುಬಂದಿದ್ದಾರೆ. ವೈರಲ್ ವೀಡಿಯೊದಲ್ಲಿ ವರ್ಮಾ ಗ್ರಾಮಸ್ಥನಿಗೆ ''ನೀನೇಕೆ ದಿಟ್ಟಿಸಿ ನೋಡುತ್ತಿದ್ದಿ. ನೀನು ತುಂಬಾ ಅಹಂಕಾರಿಯಾಗಿದ್ದಿ. ನೀನು ಹೆಚ್ಚು ಮಾತನಾಡಿದರೆ, ಜೈಲಿಗೆ ಕಳುಹಿಸುತ್ತೇನೆ'' ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ತನ್ನೊಂದಿಗೆ ವಾದಿಸುತ್ತಿದ್ದ ಗ್ರಾಮಸ್ಥನನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ಅವರು ರೂಪಾಲಿ ಎಂಬ ಮಹಿಳೆಯ ಮೇಲೆಯೂ ಹರಿಹಾಯ್ದಿದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಗ್ರಾಮಸ್ಥ, ರಸ್ತೆಯ ದುಸ್ಥಿತಿಯ ಬಗ್ಗೆ ಗಮನ ಸೆಳೆದು ಪರಿಹಾರ ಕೋರಿ ಶಾಸಕರಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ. ಆದರೆ, ಅವರು ಈ ಬಗ್ಗೆ ಗಮನಹರಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರು ಗ್ರಾಮಕ್ಕೆ ಭೇಟಿ ನೀಡಿದಾಗ ಮತ್ತೊಮ್ಮೆ ಈ ವಿಷಯ ಪ್ರಸ್ತಾಪಿಸಿದೆ. ಅದು ವಾಗ್ವಾದಕ್ಕೆ ಕಾರಣವಾಯಿತು ಎಂದರು.

ವಾಗ್ವಾದದ ಸಂದರ್ಭ ಶಾಸಕರು ಸಾಯಿರಾಮ್ ಅವರ ಕುಟುಂಬದ ಮತ್ತೊಬ್ಬ ಮಹಿಳೆಗೂ ಪೊಲೀಸ್ ಕ್ರಮದ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ''ನನ್ನ ತಂದೆ ಕೆಲವು ದಿನಗಳ ಹಿಂದೆ ನಿಧನರಾದರು ಎಂದು ನಾನು ಅವರಿಗೆ ತಿಳಿಸಿದೆ. ನೀವು ಇಲ್ಲಿಗೆ ಸಾಂತ್ವನ ಹೇಳಲು ಬಂದಿದ್ದೀರಾ? ಅಥವಾ ನನಗೆ ಪೊಲೀಸ್ ಕ್ರಮದ ಬೆದರಿಕೆ ಹಾಕಲು ಬಂದಿದ್ದೀರಾ?'' ಎಂದು ಪ್ರಶ್ನಿಸಿದೆ ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi