Dailyhunt Logo
  • Light mode
    Follow system
    Dark mode
    • Play Story
    • App Story
Uttar Pradesh | ಪ್ರಿಯಕರನೊಂದಿಗೆ ಬದುಕಲು ಅವಕಾಶ ನೀಡುವಂತೆ ಆಗ್ರಹಿಸಿ ಇಬ್ಬರು ಮಕ್ಕಳೊಂದಿಗೆ 150 ಅಡಿ ಗೋಪುರ ಏರಿದ ಮಹಿಳೆ

Uttar Pradesh | ಪ್ರಿಯಕರನೊಂದಿಗೆ ಬದುಕಲು ಅವಕಾಶ ನೀಡುವಂತೆ ಆಗ್ರಹಿಸಿ ಇಬ್ಬರು ಮಕ್ಕಳೊಂದಿಗೆ 150 ಅಡಿ ಗೋಪುರ ಏರಿದ ಮಹಿಳೆ

ಗೊಂಡಾ, ಜು. 5: ಪ್ರಿಯಕರನೊಂದಿಗೆ ಬದುಕಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಸುಮಾರು 150 ಅಡಿ ಎತ್ತರದ ದೂರವಾಣಿ ಗೋಪುರ ಏರಿದ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಸತತ 9 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಮಹಿಳೆ ಮತ್ತು ಆಕೆಯ ಮಕ್ಕಳನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪುರ ಏರಿದ್ದ ಮಹಿಳೆಯನ್ನು ಗೊಂಡಾ ಜಿಲ್ಲೆಯ ತರಬ್‌ಗಂಜ್ ನಿವಾಸಿ ಗೀತಾ ದೇವಿ ಎಂದು ಗುರುತಿಸಲಾಗಿದೆ. ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಸುಮಾರು 150 ಅಡಿ ಎತ್ತರದ ದೂರವಾಣಿ ಗೋಪುರವನ್ನು ಆಕೆ ತನ್ನ ಇಬ್ಬರು ಮಕ್ಕಳೊಂದಿಗೆ ಏರಿ, ಅದರ ಮೇಲಿನ ಅಟ್ಟಣಿಗೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಳು ಎಂದು ಕೊತ್ವಾಲಿ ಠಾಣೆಯ ಠಾಣಾಧಿಕಾರಿ ಬಿಂದೇಶ್ವರಿ ಮಣಿ ತ್ರಿಪಾಠಿ ತಿಳಿಸಿದ್ದಾರೆ.

ತನ್ನ ಪತಿ ತೊರೆದು ಹೋಗಿದ್ದಾನೆ. ಅಲ್ಲದೆ, ತನ್ನ ಪ್ರಿಯಕರ ರಾಮ್ ಅಕಬಲ್ ಸಿಂಗ್ ಕೂಡ ತನ್ನೊಂದಿಗೆ ವಾಸಿಸುವುದನ್ನು ನಿಲ್ಲಿಸಿದ್ದು, ಯಾವುದೇ ಆರ್ಥಿಕ ನೆರವು ನೀಡುತ್ತಿಲ್ಲ ಎಂದು ಗೀತಾ ದೇವಿ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು, ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮಹಿಳೆಯನ್ನು ಕೆಳಗಿಳಿಸಲು ಪ್ರಯತ್ನ ಆರಂಭಿಸಿದರು. ಸುಮಾರು 9 ಗಂಟೆಗಳ ಕಾಲ ನಡೆದ ಮನವೊಲಿಕೆ ಮತ್ತು ರಕ್ಷಣಾ ಕಾರ್ಯಾಚರಣೆಯ ಬಳಿಕ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 26ರಂದು ಗೀತಾ ದೇವಿ ತನ್ನ ಪ್ರಿಯಕರ ರಾಮ್ ಅಕಬಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆತ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಳು. ಆದರೆ ಈಗ ಅದೇ ವ್ಯಕ್ತಿಯೊಂದಿಗೆ ಬದುಕಲು ಅವಕಾಶ ನೀಡಬೇಕು ಎಂದು ಆಗ್ರಹಿಸುತ್ತಿದ್ದಾಳೆ ಎಂದು ಠಾಣಾಧಿಕಾರಿ ಬಿಂದೇಶ್ವರಿ ಮಣಿ ತ್ರಿಪಾಠಿ ಹೇಳಿದ್ದಾರೆ.

ಜೂನ್ ತಿಂಗಳಲ್ಲಿಯೂ ಗೊಂಡಾ ಜಿಲ್ಲೆಯ ಮತ್ತೊಂದು ದೂರವಾಣಿ ಗೋಪುರ ಏರಿದ್ದ ಮಹಿಳೆಯೊಬ್ಬರು ಇದೇ ರೀತಿಯ ಪ್ರತಿಭಟನೆ ನಡೆಸಿದ್ದರು. ಸುಮಾರು 6 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಆಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi