Dailyhunt Logo
  • Light mode
    Follow system
    Dark mode
    • Play Story
    • App Story
ವೈಭವ್ ವಯಸ್ಸು ನೋಡಬೇಡಿ; ಭಾರತ ತಂಡಕ್ಕೆ ಪದಾರ್ಪಣೆ ಬಗ್ಗೆ ಶಿಖರ್ ಧವನ್ ಹೇಳಿದ್ದೇನು?

ವೈಭವ್ ವಯಸ್ಸು ನೋಡಬೇಡಿ; ಭಾರತ ತಂಡಕ್ಕೆ ಪದಾರ್ಪಣೆ ಬಗ್ಗೆ ಶಿಖರ್ ಧವನ್ ಹೇಳಿದ್ದೇನು?

ಹೊಸದಿಲ್ಲಿ: ಭಾರತ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿರುವ 15ರ ಭರವಸೆಯ ಕುಡಿ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಅಗತ್ಯವನ್ನು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಪ್ರತಿಪಾದಿಸಿದ್ದಾರೆ. ಆಟದಲ್ಲಿ ಗರಿಷ್ಠ ಮಟ್ಟದ ಸಾಮರ್ಥ್ಯ ವಯಸ್ಸಿಗಿಂತ ಮುಖ್ಯವಾಗಬೇಕು ಎಂದು ಅವರು ವಿಶ್ಲೇಷಿಸಿದ್ದಾರೆ.

ಯುವ ಆಟಗಾರನ ನಿರ್ಭೀತ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಅಗ್ರ ಬೌಲರ್‌ಗಳ ವಿರುದ್ಧವೂ ಅವರು ಗಣನೀಯ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆರಂಭಿಕ ಹಂತದಲ್ಲೇ ಇಂಥ ಆತ್ಮವಿಶ್ವಾಸ ಅತ್ಯಪರೂಪ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಹಿರಿಯರ ಮಟ್ಟದಲ್ಲಿ ವೈಭವ್ ಅದ್ಭುತ ಪ್ರದರ್ಶನ ನೀಡುತ್ತಿದ್ದರೆ, ಅದನ್ನು ಗಣನೆಗೆ ತೆಗೆದುಕೊಳ್ಳಬೇಕೇ ವಿನಃ ಅವರ ವಯಸ್ಸನ್ನಲ್ಲ. ಆತ ಇನ್ನೂ ಸಣ್ಣ ಹುಡುಗ. ಆದರೆ ಬೂಮ್ರಾ, ಅರ್ಷದೀಪ್ ಅವರಂಥ ಬೌಲರ್‌ಗಳ ಎಸೆತಗಳನ್ನು ಸಿಕ್ಸರ್‌ಗಳಿಗೆ ಅಟ್ಟುವುದು ನಿಜಕ್ಕೂ ಆಶ್ಚರ್ಯ" ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. "ಬಹುತೇಕ ದೊಡ್ಡ ಹೆಸರುಗಳು ಇಂಥ ಸಣ್ಣ ವಯಸ್ಸಿನಲ್ಲಿ ಈ ಬಗೆಯ ಸಾಧನೆ ಮಾಡಿಲ್ಲ. ಖಚಿತವಾಗಿಯೂ ಅವರ ಆಗಮನಕ್ಕೆ ಇದು ಸುಸಂದರ್ಭ. ಅವರು ಬರಲೇಬೇಕು" ಎಂದು ಹೇಳಿದ್ದಾರೆ.

ಈ ಬಗೆಯ ಶ್ಲಾಘನೆಗೆ ಸೂರ್ಯವಂಶಿಯವರ 2026ರ ಸಾಲಿನ ಐಪಿಎಲ್ ಅಂಕಿಅಂಶಗಳು ಪೂರಕವಾಗಿವೆ. ಪ್ರಸಕ್ತ ಋತುವಿನಲ್ಲಿ ಅವರು 238.10 ಸ್ಟ್ರೈಕ್ ರೇಟ್‌ನಲ್ಲಿ 400 ರನ್ ಕಲೆಹಾಕಿದ್ದಾರೆ. ಅತ್ಯಧಿಕ ರನ್ ಕಲೆಹಾಕಿರುವವರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅವರು 37 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದು ಯಾವುದೇ ಬ್ಯಾಟರ್‌ಗಿಂತ ಅಧಿಕ.

ಆದರೆ ಭಾರತದ ಟಿ20 ತಂಡದಲ್ಲಿ ವೈಭವ್‌ಗೆ ಸ್ಥಾನ ಕಲ್ಪಿಸುವುದು ನಿಜಕ್ಕೂ ಸವಾಲಿನ ಕೆಲಸ ಎಂದು ಧವನ್ ಅಭಿಪ್ರಾಯಪಟ್ಟಿದ್ದಾರೆ. 2026ರ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆದ್ದರಿಂದ ಅವಕಾಶಗಳು ಸುಲಭವಾಗಿ ಬರಲಾರವು" ಎಂದು ವಿಶ್ಲೇಷಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi