Dailyhunt
'ವೈಜ್ಞಾನಿಕ ಭಾರತ, ಸುರಕ್ಷಿತ ಭಾರತ ಸೇರಿ ಐದು ಮೌಲ್ಯ ಅಳವಡಿಸಿಕೊಂಡರೆ 2047ರೊಳಗೆ ಭಾರತ ವಿಕಸಿತ ದೇಶ'

'ವೈಜ್ಞಾನಿಕ ಭಾರತ, ಸುರಕ್ಷಿತ ಭಾರತ ಸೇರಿ ಐದು ಮೌಲ್ಯ ಅಳವಡಿಸಿಕೊಂಡರೆ 2047ರೊಳಗೆ ಭಾರತ ವಿಕಸಿತ ದೇಶ'

ಡುಬಿದ್ರಿ: ವೈಜ್ಞಾನಿಕ ಭಾರತ, ಸುರಕ್ಷಿತ ಭಾರತ, ಸಮೃದ್ಧ ಭಾರತ, ಸಮಾಜವೃದ್ಧಿ ಭಾರತ ಹಾಗೂ ಸುಸಜ್ಜಿತ ಭಾರತ ಈ ಐದು ಮೌಲ್ಯಗಳನ್ನು ಅಳವಡಿಸಿಕೊಂಡರೆ, 2047ರೊಳಗೆ ಭಾರತವು ವಿಕಸಿತ ರಾಷ್ಟ್ರವಾಗಲು ಸಾಧ್ಯ ಎಂದು ಖ್ಯಾತ ಅಂತರಿಕ್ಷ ವಿಜ್ಞಾನಿ, ಬೆಂಗಳೂರಿನ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯೋಗಾಲಯದ (ಡಿಆರ್‌ಡಿಎಲ್) ನಿವೃತ್ತ ನಿರ್ದೇಶಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಪ್ರಹ್ಲಾದ ರಾಮರಾವ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ 75ರ ಅಮೃತ ಮಹೋತ್ಸವ ಸಂಭ್ರಮದ ಸಭಾ ಕಾರ್ಯ ಕ್ರಮದಲ್ಲಿ ಮಾಡಿದ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡುತಿದ್ದರು.

ನಮ್ಮ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಹೆಚ್ಚು ಅಭಿವೃದ್ಧಿ ಯಾಗಬೇಕಿದೆ. ವಿಶೇಷವಾಗಿ ರಕ್ಷಣಾ ವ್ಯವಸ್ಥೆಗೆ ಅಗತ್ಯವಾದ ತಂತ್ರಜ್ಞಾನ ಮತ್ತು ಸಾಧನಗಳನ್ನು ದೇಶದಲ್ಲಿಯೇ ನಿರ್ಮಿಸುವ ಸಾಮರ್ಥ್ಯ ಬೆಳೆಸಿದರೆ, ಅದು ನಿಜವಾದ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತದೆ ಎಂದು ದೇಶದ ಅಗ್ನಿ, ಪೃಥ್ವಿ, ನಾಗ್, ಬ್ರಹ್ಮೋಸ್ ಹಾಗೂ ಬಹುಮುಖ್ಯ ಆಕಾಶ್ ಕ್ಷಿಪಣಿಯ ಅಭಿವೃದ್ಧಿಯಲ್ಲಿ ಬಹುದೊಡ್ಡ ಪಾತ್ರ ವಹಿಸಿರುವ ಡಾ.ಪ್ರಹ್ಲಾದ್ ರಾಮರಾವ್ ಹೇಳಿದರು.

ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಮನುಷ್ಯತ್ವ ಮತ್ತು ಉತ್ತಮ ವ್ಯಕ್ತಿತ್ವ ಬೆಳೆಸಬೇಕು. ಅದಕ್ಕಾಗಿ ಉತ್ತಮ ಸಂಸ್ಕಾರಯುತ ಶಿಕ್ಷಣ ಅತ್ಯಗತ್ಯ ಎಂದ ಅವರು, ನಮ್ಮ ದೇಶಕ್ಕೆ ಅಗತ್ಯವಿರುವ ಶಕ್ತಿಯನ್ನು ನಾವೇ ಉತ್ಪಾದಿಸುವ ದಿಕ್ಕಿನಲ್ಲಿ ಮಹತ್ವದ ಸಾಧನೆ ನಡೆಯುತ್ತಿದೆ. ಈ ಯೋಜನೆ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಂಡು ಅಧಿಕೃತ ವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ ಎಂದರು.

ದೇಶಕ್ಕೆ ಮುಖ್ಯವಾಗಿ ಬೇಕಾಗಿರುವುದು ಶಕ್ತಿ(ಎನರ್ಜಿ). ಈ ಕುರಿತು ದಿ.ರಾಷ್ಟ್ರಪತಿ, ದೇಶದ ಪ್ರಮುಖ ವಿಜ್ಞಾನಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನನ್ನ ಬಳಿ ನಮ್ಮ ದೇಶ ಸ್ವಾವಲಂಬಿಯಾಗಲು ವೈಜ್ಞಾನಿಕ ಪ್ರಯೋಗಗಳು ನಡೆಯಬೇಕು ಎಂದು ಸೂಚಿಸಿದ್ದರು. ಅವರ ಪ್ರೇರಣೆಯಿಂದಲೇ 2012ರಿಂದಲೇ ಶಕ್ತಿ ಉತ್ಪಾದನೆಗೆ ಸಂಬಂಧಿಸಿ ದಂತೆ ವೈಜ್ಞಾನಿಕ ಸಂಶೋಧನೆಗಳು ಮತ್ತು ಪ್ರಯೋಗಗಳು ಆರಂಭ ಗೊಂಡಿವೆ. ಈಗ ಅವು ಬಹುತೇಕ ಅಂತಿಮ ಹಂತವನ್ನು ತಲುಪಿವೆ ಎಂದು ವಿವರಿಸಿದರು.

ವಿಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ವಿಜ್ಞಾನಿ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಹಾಗೂ ಇಸ್ರೋದ ಮಾಜಿ ಭಾರತೀಯ ಅಂತರಿಕ್ಷ ವಿಜ್ಞಾನಿ ಡಾ. ಬಿ.ಆರ್. ಗುರುಪ್ರಸಾದ್ ಮಾತನಾಡಿ, ಹಿರಿಯರ ಸಾಧನೆಗಳನ್ನು ಇಂದಿನ ಹಾಗೂ ಮುಂದಿನ ತಲೆಮಾರು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಫುಲವಾದ ಅವಕಾಶಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲೆಯವರೇ ಆದ ಮಹಾನ್ ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ಅವರು ಅಂದಿನ ಕಷ್ಟಕರ ಪರಿಸ್ಥಿತಿಗಳಲ್ಲಿಯೇ ಅಪಾರ ಸಾಧನೆ ಮಾಡಿ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಸಾಧನೆಗಳು ದೇಶದ ಅಭಿವೃದ್ಧಿಗೆ ದಾರಿದೀಪವಾದವು. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರಾಮಾಣಿಕತೆ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಈ ಗುಣಗಳೊಂದಿಗೆ ಕಾರ್ಯನಿರ್ವಹಿಸಿದರೆ ಯಶಸ್ಸು ಖಚಿತ ಎಂದರು.

ಭಾರತದಲ್ಲಿ ಅನೇಕ ಆಧುನಿಕ ಉಪಗ್ರಹಗಳು ದೇಶದ ಬೆನ್ನೆಲುಬಾಗಿ ಕೆಲಸ ಮಾಡುತ್ತಿವೆ. ಸಂವಹನ, ಹವಾಮಾನ, ರಕ್ಷಣಾ ವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವು ಮಹತ್ವದ ಕೊಡುಗೆ ನೀಡುತ್ತಿವೆ. ಈ ಎಲ್ಲಾ ಸಾಧನೆಗಳ ಹಿಂದೆ ವಿಜ್ಞಾನಿಗಳ ಕಠಿಣ ಪರಿಶ್ರಮ ಇದೆ. ಈ ಸಾಧನೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದು ಅವರು ಭವಿಷ್ಯದ ವಿಜ್ಞಾನಿಗಳನ್ನು ಹುರಿದುಂಬಿಸಿದರು.

ಪ್ರಶ್ನಿಸುವುದನ್ನು ರೂಢಿಸಿಕೊಳ್ಳಿ: ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‌ಸಿಎಎಸ್‌ಆರ್)ನ ಸಂಶೋಧಕ ಹಾಗೂ ವಿಜ್ಞಾನ ಸಂವಹನಕಾರ ಡಾ. ವಿನಾಯಕ ಕೆ. ಪತ್ತಾರ್ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಪ್ರಶ್ನೆಗಳನ್ನು ಕೇಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನವು ಉನ್ನತ ಮಟ್ಟದಲ್ಲಿದ್ದರೆ ಮಾತ್ರ ರಾಷ್ಟ್ರವು ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತದೆ. ಇಂದಿನ ದಿನಗಳಲ್ಲಿ ನಾವು ತಂತ್ರಜ್ಞಾನದಲ್ಲಿ ಮುಂದುವರೆದಿದ್ದರೂ, ಮೂಲ ವಿಜ್ಞಾನ ಸಂಶೋಧನೆಗಳಲ್ಲಿ ಇನ್ನಷ್ಟು ಗಮನ ಹರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಅದಮಾರು ಮಠದ ಹಿರಿಯ ಸ್ವಾಮೀಜಿ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿದರು. ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎರ್ಮಾಳು ಉದಯ ಕೆ. ಶೆಟ್ಟಿ ಉಪಸ್ಥಿತರಿದ್ದರು.

ಅದಮಾರು ಮಠ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಡಾ.ಎ.ಪಿ. ಭಟ್ ಸ್ವಾಗತಿಸಿದರೆ, ಸಂಸ್ಕೃತ ಪ್ರಾಧ್ಯಾಪಕ ಡಾ.ಜಯಶಂಕರ ಕಂಗಣ್ಣಾರು ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ಶ್ರೀಧರ ಕೆ. ರಾವ್ ವಂದಿಸಿದರು.


Dailyhunt
Disclaimer: This content has not been generated, created or edited by Dailyhunt. Publisher: Varthabharathi