ಹೊಸದಿಲ್ಲಿ, ಎ.4: ಎರಡೂ ಕೈ, ಕಾಲುಗಳಿಲ್ಲದ ಭಾರತದ ಯುವ ಆರ್ಚರಿ ಪಟು ಪಾಯಲ್ ನಾಗ್ ತಮ್ಮದೇ ದೇಶದ ವಿಶ್ವದ ನಂ.1 ಬಿಲ್ಲುಗಾರ್ತಿ ಶೀತಲ್ ದೇವಿಯವರನ್ನು ಸೋಲಿಸಿ ಚಿನ್ನದ ಪದಕ ಜಯಿಸಿದ್ದಾರೆ.
ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಆರ್ಚರಿ ಪ್ಯಾರಾ ಸೀರಿಸ್‌ನಲ್ಲಿ ಪಾಯಲ್ ನಾಗ್ ಈ ಸಾಧನೆ ಮಾಡಿದರು.
ಇದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತವು ಒಟ್ಟು ಏಳು ಚಿನ್ನದ ಪದಕವನ್ನು ಜಯಿಸಿ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
18ರ ವಯಸ್ಸಿನ ಉದಯೋನ್ಮುಖ ಸ್ಟಾರ್ ಪಾಯಲ್ ಕಾಂಪೌಂಡ್ ಮಹಿಳೆಯರ ಫೈನಲ್ ಪಂದ್ಯದಲ್ಲಿ ಶೀತಲ್‌ರನ್ನು 139-136 ಅಂತರದಿಂದ ಮಣಿಸಿದರು. ಭಾರತವು ವರ್ಲ್ಡ್ ಪ್ಯಾರಾ ಆರ್ಚರಿ ಸಿರೀಸ್‌ನಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದು, ಏಳು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚು ಸಹಿತ 13 ಪದಕಗಳನ್ನು ಜಯಿಸಿದೆ.
ಪಾಯಲ್ ವರ್ಷದೊಳಗೆ ಎರಡನೇ ಬಾರಿ ಶೀತಲ್ ವಿರುದ್ಧ ಜಯ ಸಾಧಿಸಿದ್ದಾರೆ. 2025ರ ಜನವರಿಯಲ್ಲಿ ಜೈಪುರದಲ್ಲಿ ನಡೆದಿದ್ದ ಪ್ಯಾರಾ ನ್ಯಾಶನಲ್ಸ್‌ನಲ್ಲಿ ಶೀತಲ್‌ಗೆ ಸೋಲುಣಿಸಿದ್ದರು.
ದುಬೈನಲ್ಲಿ 2025ರಲ್ಲಿ ನಡೆದಿದ್ದ ಏಶ್ಯನ್ ಯೂತ್ ಪ್ಯಾರಾ ಗೇಮ್ಸ್‌ನಲ್ಲಿ ಪಾದಾರ್ಪಣೆಗೈದ ನಂತರ ಪಾಯಲ್ ಆಡುತ್ತಿರುವ ಎರಡನೇ ಅಂತರ್‌ರಾಷ್ಟ್ರೀಯ ಸ್ಪರ್ಧೆ ಇದಾಗಿದೆ. ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡಿ ಶೀತಲ್ ವಿರುದ್ಧ ಜಯ ಸಾಧಿಸಿದ್ದಾರೆ.
ಒಡಿಶಾದ ಬಲಂಗೀರ್ ಜಿಲ್ಲೆಯ ವಲಸೆ ಕಾರ್ಮಿಕರ ಮಗಳಾದ ಪಾಯಲ್ 2015ರಲ್ಲಿ ಇಟ್ಟಿಗೆ ಗೂಡಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಮ್ಮ ಎರಡೂ ಕೈಕಾಲುಗಳನ್ನು ಕಳೆದುಕೊಂಡಿದ್ದರು.
2023-24ರಲ್ಲಿ ಶೀತಲ್ ಅವರೊಂದಿಗೆ ಕತ್ರಾದ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ ಪಡೆದಿದ್ದರು. ನಂತರ ಸೋನಪತ್‌ನಲ್ಲಿ ತರಬೇತಿ ಮುಂದುವರಿಸಿದ್ದರು.
2025ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆಗೈದ ನಂತರ ಪಾಯಲ್ ವೇಗವಾಗಿ ಶ್ರೇಯಾಂಕಗಳ ಮೂಲಕ ಮೇಲೇರಿದ್ದಾರೆ. ಜೈಪುರದಲ್ಲಿ ಶೀತಲ್ ವಿರುದ್ಧ ಜಯ ಸಾಧಿಸಿದ್ದ ಪಾಯಲ್ ಖೇಲೊ ಇಂಡಿಯಾ ಪ್ಯಾರಾ ಕ್ರೀಡಾಕೂಟದಲ್ಲಿ ಬೆಳ್ಳಿ ಹಾಗೂ ಈ ವರ್ಷದ ಆರಂಭದಲ್ಲಿ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಎರಡೂ ಕೈಗಳಿಲ್ಲದ ಶೀತಲ್‌ದೇವಿ 2022ರಲ್ಲಿ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿರುವ ಭಾರತದ ಅತ್ಯಂತ ಕಿರಿಯ ಪ್ಯಾರಾ ಬಿಲ್ಲುಗಾರ್ತಿಯಾಗಿದ್ದಾರೆ. 2024ರಲ್ಲಿ ಪ್ಯಾರಿಸ್‌ನಲ್ಲಿ ಮಿಕ್ಸೆಡ ಟೀಮ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.

