Dailyhunt Logo
  • Light mode
    Follow system
    Dark mode
    • Play Story
    • App Story
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ; ಅವರ ಕಳವಳಗಳಿಗೆ ಸ್ಪಂದಿಸಿ: AKUCFHR ಆಗ್ರಹ

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ; ಅವರ ಕಳವಳಗಳಿಗೆ ಸ್ಪಂದಿಸಿ: AKUCFHR ಆಗ್ರಹ

ಬೆಂಗಳೂರು : ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಯುವ ಜನತೆಯೊಂದಿಗೆ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ (AKUCFHR) ಒಗ್ಗಟ್ಟು ವ್ಯಕ್ತಪಡಿಸಿದ್ದು, ಕೇಂದ್ರ ಸರಕಾರವು ಮುಕ್ತತೆ ಮತ್ತು ಪರಸ್ಪರ ಗೌರವದ ಮನೋಭಾವದಿಂದ ಅವರೊಂದಿಗೆ ಸಂವಾದ ನಡೆಸಿ, ಅವರ ಕಳವಳಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಬೆಂಗಳೂರಿನ ಆರ್ಚ್‌ ಬಿಷಪ್ ಹಾಗೂ AKUCFHR ಅಧ್ಯಕ್ಷ ಪೀಟರ್ ಮಚಾದೊ, ದಿಲ್ಲಿಯಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಯ ಸುತ್ತಲಿನ ಇತ್ತೀಚಿನ ಬೆಳವಣಿಗೆಗಳು ಸಂಘಟನೆಯನ್ನು ದುಃಖಿತಗೊಳಿಸಿವೆ ಎಂದು ತಿಳಿಸಿದ್ದಾರೆ.

ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ತಮ್ಮ ಭವಿಷ್ಯದ ಕುರಿತು ಹೆಚ್ಚುತ್ತಿರುವ ಆತಂಕ ಮತ್ತು ಅನಿಶ್ಚಿತತೆ ವ್ಯಕ್ತವಾಗುತ್ತಿದೆ. ಯುವಜನರ ಆಕಾಂಕ್ಷೆಗಳು, ಭರವಸೆಗಳು ಮತ್ತು ವಿಶ್ವಾಸಕ್ಕೆ ಉದಾಸೀನತೆಯಿಂದಲ್ಲ, ಕರುಣೆ, ತಿಳುವಳಿಕೆ ಮತ್ತು ಅರ್ಥಪೂರ್ಣ ಸಂವಾದದ ಮೂಲಕ ಸ್ಪಂದಿಸಬೇಕು. ಯುವಕರು ದೇಶದ ಅತಿದೊಡ್ಡ ಶಕ್ತಿಯಾಗಿದ್ದು, ಅವರ ಧ್ವನಿಯನ್ನು ಸೂಕ್ಷ್ಮತೆ ಮತ್ತು ಗೌರವದಿಂದ ಆಲಿಸುವ ಹೊಣೆ ಸರಕಾರದ ಮೇಲಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ವಿದ್ಯಾರ್ಥಿ ಸಮುದಾಯದ ನೈಜ ಕಳವಳಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದುವರೆಗೆ ಯಾವುದೇ ರಚನಾತ್ಮಕ ಸಂವಾದ ಆರಂಭವಾಗಿಲ್ಲ ಎಂದು AKUCFHR ವಿಷಾದಿಸಿದೆ. ವಿದ್ಯಾರ್ಥಿಗಳೊಂದಿಗೆ ಪ್ರಾಮಾಣಿಕ ಹಾಗೂ ಗೌರವಯುತ ಸಂವಾದ ನಡೆಸುವುದಕ್ಕೆ ಸರಕಾರವು ಆದ್ಯತೆ ನೀಡಬೇಕು. ಪರಸ್ಪರ ಸಂವಾದ ಮತ್ತು ಆಲಿಸುವ ಮನೋಭಾವದ ಮೂಲಕವೇ ನ್ಯಾಯಯುತ ಹಾಗೂ ಶಾಂತಿಯುತ ಪರಿಹಾರ ಸಾಧ್ಯ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನ್ಯಾಯ, ಘನತೆ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಕಾನೂನುಬದ್ಧ ಹೋರಾಟದೊಂದಿಗೆ ವೇದಿಕೆ ತನ್ನ ಒಗ್ಗಟ್ಟು ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳು ಪ್ರದರ್ಶಿಸಿರುವ ಏಕತೆ, ಶಿಸ್ತು ಮತ್ತು ದೃಢಸಂಕಲ್ಪವು ಸ್ಪೂರ್ತಿದಾಯಕವಾಗಿದ್ದು, ಅದು ರಾಷ್ಟ್ರಕ್ಕೆ ಭರವಸೆಯ ದಾರಿದೀಪವಾಗಬೇಕು ಎಂದು ಹೇಳಿದೆ.

ಇದೇ ವೇಳೆ, ಪ್ರತಿಯೊಂದು ಹಂತದಲ್ಲೂ ಶಾಂತಿ, ಅಹಿಂಸೆ ಮತ್ತು ಪರಸ್ಪರ ಗೌರವವನ್ನು ಎತ್ತಿಹಿಡಿಯುವಂತೆ ಎಲ್ಲ ಸಂಬಂಧಪಟ್ಟವರನ್ನು ವೇದಿಕೆ ಆಗ್ರಹಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi