Dailyhunt Logo
  • Light mode
    Follow system
    Dark mode
    • Play Story
    • App Story
ವಿಝಿಂಜಂ ಬಂದರಿನ 49% ಪಾಲನ್ನು ಅಂತರಾಷ್ಟ್ರೀಯ ಕಂಪೆನಿಗೆ ಮಾರಾಟ ಮಾಡಲು ಮುಂದಾದ ಅದಾನಿ ಕಂಪೆನಿ; ವರದಿ

ವಿಝಿಂಜಂ ಬಂದರಿನ 49% ಪಾಲನ್ನು ಅಂತರಾಷ್ಟ್ರೀಯ ಕಂಪೆನಿಗೆ ಮಾರಾಟ ಮಾಡಲು ಮುಂದಾದ ಅದಾನಿ ಕಂಪೆನಿ; ವರದಿ

ತಿರುವನಂತಪುರಂ : ವಿಝಿಂಜಂ ಇಂಟರ್ನ್ಯಾಶನಲ್ ಸೀಪೋರ್ಟ್ ಲಿಮಿಟೆಡ್‌ನಲ್ಲಿ 49% ಪಾಲನ್ನು ಸ್ವಿಟ್ಜರ್ಲೆಂಡ್ ಮೂಲದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪೆನಿಯ (ಎಂಎಸ್‌ಸಿ) ಘಟಕ ʼಟರ್ಮಿನಲ್ ಇನ್ವೆಸ್ಟ್ಮೆಂಟ್ ಲಿಮಿಟೆಡ್ʼಗೆ (ಟಿಐಎಲ್) ಮಾರಾಟ ಮಾಡಲು ಅದಾನಿ ಪೋರ್ಟ್ಸ್ ನಿರ್ಧರಿಸಿದೆ ಎಂದು ವರದಿಯಾಗಿದೆ.

ಆದರೆ, ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎಂದು ಕೇರಳ ಸರಕಾರ ಹೇಳಿದೆ. ರಾಜ್ಯ ಸರಕಾರದ ಅನುಮತಿಯಿಲ್ಲದೆ ಬಂದರಿನ ಮಾಲಕತ್ವದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು thenewsminute.com ವರದಿ ಮಾಡಿದೆ.

ಟರ್ಮಿನಲ್ ಇನ್ವೆಸ್ಟ್ಮೆಂಟ್ ಲಿಮಿಟೆಡ್ (TiL), ಅದಾನಿ ವಿಝಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್ (AVPPL) ನ 49% ಪಾಲನ್ನು ಸುಮಾರು 12,000 ಕೋಟಿ ರೂ.ಗೆ ಖರೀದಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ. ಜೂನ್ 30ರಂದು ಘೋಷಿಸಲಾದ ಈ ಒಪ್ಪಂದ ಭಾರತದ ಬಂದರು ಮೂಲಸೌಕರ್ಯ ಕ್ಷೇತ್ರದಲ್ಲಿ ಇದುವರೆಗಿನ ಅತಿದೊಡ್ಡ ವಿದೇಶಿ ಖಾಸಗಿ ಹೂಡಿಕೆ ಆಗಿದೆ. ಆದರೆ, ಒಪ್ಪಂದ ಜಾರಿಯಾಗಲು ಸಂಬಂಧಪಟ್ಟ ನಿಯಂತ್ರಣ ಸಂಸ್ಥೆಗಳ ಅನುಮತಿ ಪಡೆಯಬೇಕಿದೆ.

ಈ ಬಗ್ಗೆ ಬುಧವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ವಿ.ಡಿ.ಸತೀಶನ್, ಸರಕಾರವು ಈ ಒಪ್ಪಂದದ ಬಗ್ಗೆ ಪತ್ರಿಕೆಗಳ ವರದಿಗಳ ಮೂಲಕ ಮಾತ್ರ ತಿಳಿದುಕೊಂಡಿದೆ. ಉದ್ದೇಶಿತ ಒಪ್ಪಂದದ ಬಗ್ಗೆ ಅದಾನಿ ಪೋರ್ಟ್ಸ್ ಯಾವುದೇ ಪತ್ರವನ್ನು ಕಳುಹಿಸಿಲ್ಲ ಅಥವಾ ಸರಕಾರಕ್ಕೆ ಅಧಿಕೃತವಾಗಿ ತಿಳಿಸಿಲ್ಲ ಎಂದು ಹೇಳಿದರು.

ರಿಯಾಯಿತಿ ಒಪ್ಪಂದದ ವಿಧಿ 5.3ನ್ನು ಉಲ್ಲೇಖಿಸಿದ ಸಿಎಂ ಸತೀಶನ್, ಸಂಬಂಧಿತ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕಂಪೆನಿಯ ಮಾಲಕತ್ವದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಪ್ರಾಧಿಕಾರವೆಂದರೆ ಕೇರಳ ಸರಕಾರ. ಶೇ.25ಕ್ಕಿಂತ ಹೆಚ್ಚು ಪಾಲನ್ನು ಮಾರಾಟ ಮಾಡಿದರೆ ಅದನ್ನು ಮಾಲಕತ್ವದ ಬದಲಾವಣೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕೇರಳ ಸರಕಾರದ ಅನುಮತಿ ಪಡೆಯದೆ ಮಾಲಕತ್ವ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಝಿಂಜಂ ಅಂತಾರಾಷ್ಟ್ರೀಯ ಬಂದರು ಯೋಜನೆ ಕೇರಳ ಸರಕಾರ ಮತ್ತು ಅದಾನಿ ವಿಝಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್ (AVPPL) ನಡುವಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಯೋಜನೆಯ ಮೊದಲ ಹಂತಕ್ಕೆ ಸುಮಾರು 8,867 ಕೋಟಿ ಹೂಡಿಕೆ ಮಾಡಲಾಗಿದ್ದು, ಇದರಲ್ಲಿ ಕೇರಳ ಸರಕಾರ ಸುಮಾರು 5,600 ಕೋಟಿ ಹಾಗೂ ಅದಾನಿ ಪೋರ್ಟ್ಸ್ ಸುಮಾರು 2,500 ಕೋಟಿ ಹೂಡಿಕೆ ಮಾಡಿದೆ.

"ಇಲ್ಲಿಯವರೆಗೆ ಈ ಬಗ್ಗೆ ಅದಾನಿ ಪೋರ್ಟ್ಸ್ ನಮ್ಮನ್ನು ಸಂಪರ್ಕಿಸಿಲ್ಲ. ಸಂಪರ್ಕಿಸಿದ ಬಳಿಕ ಅವರ ಪ್ರಸ್ತಾವನೆಯನ್ನು ನಾವು ಪರಿಶೀಲಿಸುತ್ತೇವೆ. ಪ್ರತಿಪಕ್ಷದ ನಾಯಕರು ವ್ಯಕ್ತಪಡಿಸಿರುವ ಕಳವಳಗಳನ್ನು ಕೂಡ ಪರಿಗಣಿಸುತ್ತೇವೆ" ಎಂದು ಕೇರಳ ಸರಕಾರದ ಮೂಲಗಳು ತಿಳಿಸಿದೆ.

ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಪಿಣರಾಯಿ ವಿಜಯನ್, ವಿಶ್ವದ ಅತಿದೊಡ್ಡ ಶಿಪ್ಪಿಂಗ್ ಕಂಪೆನಿಯಾದ ಎಂಎಸ್‌ಸಿಗೆ ಬಂದರಿನಲ್ಲಿ ಪ್ರಮುಖ ಪಾಲನ್ನು ಪಡೆಯಲು ಅವಕಾಶ ನೀಡುವುದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದರು. ಇದು ಏಕಸ್ವಾಮ್ಯವನ್ನು ಸೃಷ್ಟಿಸಬಹುದು ಮತ್ತು ಸ್ಪರ್ಧಾತ್ಮಕ ವಾತಾವರಣಕ್ಕೆ ಧಕ್ಕೆಯಾಗಬಹುದು ಎಂದು ಎಚ್ಚರಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi