ಹೊಸದಿಲ್ಲಿ, ಸೆ.16: ಕೊರೋನ ಸೋಂಕಿನ ಕಾರಣದಿಂದ 2020-21ರ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಭಾರತದ ವಿಮಾನಯಾನ ಸಂಸ್ಥೆಗಳ ಆದಾಯದಲ್ಲಿ 85.7ರಷ್ಟು % ಕುಸಿತವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ಸಿಂಗ್ ಪುರಿ ಹೇಳಿದ್ದಾರೆ.
ಭಾರತದ ವಿಮಾನಯಾನ ಸಂಸ್ಥೆಗಳು 2019ರ ಎಪ್ರಿಲ್-ಜೂನ್ ಅವಧಿಯಲ್ಲಿ 25,517 ಕೋಟಿ ಆದಾಯ ದಾಖಲಿಸಿದ್ದರೆ, 2020ರ ಎಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಆದಾಯ 3,651 ಕೋಟಿ ರೂ.ಗೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು 85.7% ಕಡಿಮೆಯಾಗಿದೆ ಎಂದು ಸಚಿವ ಸಿಂಗ್ ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಮೂಲಕ ತಿಳಿಸಿದರು.
ಭಾರತದ ವಿಮಾನಯಾನ ಸಂಸ್ಥೆಗಳ ಉದ್ಯೋಗಿಗಳ ಸಂಖ್ಯೆಯಲ್ಲೂ 7.07% ಇಳಿಕೆಯಾಗಿದ್ದು ಈ ವರ್ಷದ ಮಾರ್ಚ್ 31ರಂದು ಒಟ್ಟು 74,887 ಉದ್ಯೋಗಿಗಳಿದ್ದರೆ ಜುಲೈ 31ಕ್ಕೆ ಇದು 69,589ಕ್ಕೆ ಕುಸಿದಿದೆ. ಜೊತೆಗೆ, ವಿಮಾನನಿಲ್ದಾಣ ನಿರ್ವಾಹಕರ ಆದಾಯದಲ್ಲೂ ಇಳಿಕೆಯಾಗಿದ್ದು 2019ರ ಎಪ್ರಿಲ್-ಜೂನ್ ಅವಧಿಯಲ್ಲಿ 5,745 ಕೋಟಿ ರೂ.
2019ರ ಎಪ್ರಿಲ್-ಜೂನ್ ಅವಧಿಯಲ್ಲಿ ಏರ್‌ಇಂಡಿಯಾದ ಒಟ್ಟು ಆದಾಯ 7,066 ಕೋಟಿ ರೂ. ಆಗಿತ್ತು. 2020ರ ಎಪ್ರಿಲ್-ಜೂನ್ ಅವಧಿಯಲ್ಲಿ ಇದು 1,531 ಕೋಟಿ ರೂ.ಗೆ ಇಳಿಕೆಯಾಗಿದೆ. 2019-20ರ ಅವಧಿಯಲ್ಲಿ ದೇಶದಲ್ಲಿ 5.85 ಕೋಟಿ ದೇಶೀಯ ವಾಯುಸಂಚಾರದ ಪ್ರಮಾಣ 5.85 ಕೋಟಿಯಿದ್ದರೆ 2020ರ ಎಪ್ರಿಲ್-ಜೂನ್ ಅವಧಿಯಲ್ಲಿ ಇದು 1.2 ಕೋಟಿಗೆ ಇಳಿದಿದೆ. ಇದೇ ಅವಧಿಯಲ್ಲಿ ಅಂತರಾಷ್ಟ್ರೀಯ ವಾಯುಸಂಚಾರದ ಪ್ರಮಾಣವೂ ಕುಸಿದಿದೆ (2019ರಲ್ಲಿ 93.45 ಲಕ್ಷ, 2020ರಲ್ಲಿ 11.55 ಲಕ್ಷ) ಎಂದವರು ವಿವರಿಸಿದ್ದಾರೆ.

