ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಪದವು ಪ್ರದೇಶದಲ್ಲಿ 7 ವರ್ಷದ ಮಗುವಿನ ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು ದ್ವಿಚಕ್ರ ವಾಹನದಲ್ಲಿ (ಕೆಟಿಎಂ ಬೈಕ್) ಬಂದ ಅಪರಿಚಿತ ವ್ಯಕ್ತಿಯೋರ್ವ ಎಳೆದುಕೊಂಡು ಪರಾರಿಯಾದ ಘಟನೆ ಎ.12 ರಂದು ನಡೆದಿದೆ.
ಆರೋಪಿಯು ಮಗುವನ್ನು ಬೆದರಿಸಿ ಸರ ಕಳವು ಮಾಡಿದ್ದಾನೆ ಎನ್ನಲಾಗಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2026, ಕಲಂ 309(4) BNS 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದ್ದೆಂದು ಹೇಳಲಾಗುತ್ತಿರುವ ಕೆಟಿಎಂ ಬೈಕ್ ಸವಾರನೊಬ್ಬನ ಭಾವಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸರು, ಸಂಬಂಧಿತ ಬೈಕ್ ಸವಾರನನ್ನು ವಿಚಾರಣೆ ನಡೆಸಿದಾಗ, ಆತನಿಗೂ ಈ ಘಟನೆಗೂ ಯಾವುದೇ ಸಂಬಂಧ ಇಲ್ಲ ಎಂಬುದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಬೈಕ್ ಸವಾರನ ವಿರುದ್ಧ ಅನಗತ್ಯ ನಕಾರಾತ್ಮಕ ಅಭಿಪ್ರಾಯಗಳು ಉಂಟಾಗದಂತೆ, ಆತನ ಕುಟುಂಬದವರ ಮನವಿಯ ಮೇರೆಗೆ ಈ ಸ್ಪಷ್ಟೀಕರಣ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ನಿಜವಾದ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

