Wednesday, 16 Sep, 9.59 pm ವಾರ್ತಾಭಾರತಿ

ಕರಾವಳಿ
ವ್ಯಾಪಾರ ಪರವಾನಗಿ ನವೀಕರಿಸದ ಅಂಗಡಿಗಳು : ಸಹಾಯಕ ಆಯುಕ್ತ ಭೇಟಿ

ಭಟ್ಕಳ : ಪುರಸಭೆಯ ವ್ಯಾಪ್ತಿಗೊಳಪಡುವ ಅಂಗಡಿ ಮಳಿಗೆಗಳ ಟ್ರೇಡ್ ಲೈಸನ್ಸ್ (ವ್ಯಾಪಾರ ಪರವಾನಗಿ) ಬಾಕಿ ವಸೂಲಾತಿಗೆ ಸ್ವತಃ ಸಹಾಯ ಆಯುಕ್ತ ಭರತ್ ಸೆಲ್ವಂ ಮುಂದಾಗಿದ್ದು ಇದಕ್ಕೆ ಅಂಗಡಿಕಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿರುವ ಘಟನೆ ಬುಧವಾರ ಜರಗಿದೆ.

ತಾಲೂಕ ಪುರಸಭೆಯ ಕೆಲವು ಅಂಗಡಿಗಳ ಬಾಡಿಗೆದಾರರು ಹಲವಾರು ವರ್ಷಗಳಿಂದ ವ್ಯಾಪಾರ ಪರವಾನಗಿ ಹಣವನ್ನು ಕಟ್ಟದೆ ಬಾಕಿ ಇಟ್ಟ ಹಿನ್ನೆಲೆಯಲ್ಲಿ ನೋಟಿಸುಗಳನ್ನು ನೀಡಲಾಗಿತ್ತು ಆದರೆ ಕೆಲವು ಅಂಗಡಿಕಾರರು ನೊಟಿಸಿಗೆ ಯಾವುದೆ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲಾ ಈ ಹಿನ್ನೆಲೆಯಲ್ಲಿ ಬುದುವಾರ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತರು ಹಠಾತ್ ಭೇಟಿ ನೀಡುವುದರ ಮೂಲಕ ಅಂಗಡಿ ಮಳಿಗೆಯ ತಪಾಸಣೆಗೆ ಇಳಿದಿದ್ದರು. ಅಂಗಡಿಕಾರರು ಸಹಾಯಕ ಆಯುಕ್ತರ ಈ ಕ್ರಮವನ್ನು ಖಂಡಿಸಿದ್ದಾರೆ.

ಈ ಬಗ್ಗೆ ಪುರಸಭಾ ಅಂಗಡಿ ಬಾಡಿಗೆದಾರರು ಬಟ್ಟೆ ಅಂಗಡಿ ಮಾಲಕರು ಆದ ಮೆಡಿಕಲ್ ಅಬ್ದುಸ್ಸಮಿ ಮಾತನಾಡಿ, ಕಳೆದ ಐದು ತಿಂಗಳಿಂದ ಯಾವುದೇ ವ್ಯಾಪಾರ ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೋ ಬಾಕಿ ಹಣ ಪಾವತಿಸಲು ಹೇಳುತ್ತಿದ್ದು, ಅಧಿಕಾರಿಗಳ ಕ್ರಮ ಖಂಡನೀಯವಾಗಿದೆ. ಈಗ ಮಾರುಕಟ್ಟೆಯಲ್ಲಿ ಯಾರೂ ಕೂಡ ಬಾಕಿ ಹಣ ಕಟ್ಟುವ ಸ್ಥಿತಿಯಲ್ಲಿಲ್ಲ ಎಂದರು. ಸಹಾಯಕ ಆಯುಕ್ತರ ಈ ಕ್ರಮ ಸರಿಯಲ್ಲಾ ನನ್ನ ಅಂಗಡಿಯ ಟ್ಯಾಕ್ಸ್ ಎಲ್ಲಾ ರೀತಿಯ ಬಾಕಿಯನ್ನೂ ಕಟ್ಟಿರುತ್ತೇನೆ ಆದರೂ ನನ್ನ ಅಂಗಡಿಗೆ ಬೀಗ ಹಾಕಲು ಬಂದಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವ ಸಹಾಯಕ ಆಯುಕ್ತ ಭರತ್ ಸೆಲ್ವಂ, ಭಟ್ಕಳ ಪುರಸಭಾ ವ್ಯಾಪ್ತಿಯ ಅಂಗಡಿಕಾರರು ಕಳೆದ ಐದಾರು ವರ್ಷಗಳಿಂದ ವ್ಯಾಪಾರ ಪರವಾನಗಿ ( ಟ್ರೇಡ್ ಲೈಸನ್ಸ್) ಹಣವನ್ನು ಪಾವತಿಸಿಲ್ಲ. ಕೆಲವರು ಅನುಮತಿ ಯನ್ನೂ ಪಡೆದುಕೊಂಡಿಲ್ಲ. ಅಂತಹ ಅಂಗಡಿಗಳಿಗೆ ಭೇಟಿ ನೀಡಿ ಹಣ ಪಾವತಿಸುವಂತೆ ತಿಳಿಸಲಾಗಿದೆ. ಲಾಕ್ಡೌನ್ ನ ಅವಧಿಯಲ್ಲಿ ಹಣ ಕಟ್ಟದವರಿಗೆ ನಾನು ಬಾಕಿ ಕಟ್ಟಲು ಹೇಳುತ್ತಿಲ್ಲ ಬದಲಾಗಿ ಐದಾರು ವರ್ಷಗಳಿಂದ ಬಾಕಿಯನ್ನು ಪಾವತಿಸದೆ ಅನುಮತಿಯನ್ನೂ ಪಡೆಯದೆ ಅಂಗಡಿಗಳನ್ನು ನಡೆಸುತ್ತಿರುವವರಿಗೆ ಹಣ ಕಟ್ಟಲು ತಿಳಿಸಲಾಗಿದೆ ಎಂದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top