ಭುವನೇಶ್ವರ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ 'ಜೈ ಶ್ರೀ ರಾಮ್' ಎಂದು ಹೇಳುವಂತೆ ಒತ್ತಾಯಿಸಿದ ಪ್ರಕರಣದ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಮೇಲ್ವಿಚಾರಣೆ ಮಾಡಬೇಕೆಂದು ಒರಿಸ್ಸಾ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಸಾವಿತ್ರಿ ರಾಥೋ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ಗಮನಿಸಿ ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದರು.
"ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆದರೆ ಆರೋಪಗಳ ಸ್ವರೂಪ ಹಾಗೂ ಘಟನೆಯನ್ನು ವೀಡಿಯೊಗ್ರಾಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಆದ್ದರಿಂದ ಡಿಎಸ್‌ಪಿ ದರ್ಜೆಗೆ ಕಡಿಮೆಯಿಲ್ಲದ ಹಿರಿಯ ಅಧಿಕಾರಿ ತನಿಖೆಯನ್ನು ಮೇಲ್ವಿಚಾರಣೆ ಮಾಡುವುದು ಸೂಕ್ತ," ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಘಟನೆ ಈ ವರ್ಷದ ಜನವರಿ ಆರಂಭದಲ್ಲಿ ನಡೆದಿದೆ. ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಗುಂಪೊಂದು ಬಟ್ಟೆಗಳನ್ನು ಕಳಚಿ, ಕಾಲುಗಳನ್ನು ಹಗ್ಗದಿಂದ ಕಟ್ಟಿ, ಬೆತ್ತಲೆಯಾಗಿ ಬೀದಿಯಲ್ಲಿ ಎಳೆದು 'ಜೈ ಶ್ರೀ ರಾಮ್' ಎಂದು ಹೇಳಲು ಒತ್ತಾಯಿಸಿದ ಆರೋಪ ಕೇಳಿಬಂದಿದೆ.
ಘಟನೆಯ ವೀಡಿಯೊವನ್ನು ಬಹಲ್ದಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇನ್‌ಚಾರ್ಜ್‌ಗೆ ಕಳುಹಿಸಲಾಗಿದ್ದು, ಜನವರಿ 3ರಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ಮರುದಿನ ಜನವರಿ 4ರ ವೇಳೆಗೆ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಲ್ಲೆಗೆ ಒಳಗಾದ ವ್ಯಕ್ತಿಯ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ಅಥವಾ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ವರ್ಗಾಯಿಸುವಂತೆ ಕೋರಿದರು.
ಅರ್ಜಿಯಲ್ಲಿ ಅರ್ಜಿಯ ಪ್ರಕಾರ, ಬಿಎನ್‌ಎಸ್ ಕಲಂ 126(2), 296, 117(2), 133, 351(3), 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರೊಂದಿಗೆ, ಕಲಂ 111 (ಸಂಘಟಿತ ಅಪರಾಧ), 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯಗಳು), 302 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪದಗಳ ಬಳಕೆ), 117(4) (ಐದು ಅಥವಾ ಹೆಚ್ಚು ಮಂದಿಯ ಗುಂಪಿನಿಂದ ಉಂಟಾದ ಗಂಭೀರ ಹಾನಿ)ಗಳನ್ನು ಸೇರಿಸಬೇಕಾಗಿತ್ತು ಎಂದು ಅರ್ಜಿದಾರರು ವಾದಿಸಿದರು.
ರಾಜ್ಯ ಮತ್ತು ಪೊಲೀಸ್ ಅಧಿಕಾರಿಗಳ ಪರ ವಕೀಲರು, ಹಲ್ಲೆಗೆ ಒಳಗಾದ ವ್ಯಕ್ತಿಗೆ ಉಂಟಾದ ಗಾಯಗಳು ಸಣ್ಣ ಸ್ವರೂಪದ್ದಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಉಳಿದ ಆರೋಪಿಗಳನ್ನು ಬಂಧಿಸುವ ಕಾರ್ಯ ಮುಂದುವರಿದಿದ್ದು, ಪ್ರಕರಣ ತನಿಖೆಯಲ್ಲಿದೆ ಎಂದರು.
ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿದ ನ್ಯಾಯಾಲಯ, ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ಖಚಿತಪಡಿಸಲು ಹಿರಿಯ ಪೊಲೀಸ್ ಅಧಿಕಾರಿಯ ಮೇಲ್ವಿಚಾರಣೆ ಅಗತ್ಯವೆಂದು ಹೇಳಿ, ಅದಕ್ಕೆ ಅನುಗುಣವಾಗಿ ಆದೇಶ ನೀಡಿತು.
ಅರ್ಜಿದಾರರ ಪರ ವಕೀಲ ಪಿ.ಆರ್. ಛಟೋಯ್ ವಾದ ಮಂಡಿಸಿದರು. ರಾಜ್ಯ ಮತ್ತು ಪೊಲೀಸ್ ಅಧಿಕಾರಿಗಳ ಪರ ವಕೀಲ ಸಾರಥಿ ಜ್ಯೋತಿ ಮೊಹಂತಿ ಹಾಜರಿದ್ದರು.

