ಕೋಲ್ಕತ್ತಾ: 19 ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಕಾಣುತ್ತೇವೆ ನೋಡಿ. ತಮ್ಮ ಕೃತಿಗೆ ವಿರೋದ ಹೆಚ್ಚಾಗಿ ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸ್ರೀನ್ 2007ರಲ್ಲಿ ಕೋಲ್ಕತ್ತಾ ಬಿಡಬೇಕಾಗಿ ಬಂದಾಗ, ರಾಜ್ಯದಲ್ಲಿ ಸಿಪಿಎಂ ನೇತೃತ್ವದ ಎಡ ಮೈತ್ರಿಕೂಟದ ಸರ್ಕಾರವಿತ್ತು.
ಆ ಬಳಿಕ 2012ರಲ್ಲಿ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ರಚನೆಯಾದ ಮೇಲೂ, ತಸ್ಲಿಮಾ ನಸ್ರೀನ್‌ಗೆ ಕೋಲ್ಕತ್ತಾದ ಬಾಗಿಲುಗಳು ಬಂದ್ ಆಗಿದ್ದವು.
ಆದರೀಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಡಳಿತವಿದೆ. ಈ 19 ವರ್ಷಗಳಲ್ಲಿ ರಾಜ್ಯವು ಹಿಂದುತ್ವದ ಪ್ರಖರ ನೆಲೆಯಾಗಿ ಪರಿವರ್ತನೆಗೊಂಡಿದೆ. ಆದರೆ ಅದೇ ನೆಲ ತಸ್ಲಿಮಾ ನಸ್ರೀನ್ ಅವರನ್ನು ಆದರದಿಂದ ಬರಮಾಡಿಕೊಂಡಿದೆ. ಹೌದು, ತಮ್ಮ 'ದ್ವಿಖಂಡಿತೋ' ಕೃತಿಯ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದ ಕಾರಣಕ್ಕೆ 2007ರಲ್ಲಿ ಕೋಲ್ಕತ್ತಾ ತ್ಯಜಿಸಿದ್ದ ತಸ್ಲಿಮಾ ನಸ್ರೀನ್, ಬರೋಬ್ಬರಿ 19 ವರ್ಷಗಳ ಬಳಿಕ ನಗರಕ್ಕೆ ಮರಳಿ ಆಗಮಿಸಿದ್ದಾರೆ.
ದೀರ್ಘಕಾಲದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಸ ಮಾಡುತ್ತಿರುವ 63 ವರ್ಷದ ತಸ್ಲಿಮಾ ನಸ್ರೀನ್, ಇಂದು (ಜುಲೈ 31-ಶುಕ್ರವಾರ) ಕೋಲ್ಕತ್ತಾ ನಗರಕ್ಕೆ ಭೇಟಿ ನೀಡಿದರು. ರಾಜಧಾನಿಯ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ತಸ್ಲಿಮಾ ನಸ್ರೀನ್ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು.
ಸುದೀರ್ಘ ಕಾಯುವಿಕೆ:
ಬಾಂಗ್ಲಾದೇಶದಿಂದ ಪಲಾಯನಗೈದ ನಂತರ ಕೋಲ್ಕತ್ತಾವನ್ನೇ ತಮ್ಮ ನೆಲೆ ಮಾಡಿಕೊಂಡಿದ್ದ ತಸ್ಲಿಮಾ ನಸ್ರೀನ್, ತಮ್ಮ ಆತ್ಮಕಥೆಯ ವಿರುದ್ಧದ ಪ್ರತಿಭಟನೆಗಳ ಕಾರಣದಿಂದಾಗಿ 2007ರಲ್ಲಿ ನಗರವನ್ನು ತೊರೆಯಬೇಕಾಯಿತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ 2003ರಲ್ಲಿ ಆಗಿನ ಸಿಪಿಎಂ ನೇತೃತ್ವದ ಬಂಗಾಳ ಸರ್ಕಾರವು, ದ್ವಿಖಂಡಿಯೋ ಕೃತಿಯನ್ನು ನಿಷೇಧಿಸಿತ್ತು.ನಾಳೆ (ಆ.1-ಶನಿವಾರ) ರವೀಂದ್ರ ಸದನದಲ್ಲಿ ನಡೆಯಲಿರುವ ಮೂಲಭೂತವಾದದ ವಿರುದ್ಧದ ಪ್ರತಿಭಟನಾ ಕಾರ್ಯಕ್ರಮವೊಂದರಲ್ಲಿ ನಸ್ರೀನ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಖ್ಯಾತ ಲೇಖಕ ಶಿರ್ಷೇಂದು ಮುಖೋಪಾಧ್ಯಾಯ ಕೂಡ ಭಾಗವಹಿಸುವ ಸಾಧ್ಯತೆಯಿದೆ.
ಒಂದು ಕಾಲದಲ್ಲಿ ಇಸ್ಲಾಂ ಧರ್ಮಕ್ಕೆ ಅಪಮಾನವೆಸಗಿದ ಆರೋಪವನ್ನು ಬಾಂಗ್ಲಾದೇಶ ಸರ್ಕಾರದಿಂದ ಎದುರಿಸಿದ್ದ ಈ ಲೇಖಕಿ, ತಮ್ಮ ಗೌರವಾರ್ಥ ಏರ್ಪಡಿಸಲಾದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ, ತಮ್ಮ ಕೆಲವು ಕವಿತೆಗಳನ್ನು ವಾಚಿಸಲಿದ್ದಾರೆ ಮತ್ತು ಚರ್ಚೆಯೊಂದರಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ತವರು ಮನೆಗೆ ಬಂದ ಖುಷಿ:
ಇದಕ್ಕೂ ಮುನ್ನ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಸ್ಲಿಮಾ ನಸ್ರೀನ್, "ನನಗೆ ತವರು ಮನೆಗೆ ಮರಳಿ ಬಂದಷ್ಟೇ ಖುಷಿಯಾಗಿದೆ. ನಾನು ಎಂದಿಗೂ ಸ್ವಇಚ್ಛೆಯಿಂದ ಕೋಲ್ಕತ್ತಾ ನಗರವನ್ನು ತೊರೆದಿರಲಿಲ್ಲ ಮತ್ತು ಒಂದು ದಿನ ಇಲ್ಲಿಗೆ ಮರಳುವ ಭರವಸೆಯನ್ನು ಯಾವಾಗಲೂ ಹೊಂದಿದ್ದೆ" ಎಂದು ಭಾವುಕರಾಗಿ ಹೇಳಿದರು."ನಾನು ಎಂದಿಗೂ ಸ್ವಇಚ್ಛೆಯಿಂದ ಕೋಲ್ಕತ್ತಾವನ್ನು ತೊರೆದಿರಲಿಲ್ಲ; ಅಂದಿನ ಪಶ್ಚಿಮ ಬಂಗಾಳ ಸರ್ಕಾರವು ನನ್ನನ್ನು ರಾಜ್ಯದಿಂದ ಹೊರಹೋಗುವಂತೆ ಒತ್ತಾಯಿಸಿತ್ತು. ಆದರೂ ಒಂದು ದಿನ ನಾನು ಮರಳುತ್ತೇನೆ ಎಂಬ ಭರವಸೆ ನನಗಿತ್ತು. ವರ್ಷಗಳು ಉರುಳಿದವು, ಸರ್ಕಾರಗಳು ಬದಲಾದವು, ಆದರೂ ನನ್ನ ಮರಳುವಿಕೆಯ ದಾರಿ ಬಂದ್ ಆಗಿಯೇ ಇತ್ತು. ಈಗ ನಗರದ ಬಾಗಿಲುಗಳು ನನಗೆ ತೆರೆದುಕೊಂಡಿವೆ" ಎಂದು ತಸ್ಲಿಮಾ ನಸ್ರೀನ್ ನುಡಿದರು.
ಇನ್ನು ತಸ್ಲಿಮಾ ನಸ್ರೀನ್ ಭೇಟಿಯನ್ನು ಸ್ವಾಗತಿಸಿರುವ ಪಶ್ಚಿಮ ಬಂಗಾಳದ ಸಚಿವೆ ಅಗ್ನಿಮಿತ್ರಾ ಪಾಲ್, "ಹಿಂದಿನ ಸರ್ಕಾರದ ಅವಧಿಯಲ್ಲಿ ಅವರಿಗೆ ಮರಳಲು ಎಂದಿಗೂ ಅವಕಾಶ ನೀಡಲಾಗಿರಲಿಲ್ಲ. ವಿರೋಧ ಪಕ್ಷಗಳು ಜಾತ್ಯತೀತತೆಯ ಬಗ್ಗೆ ಬಹಳಷ್ಟು ಮಾತನಾಡುತ್ತವೆ. ಆದರೆ ಇವರ ಆಡಳಿತಾವಧಿಯಲ್ಲಿ ವಿವಿಧ ಸಮುದಾಯದ ಜನರನ್ನು ಕೇವಲ ರಾಜಕೀಯ ದಾಳಗಳಾಗಿ ಬಳಸಿಕೊಳ್ಳಲಾಯಿತು. ಇಂದು, ಸುವೆಂದು ಅಧಿಕಾರಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅಡಿಯಲ್ಲಿ, ತಸ್ಲಿಮಾ ನಸ್ರೀನ್ ಕೋಲ್ಕತ್ತಾ ನಗರಕ್ಕೆ ಮರಳುತ್ತಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

