2027ರ ಏಕದಿನ ವಿಶ್ವಕಪ್‌ಗೆ ಇನ್ನು 14 ತಿಂಗಳು ಬಾಕಿ ಉಳಿದಿದ್ದರೂ ಈ ಬಗ್ಗೆ ಈಗಾಗಲೇ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಕ್ರಿಕೆಟ್ ನಲ್ಲಿ ಎಷ್ಟೇ ಘಟಾನುಘಟಿ ತಂಡಗಳಿದ್ದರೂ ಭಾರತೀಯರಿಗೆ ಭಾರತ ತಂಡವೇ ಯಾವತ್ತೂ ಹಾಟ್ ಫೇವರಿಟ್ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಹೀಗಾಗಿ ಎಲ್ಲರ ಕಣ್ಣೂ ಇರುವುದು ಟೀಂ ಇಂಡಿಯಾ ಕಡೆಗೆ. ಈ ಪ್ರತಿಷ್ಠಿತ ಟೂರ್ನಿಗಾಗಿ ಭಾರತ ತಂಡದ ಸಂಯೋಜನೆ ಮತ್ತು ಆಟಗಾರರ ಆಯ್ಕೆಯ ಕುರಿತು ಚರ್ಚೆಗಳು ಹಾಗೂ ಊಹಾಪೋಹಗಳು ಈಗಾಗಲೇ ಪ್ರಾರಂಭವಾಗಿವೆ. ಯಾರು ಇರಬೇಕು? ಯಾರು ಅನಗತ್ಯ ಎಂಬುದೇ ಚರ್ಚೆಯ ಕೇಂದ್ರ ಬಿಂದು. ಭಾರತದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಅವರು ಇತ್ತೀಚೆಗೆ ಭಾರತ ಕ್ರಿಕೆಟ್ ನ ದಂತಕತೆ ಸುನಿಲ್ ಗವಾಸ್ಕರ್ ಆಯ್ಕೆ ಮಾಡಿದ ಸಂಭಾವ್ಯ ತಂಡವನ್ನು ವಿಶ್ಲೇಷಣೆ ಮಾಡಿದ್ದಾರೆ. ಮಾತ್ರವಲ್ಲದೆ ಈ ತಂಡಕ್ಕೆ 10ರಲ್ಲಿ 9 ಅಂಕಗಳನ್ನು ನೀಡಿದ್ದಾರೆ.
ವಿಶೇಷವೆಂದರೆ ಕೆಎಲ್ ರಾಹುಲ್ ಅವರು ಈ ತಂಡದಲ್ಲಿರುವ ಏಕೈಕ ಕನ್ನಡಿಗ. ಇನ್ನೂ ವಿಶೇಷವೆಂದರೆ ಕಳೆದ ಕೆಲ ವರ್ಷಗಳಿಂದ ರಾಷ್ಟ್ರೀಯ ತಂಡದಿಂದ ದೂರ ಉಳಿದಿರುವ ರಾಯಲ್ ಚಾಲೆಂಜರ್ಸ್ ತಂಡದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಲು ಅವರು ಮರೆತಿಲ್ಲ. ಹಾಗೆಂದು ಟಿ20ಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ 15ರ ಹರೆಯದ ಬಾಲಕ ವೈಭವ್ ಸೂುರ್ಯವಂಶಿಗೆ ಅವರು ಸ್ಥಾನ ನೀಡಿಲ್ಲ. ಸಮತೋಲನದಿಂದ ಕೂಡಿದ ಅವರ ತಂಡದ ಆಯ್ಕೆಗೆ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಅಗ್ರ ಕ್ರಮಾಂಕ ಬದಲಾಗೊಲ್ಲ
ಸುನಿಲ್ ಗವಾಸ್ಕರ್ ಅವರು ಪ್ರಸ್ತುತ ಏಕದಿನ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಲು ಹೋಗಿಲ್ಲ. ಅದರಂತೆಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ತಮ್ಮ ತಮ್ಮ ಸ್ಥಾನಗಳಲ್ಲೇ ಬ್ಯಾಟಿಂಗ್ ಮಾಡಲಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿದ್ದ ಅಗ್ರ ಐವರೇ ಇಲ್ಲೂ ಮುಂದುವರಿದಿದ್ದಾರೆ. ಪ್ರಸ್ತುತ ಅವರು ರನ್ ಗಳಿಸುತ್ತಿರುವ ಇಶಾನ್ ಕಿಶನ್ ಅವರನ್ನು 15ರ ಬಳಗಕ್ಕೆ ಆಯ್ಕೆ ಮಾಡಲಾಗಿದೆ.ಇನ್ನು ಗವಾಸ್ಕರ್ ಅವರ ಮಧ್ಯಮ ಕ್ರಮಾಂಕದ ಆಯ್ಕೆ ವಿಚಾರವಾಗಿ ಮಾತನಾಡಿರುವ ಆಕಾಶ್ ಚೋಪ್ರಾ ಅವರು ``ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ಕುಮಾರ್ ರೆಡ್ಡಿ. ಇಬ್ಬರೂ ಒಂದೇ ರೀತಿಯ ಆಲ್ ರೌಂಡರ್ ಆಟಗಾರರು. ಇದು ನನಗೆ ನಿಜಕ್ಕೂ ಇಷ್ಟವಾಯಿತು. ಬಹುಶಃ ನಿಮಗೆ ಸ್ಪಿನ್ ಬೌಲಿಂಗ್ ಆಲ್ ರೌಂಡರ್‌ಗಳನ್ನು ಆಡಿಸಲು ಸಾಧ್ಯವಾಗದಿರಬಹುದು. ಅದು ನನ್ನನ್ನು ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಕಡೆಗೆ ಕರೆದೊಯ್ಯುತ್ತದೆ. ಇಬ್ಬರೂ ಎಡಗೈ ಸ್ಪಿನ್ನರ್‌ಗಳು ಮತ್ತು ಅತ್ಯಂತ ಅನುಭವಿಗಳು. ಇಬ್ಬರೂ ಪರಸ್ಪರ ಸಮಾನವಾದ ಪರ್ಯಾಯ ಆಟಗಾರರು. ಸನ್ನಿ ಸರ್ ಆಯ್ಕೆ ಮಾಡಿದ ನಾಲ್ಕೂ ಆಲ್ ರೌಂಡರ್‌ಗಳು ಸಮಾನ ಪರ್ಯಾಯ ಆಟಗಾರರಾಗಿದ್ದಾರೆ. ಇದು ಅರ್ಥಪೂರ್ಣವಾಗಿದೆ." ಎಂದು ಆಕಾಶ್ ಚೋಪ್ರಾ ವೀಡಿಯೊ ಒಂದರಲ್ಲಿ ಹೇಳಿದ್ದಾರೆ.
"ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್. ಹರ್ಷಿತ್ ರಾಣಾ ಬ್ಯಾಟಿಂಗ್ ಕೂಡ ಮಾಡಬಲ್ಲ ಒಬ್ಬ ವೇಗದ ಬೌಲರ್. ಅವರು ತಂಡಕ್ಕೆ ಹೆಚ್ಚುವರಿ ಆಯ್ಕೆಯನ್ನು ನೀಡುತ್ತಾರೆ. ಅರ್ಷದೀಪ್ ಸಿಂಗ್ ಕೂಡ ಇದ್ದಾರೆ - ಎಡಗೈ ವೇಗದ ಬೌಲರ್ ಇರುವುದು ಕೆಟ್ಟದ್ದೇನಲ್ಲ. ಇದು 10ಕ್ಕೆ 8.5 ಅಥವಾ 9 ರೇಟಿಂಗ್ ನೀಡಬಹುದಾದ ಬಲವಾದ ತಂಡವಾಗಿದೆ. ಅಂತಿಮವಾಗಿ ಆಯ್ಕೆಯಾಗಬಹುದಾದ ತಂಡಕ್ಕೆ ಇದು ಅತ್ಯಂತ ಹತ್ತಿರದಲ್ಲಿದೆ ಎಂದು ನಾನು ಭಾವಿಸುತ್ತೇನೆ."
ಭುವಿ ಪದ ನಿಂತಿದ್ದ ಅಶ್ವಿನ್
ಇತ್ತೀಚೆಗೆ, ರವಿಚಂದ್ರನ್ ಅಶ್ವಿನ್ ಅವರು ತಮ್ಮ ವಿಶ್ವಕಪ್ ತಂಡದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಸೇರಿಸಲು ನಿರ್ಧರಿಸಿದ್ದರು. ಆದರೆ, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರಂತಹ ಆಟಗಾರರ ವಿಷಯಕ್ಕೆ ಬಂದರೆ, ನಿರ್ಧಾರವು ಯಾವ ಕಡೆಗೆ ಬೇಕಾದರೂ ಹೋಗಬಹುದು ಎಂದು ಅಶ್ವಿನ್ ಭಾವಿಸಿದ್ದರು.ಇಎಸ್‌ಪಿಎನ್‌ಕ್ರಿಕ್‌ಇನ್ಫೋ (ESPNcricinfo) ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಮಾತನಾಡಿದ ಅಶ್ವಿನ್, "ಭುವನೇಶ್ವರ್ ಕುಮಾರ್ ಅವರ ಆಯ್ಕೆಗೆ ನನ್ನ ಹೌದು ಎಂದಿದೆ. ನಾನು ಅವರೊಂದಿಗೆ ಮಾತನಾಡುತ್ತೇನೆ. ಅವರು ಪ್ರಥಮ ದರ್ಜೆ ಕ್ರಿಕೆಟ್, ವಿಜಯ್ ಹಜಾರೆ ಸೇರಿದಂತೆ ಎಲ್ಲಾ ಟೂರ್ನಿಗಳನ್ನು ಆಡುವಂತೆ ಮಾಡಿ ದಕ್ಷಿಣ ಆಫ್ರಿಕಾ ಸರಣಿಗೆ ಸಿದ್ಧಗೊಳಿಸುತ್ತೇನೆ. ಅಲ್ಲಿ ನಮಗೆ ಅವರ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಖಚಿತ ಆಯ್ಕೆಯ ತಂಡ
ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಭುವನೇಶ್ವರ್ ಕುಮಾರ್.ಸಂಭಾವ್ಯ ಆಯ್ಕೆ
ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ವರುಣ್ ಚಕ್ರವರ್ತಿ, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.ಆಯ್ಕೆಯಾಗದ ಆಟಗಾರರು
ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ರವಿ ಬಿಷ್ಣೋಯ್, ಶಿವಂ ದುಬೆ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್.
