Dailyhunt Logo
  • Light mode
    Follow system
    Dark mode
    • Play Story
    • App Story
7 ಮನೆಗಳಿಗೆ ತೆರವು ನೋಟಿಸ್‌ ಅರಣ್ಯ ಇಲಾಖೆ ಕ್ರಮ : ಬೆಳ್ತಂಗಡಿಯ ಕಡಿರುದ್ಯಾವರ ಬೊಳ್ಳೂರುಬೈಲ್‌ ನಿವಾಸಿಗಳಲ್ಲಿ ಆತಂಕ

7 ಮನೆಗಳಿಗೆ ತೆರವು ನೋಟಿಸ್‌ ಅರಣ್ಯ ಇಲಾಖೆ ಕ್ರಮ : ಬೆಳ್ತಂಗಡಿಯ ಕಡಿರುದ್ಯಾವರ ಬೊಳ್ಳೂರುಬೈಲ್‌ ನಿವಾಸಿಗಳಲ್ಲಿ ಆತಂಕ

Vijay Karnataka 5 days ago

ಬೆಳ್ತಂಗಡಿ: ಹಲವು ದಶಕಗಳಿಂದ ಕೃಷಿ ಮಾಡಿಕೊಂಡು, ಮನೆ ನಿರ್ಮಿಸಿ ತಲೆತಲಾಂತರಗಳಿಂದ ಬದುಕು ಕಟ್ಟಿಕೊಂಡು ಬಂದಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು, ನೀವು ಅತಿಕ್ರಮಣ ಮಾಡಿದ್ದೀರಿ, ತಕ್ಷಣ ಯಾಕೆ ತೆರವು ಗೊಳಿಸಬಾರದು ಎಂದು ನೋಟಿಸ್‌ ನೀಡಿರುವುದು ಕಡಿರುದ್ಯಾವರ ಗ್ರಾಮದ ಬೊಳ್ಳೂರುಬೈಲ್‌ನ ಏಳು ಕುಟುಂಬಗಳಲ್ಲಿ ಆತಂಕ ಮೂಡಿಸಿದೆ.

ಬೊಳ್ಳೂರುಬೈಲ್‌ನಲ್ಲಿ 35ಕ್ಕೂ ಅಧಿಕ ಕುಟುಂಬಗಳು ಹಲವು ದಶಕಗಳಿಂದ ವಾಸವಾಗಿದ್ದು, ಕೃಷಿಯನ್ನೇ ಪ್ರಮುಖ ಜೀವನಾಧಾರವನ್ನಾಗಿಸಿಕೊಂಡಿವೆ. ಇಲ್ಲಿನ ಕೆಲವು ನಿವಾಸಿಗಳಿಗೆ 1979 ರಲ್ಲಿಯೇ ಹಕ್ಕುಪತ್ರ ದೊರೆತಿದೆ. ಹಲವು ಕುಟುಂಬಗಳು 1989ರಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾರಣಗಳಿಂದ ಹಕ್ಕುಪತ್ರ ಇನ್ನೂ ದೊರೆತಿಲ್ಲ. ಆದರೆ ಈಗ ಏಕಾಏಕಿ ನೋಟಿಸ್‌ ಜಾರಿ ಮಾಡಿದೆ.

2002-03ರಲ್ಲಿ ಈ ಪ್ರದೇಶದಲ್ಲಿ ಕೆಲವರಿಗೆ ಅರಣ್ಯ ಇಲಾಖೆ ಒಕ್ಕೆಲೆಬ್ಬಿಸುವ ಬಗ್ಗೆ ನೋಟಿಸ್‌ ಜಾರಿ ಮಾಡಿತ್ತು. ಇದುವರೆಗೆ ಮನೆ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆಗಸ್ಟ್‌ನಲ್ಲಿ ಎರಡನೇ ಹಂತದ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ತಮ್ಮ ಬದುಕಿನ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿವಾಸಿಗಳು ಅರಣ್ಯ ಇಲಾಖೆ ಕಚೇರಿಗೆ ತೆರಳಿದರೂ, ಅಧಿಕಾರಿಗಳು ಬೇರೆ ಕೆಲಸದ ಕಾರಣ ಹೇಳಿ ವಿಚಾರಣೆ ನಡೆಸದೆ ವಾಪಸ್‌ ಕಳುಹಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಹಿಂದೆ ಒಕ್ಕಲೆಬ್ಬಿಸಿದ್ದ ಇಲಾಖೆ:

ಬೆಳ್ತಂಗಡಿ ತಾಲೂಕಿನಲ್ಲಿ ಈ ಹಿಂದೆ ಎರಡು ಪ್ರಕರಣಗಳಲ್ಲಿ ಅರಣ್ಯ ಇಲಾಖೆ ನೋಟಿಸ್‌ ನೀಡಿ ಎರಡು ಕುಟುಂಬಗಳ ಕೃಷಿ ನಾಶಗೊಳಿಸಿ ಒಕ್ಕಲೆಬ್ಬಿಸುವ ಕಾರ್ಯ ಮಾಡಿದೆ. ಶಿಬಾಜೆ ಗ್ರಾಮದಲ್ಲಿ ಎರಡು ಎಕರೆ ಕೃಷಿ ನಾಶಪಡಿಸಿ ಕುಟುಂಬವನ್ನು ಒಕ್ಕಲೆಬ್ಬಿಸಿದ್ದರು. ಮಲವಂತಿಗೆ ಗ್ರಾಮದ ದಿಡುಪೆ ಅರಸಿನಮಕ್ಕಿ ನಿವಾಸಿ ಜೋಸೆಫ್‌ ಎಂಬವರಿಗೆ ಸೇರಿದ ನಾಲ್ಕು ಎಕರೆ ಜಾಗವನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ವಶಪಡಿಸಿ ಕುಟುಂಬಕ್ಕೆ ಯಾವುದೇ ಪರಿಹಾರ ನೀಡದೆ ಒಕ್ಕಲೆಬ್ಬಿಸಲಾಗಿತ್ತು.

ಅಕ್ರಮ ಸಕ್ರಮ ಹಕ್ಕುಪತ್ರ ಇದ್ದರೂ ನೋಟಿಸ್‌:

ಬೆಳ್ತಂಗಡಿ ತಾಲೂಕಿನಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಗೊಂದಲಗಳಿಂದಾಗಿ ಸಾವಿರಾರು ಕೃಷಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಸಾವಿರಾರು ಕುಟುಂಬಗಳು ಇನ್ನೂ ತಮ್ಮ ಕೃಷಿ ಭೂಮಿಗೆ ಸಮರ್ಪಕ ದಾಖಲೆ ಹೊಂದಿಲ್ಲ. ಹಲವು ಕುಟುಂಬಗಳಿಗೆ ಅಕ್ರಮ ಸಕ್ರಮದಡಿ ಹಕ್ಕುಪತ್ರಗಳಿದ್ದರೂ ಅವರಿಗೂ ನೋಟಿಸ್‌ ನೀಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಅಕ್ರಮ ಸಕ್ರಮ ಹಕ್ಕುಪತ್ರಗಳನ್ನು ರದ್ದುಪಡಿಸಿ ಒಕ್ಕಲೆಬ್ಬಿಸುವ ಕಾರ್ಯವನ್ನು ಇಲಾಖೆ ಮಾಡಿದೆ. ಇದು ತಾಲೂಕಿನ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಕುಟುಂಬಗಳಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. (ಚಾರ್ಮಾಡಿ ಮಾದಕ ವಸ್ತುಗಳ ಸಾಗಾಟ)

ಹಿರಿಯರು ಕಷ್ಟಪಟ್ಟು ಈ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸಿದ್ದಾರೆ. ನಮ್ಮ ಬದುಕಿಗೂ ಕೃಷಿಯೇ ಆಧಾರ. ಇದು ನಮ್ಮ ಭೂಮಿ, ಇದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಇಲಾಖೆ ನಮಗೆ ನ್ಯಾಯ ಒದಗಿಸಬೇಕು ಎಂದಿದ್ದಾರೆ ದೀಕ್ಷಿತ್‌, ಬೊಳ್ಳೂರುಬೈಲ್‌ ನಿವಾಸಿ

ಅಗತ್ಯ ದಾಖಲೆ ಹೊಂದಿರುವವರಿಗೆ ಯಾವುದೇ ಸಮಸ್ಯೆ ಇಲ್ಲ. ನೋಟಿಸ್‌ ಬಂದಿರುವವರು ತಮ್ಮಲ್ಲಿರುವ ದಾಖಲೆಗಳನ್ನು ಕೂಡಲೇ ಇಲಾಖೆಗೆ ಸಲ್ಲಿಸಬೇಕು ಎಂದಿದ್ದಾರೆ ಮಹೇಶ್‌ ದೇವಾಡಿಗ, ಆರ್‌ಎಫ್‌ಒ, ಬೆಳ್ತಂಗಡಿ
Dailyhunt
Disclaimer: This content has not been generated, created or edited by Dailyhunt. Publisher: Vijay Karnataka