Dailyhunt Logo
  • Light mode
    Follow system
    Dark mode
    • Play Story
    • App Story
ಆರೋಪಗಳ ಆಧಾರದಲ್ಲಿ ಕೇಸ್‌ ದಾಖಲಿಸಲಾಗದು; ಇದು ಕಾನೂನಿನ ದುರುಪಯೋಗ: ಕರ್ನಾಟಕ ಹೈಕೋರ್ಟ್‌

ಆರೋಪಗಳ ಆಧಾರದಲ್ಲಿ ಕೇಸ್‌ ದಾಖಲಿಸಲಾಗದು; ಇದು ಕಾನೂನಿನ ದುರುಪಯೋಗ: ಕರ್ನಾಟಕ ಹೈಕೋರ್ಟ್‌

Vijay Karnataka 3 months ago

ಬೆಂಗಳೂರು: ವಿದೇಶದಲ್ಲಿ ನೆಲೆಸಿರುವ ಮಹಿಳೆ (ನಾದಿನಿ) ಫೋನ್‌ ಕರೆಗಳ ಮೂಲಕ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದ ಮೇರೆಗೆ ಪ್ರಕರಣ ದಾಖಲಿಸುವುದು ಕಾನೂನಿನ ದುರುಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌, ಲಕ್ಸಂಬರ್ಗ್‌ನಲ್ಲಿ ನೆಲೆಸಿರುವ ನಾದಿನಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಲಕ್ಸಂಬರ್ಗ್‌ನಲ್ಲಿನೆಲೆಸಿರುವ ಬೆಂಗಳೂರು ಮೂಲದ ಎನ್‌. ವಿದ್ಯಾಶ್ರೀ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಈ ಆದೇಶ ನೀಡಿದೆ.

''ಅಲ್ಲದೆ, ನಿಖರವಾದ ಪುರಾವೆಗಳಿಲ್ಲದೆ ಕೇವಲ ಸಾಮಾನ್ಯ ಆರೋಪಗಳ ಆಧಾರದ ಮೇಲೆ ಕ್ರಿಮಿನಲ್‌ ಮೊಕದ್ದಮೆ ಮುಂದುವರಿಸಲು ಸಾಧ್ಯವಿಲ್ಲ. ನಾದಿನಿಯು 2017 ರಲ್ಲೇ ವಿವಾಹವಾಗಿ ಲಕ್ಸಂಬರ್ಗ್‌ನಲ್ಲಿ ನೆಲೆಸಿದ್ದಾರೆ. ಕೇವಲ ಫೋನ್‌ ಕರೆಗಳ ಮೂಲಕ ಪ್ರಚೋದನೆ ನೀಡುತ್ತಿದ್ದರು ಎಂಬುದು ಐಪಿಸಿ ಸೆಕ್ಷನ್‌ 498 'ಎ' ಅಡಿ ಅಪರಾಧವಾಗುವುದಿಲ್ಲ. ಇಂತಹ ಆರೋಪಗಳನ್ನು ಒಪ್ಪಿಕೊಂಡರೆ, ಸಂಬಂಧಿಕರು ಸೊಸೆಗೆ ಮಾಡುವ ಪ್ರತಿಯೊಂದು ದೂರವಾಣಿ ಸಂಭಾಷಣೆಯನ್ನೂ ಕ್ರಿಮಿನಲ್‌ ಅಪರಾಧ ಎಂದು ಬಿಂಬಿಸುವ ಅಪಾಯವಿರುತ್ತದೆ,'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

''ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿಐಪಿಸಿ ಸೆಕ್ಷನ್‌ 498 'ಎ' (ವರದಕ್ಷಿಣೆ ಕಿರುಕುಳ), 312 (ಗರ್ಭಪಾತ), 504(ಉದ್ದೇಶಪೂರ್ವಕವಾಗಿ ಅವಮಾನಿಸಿ ಶಾಂತಿ ಭಂಗ) ಮತ್ತು 506 (ಕ್ರಿಮಿನಲ್‌ ಬೆದರಿಕೆ) ಅಡಿ ಯಾವುದೇ ಪ್ರಾಥಮಿಕ ಅಂಶಗಳು ಕಂಡು ಬಂದಿಲ್ಲ. ಆದ್ದರಿಂದ ತನಿಖೆ ಮುಂದುವರಿಸಲು ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿನಡೆಯುತ್ತಿರುವ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಲಾಗುತ್ತಿದೆ. ಆದರೆ, ಇತರೆ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಯಲಿದೆ,'' ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಅರ್ಜಿಯಲ್ಲಿಎರಡನೇ ಪ್ರತಿವಾದಿಯಾಗಿರುವ ದೂರುದಾರ ಮಹಿಳೆ ಲಾವಣ್ಯ ಎಂಬುವರು ರಾಕೇಶ್‌ ಎಂಬುವವರನ್ನು 2022ರ ಜುಲೈ 23ರಂದು ವಿವಾಹವಾಗಿದ್ದರು. ವಿವಾಹದ ಒಂದು ವರ್ಷದ ನಂತರ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿಲಾವಣ್ಯ ಅವರು ಪತಿ, ಅತ್ತೆ, ಮಾವ ಹಾಗೂ ಲಕ್ಸಂಬರ್ಗ್‌ನಲ್ಲಿವಾಸವಾಗಿರುವ ನಾದಿನಿ ವಿದ್ಯಾಶ್ರೀ (ಅರ್ಜಿದಾರರು) ವಿರುದ್ಧ ವರದಕ್ಷಿಣೆ ಕಿರುಕುಳ, ಬಲವಂತದ ಗರ್ಭಪಾತ ಹಾಗೂ ಜೀವಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದರು.

ತಮಗೆ ಹೆಚ್ಚಿನ ವರದಕ್ಷಿಣೆ ತರುವಂತೆ ನಾದಿನಿ ಲಕ್ಸಂಬರ್ಗ್‌ನಿಂದಲೇ ಪೋಷಕರಿಗೆ ಫೋನ್‌ ಮಾಡಿ ಪ್ರಚೋದಿಸುತ್ತಿದ್ದರು ಮತ್ತು ತಮಗೂ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿಆರೋಪಿಸಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka