Dailyhunt
ಆತ್ಮಹತ್ಯೆಗೆ ಶರಣಾದ ರಂಗಭೂಮಿ ನಟ ಮುರಳಿ: ಕಾರಣ ನಿಗೂಢ!

ಆತ್ಮಹತ್ಯೆಗೆ ಶರಣಾದ ರಂಗಭೂಮಿ ನಟ ಮುರಳಿ: ಕಾರಣ ನಿಗೂಢ!

Vijay Karnataka 2 days ago

ಬೆಂಗಳೂರಿನ ಸಾರಕ್ಕಿ ಕೆರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಮುರಳಿ ಅವರ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಮೃತದೇಹವನ್ನ ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜೆಪಿ ನಗರ ಠಾಣೆಯ ಪೊಲೀಸರು ಮೃತದೇಹವನ್ನ ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಯುವ ನಟ ಮುರಳಿ!

ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಮುರಳಿ ಅವರು, ಕಳೆದ ಹಲವು ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು. ಕೇವಲ ವೇದಿಕೆಯ ನಾಟಕಗಳಷ್ಟೇ ಅಲ್ಲದೇ, ಹಲವಾರು ಕಿರುಚಿತ್ರಗಳಲ್ಲಿಯೂ ಅಭಿನಯಿಸುವ ಮೂಲಕ ತಮ್ಮ ಅದ್ಬುತ ನಟನಾ ಕೌಶಲ್ಯದಿಂದ ಗುರುತಿಸಿಕೊಂಡಿದ್ದಾರೆ. ಅವರೊಬ್ಬ ಪರಿಶ್ರಮಿ ಮತ್ತು ಶಿಸ್ತಿನ ಕಲಾವಿದ ಎಂದು ಅವರ ಸಹಿದ್ಯೋಗಿಗಳು ನೆನಪಿಸಿಕೊಳ್ತಾರೆ. ರಂಗಭೂಮಿಯ ಹಲವು ಪ್ರಮುಖ ಪ್ರಯೋಗಗಳಲ್ಲಿ ಪಾಲ್ಗೊಂಡಿದ್ದ ಅವರು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣುವ ಎಲ್ಲ ಲಕ್ಷಣಗಳನ್ನ ಹೊಂದಿದ್ದರು.

ನಗುವಿನ ಹಿಂದಿನ ನೋವು ಯಾರಿಗೂ ತಿಳಿಯಲಿಲ್ಲ!

ಯುವ ನಟ ಮುರಳಿ ಅವರ ಈ ಹಠಾತ್‌ ನಿರ್ಧಾರ ಕಲಾ ಸಮುದಾಯಕ್ಕೆ ಆಘಾತ ನೀಡಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೂರೆ ಅವರು ಮುರಳಿ ಅವರ ಸಾವಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. "ರಂಗಶಂಕರದ ಬಳಿ ಎದುರಿಗೆ ಸಿಕ್ಕಾಗ ಹಾಯ್‌ ಹೇಳುತ್ತಿದ್ದ ಆ ನಗು ಈಗ ಮರೆಯಾಗಿದೆ. ನಗುವಿನ ಹಿಂದಿನ ನೋವು ಯಾರಿಗೂ ತಿಳಿಯಲಿಲ್ಲ.. ಅವರ ಈ ನಿರ್ಧಾರ ಬದುಕಿರುವವರಿಗೆ ದೀರ್ಘಕಾಲದ ನೋವನ್ನ ನೀಡುತ್ತದೆ" ಎಂದು ಅವರು ವಿಷಾದಿಸಿದ್ದಾರೆ.

ನಟ ವೆಂಕಟೇಶ್‌ ಪ್ರಸಾದ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಭಾವುಕವಾಗಿ ಪೋಸ್ಟ್‌ ಹಂಚಿಕೊಂಡಿದ್ದು, "ಸುಂದರ ಮುಖದ ಗೆಳೆಯ ಇಂದು ನಮ್ಮನ್ನೆಲ್ಲ ಬಿಟ್ಟೋದ. ತನ್ನ ನೋವನ್ನ ನಮ್ಮ ಬಳಿ ಒಂದೇ ಒಂದು ನಿಮಿಷ ಹಂಚಿಕೊಂಡಿದ್ದರೂ, ಏನಾದರೂ ಪರಿಹಾರ ಹುಡುಕಬಹುದಿತ್ತು. ಅವನ ನೋವನ್ನ ಅರ್ಥ ಮಾಡಿಕೊಳ್ಳದ ನಮಗೂ ಈ ಪಾಪಪ್ರಜ್ಞೆ ಕಾಡದೆ ಬಿಡದು" ಎಂದು ಕಂಬನಿ ಮಿಡಿದಿದ್ದಾರೆ.

ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುತ್ತಿದ್ದ ಸಮಯದಲ್ಲಿಯೇ ಮುರಳಿ ಅವರು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ವೃತ್ತಿ ಬದುಕಿನ ಸಂಕಷ್ಟಗಳೋ ಅಥವಾ ವೈಯಕ್ತಿಕ ಸಮಸ್ಯೆಗಳೋ ಎಂಬುದು ಪೊಲೀಸ್‌ ತನಿಖೆಯಿಂದಷ್ಟೇ ತಿಳಿಯಬೇಕಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka