ಗೋೋಲ್ಡನ್ ಸ್ಟಾರ್ʼ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಯ ಯಶಸ್ವಿ ದಾಂಪತ್ಯ ಜೀವನಕ್ಕೆ ಈಗ ಬರೋಬ್ಬರಿ 18 ವರ್ಷಗಳ ಸಂಭ್ರಮ. ಸದಾ ತೆರೆಮರೆಯಲ್ಲಿದ್ದುಕೊಂಡು ಪತಿಯ ಸಿನಿಮಾಗಳಿಗೆ ಬೆನ್ನೆಲುಬಾಗಿ ನಿಲ್ತಿದ್ದ ಶಿಲ್ಪಾ ಗಣೇಶ್, ಇದೀಗ ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ʻಪಿಚ್ಚರ್ʼ ಎಂಬ ಕನ್ನಡ ಮತ್ತು ತುಳು ದ್ವಿಭಾಷಾ ಸಿನಿಮಾದ ʻಗೋಕುಲದ ರಾಧೆ..ʼ ಸಾಂಗ್ ಮೂಲಕ ಗಾಯಕಿಯಾಗಿ ಬಡ್ತಿ ಪಡೆದಿರುವ ಶಿಲ್ಪಾ ಗಣೇಶ್, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಜರ್ನಿ ಹಾಗೂ ಗಣೇಶ್ ಜೊತೆಗಿನ ಮದುವೆ ದಿನಗಳ ರೋಚಕ ಘಟನೆಗಳನ್ನ ಶೇರ್ ಮಾಡಿಕೊಂಡಿದ್ದಾರೆ.
2008ರಲ್ಲಿ ಗಣೇಶ್ ಹಾಗೂ ಶಿಲ್ಪಾ ಮದುವೆಯಾದಾಗ ಕರ್ನಾಟದಾದ್ಯಂತ ಮಹಿಳಾ ಅಭಿಮಾನಿಗಳಿಗೆ ಹಾರ್ಟ್‌ಬ್ರೇಕ್ ಆಗಿತ್ತು. ಅಂದಿನ ಪರಿಸ್ಥಿತಿ ಹಾಗೂ ಕ್ರೇಜ್ ಹೇಗಿತ್ತು ಅನ್ನೋದರ ಬಗ್ಗೆ ಮಾತನಾಡಿದ ಶಿಲ್ಪಾ ಗಣೇಶ್, "ನನಗೆ ಖುಷಿ ಇತ್ತು. ಸಿನಿಮಾ ಸ್ಟಾರ್ಸ್ ಅಂದ್ರೆ ಹೀಗೆ ಇರ್ತಾರೆ, ಹೀಗೆ ಇಷ್ಟ ಪಡ್ತಾರೆ ಅಂತ ನನಗೆ ಗೊತ್ತಿತ್ತು. ಆದರೆ, ಆಮೇಲೆ ಆಮೇಲೆ ಗೊತ್ತಾಗಲಿಕ್ಕೆ ಶುರುವಾಯ್ತು, ಈ ತರಹ ಫ್ಯಾನ್ಸ್ ಯಾರಿಗೂ ಇರ್ಲಿಲ್ಲ ಅಂತೆ. ಮನೆಗೆ ಎಲ್ಲಾ ಬಂದು ರಾತ್ರಿ-ಹಗಲು ಅಂತ ನೋಡದೇ, ಬಾಗಿಲು ತಟ್ಟುತ್ತಿದ್ರು. ನನಗೆ ಅರ್ಥ ಆಗ್ತಿರ್ಲಿಲ್ಲ ಏನು ನಡೀತಾ ಇದೆ ಅಂತ. ಕೆಲವೊಂದು ಶಾಕಿಂಗ್ ಘಟನೆಗಳೆಲ್ಲ ಇದೆ. ನಾನು ಹೇಳಿಕೊಳ್ಳೋದಕ್ಕೂ ಆಗಲ್ಲ. ಅಂತಹದ್ದೆಲ್ಲಾ ಫ್ಯಾನ್ ಮೂಮೆಂಟ್ಸ್ ಇದೆ" ಎಂದಿದ್ದಾರೆ.
ಮೊದಲ ಬಾರಿಗೆ ಮೈಕ್ ಹಿಡಿದು ಹಾಡಿರುವ ಬಗ್ಗೆ ಸಂಭ್ರಮ ಹಂಚಿಕೊಂಡ ಶಿಲ್ಪಾ ಗಣೇಶ್, "ತುಂಬಾ ಖುಷಿ ಇದೆ, ಅದು ಕೂಡ ಜಸ್ಕರಣ್ ಸಿಂಗ್ ಜೊತೆ ಹಾಡಿರೋದು. ಹಾಡು ಹಾಡ್ತಿದ್ದೆ. ಆದರೆ, ನಾವು ನಿರ್ಮಾಣ ಮಾಡಿರೋ ಸಿನಿಮಾದಲ್ಲಿ ಹಾಡಬೇಕು ಅಂದುಕೊಂಡಿದ್ದೆ. ಅದು ನೆರವೇರಿತು. ನಾನು ಹಾಡ್ತೀನಿ ಅಂತ ಗಣೇಶ್‌ಗೆ ಗೊತ್ತಿತ್ತು. ನಮ್ಮ ಸಿನಿಮಾನೇ ಅಲ್ವಾ? ಇದರಲ್ಲೇ ಹಾಡು ಅಂತ ಹೇಳಿದ್ರು" ಎಂದಿದ್ದಾರೆ.
ತಮ್ಮ ಮಾತೃಭಾಷೆಯಾದ ತುಳು ಸಿನಿಮಾವನ್ನ ನಿರ್ಮಾಣ ಮಾಡಿದ ಉದ್ದೇಶ ಹಾಗೂ ಸಿನಿಮಾಗಳ ಕ್ರೇಜ್ ಬಗ್ಗೆ ಮಾತನಾಡುತ್ತಾ, "ಸಿನಿಮಾಗಳ ಮೇಲೆ ಕ್ರೇಜ್ ನನಗೆ ಯಾವತ್ತೂ ಇತ್ತು. ಯಾವಾಗಲೂ ಇತ್ತು. ಚಿಕ್ಕವಯಸ್ಸಿನಿಂದ ನಾನು ಸ್ಕೂಲಿಂಗ್ ಎಲ್ಲಾ ಆಗಿದ್ದು ಬಾಂಬೆನಲ್ಲಿ. ಆಗೆಲ್ಲಾ ಹೆಚ್ಚು ಹಿಂದಿ ಸಿನಿಮಾ ಕ್ರೇಜ್ ಇತ್ತು. ನಮ್ಮೂರಿನ ಕಡೆ ನಾವು ಜಾಸ್ತಿ ಸಿನಿಮಾಗಳನ್ನ ನೋಡಲ್ಲ. ಗಣೇಶ್‌ನ ಮದುವೆ ಆದ ಒಂದು ವರ್ಷದೊಳಗೆ ನಾವು ಪ್ರೊಡಕ್ಷನ್ ಶುರು ಮಾಡಿದ್ದೆವು. ಮಳೆಯಲಿ ಜೊತೆಯಲಿ ಮಾಡಿದ್ದೆವು, ಅದು ದೊಡ್ಡ ಹಿಟ್ ಆಯ್ತು. ಹಾಡುಗಳೆಲ್ಲಾ ಹಿಟ್ ಆಯ್ತು. ಅಲ್ಲಿಂದ ಸಿನಿಮಾಗಳನ್ನ ಮಾಡಬೇಕು ಅನ್ನೋ ಹುಮ್ಮಸ್ಸು ಹೆಚ್ಚಾಯ್ತು" ಎಂದರು ಶಿಲ್ಪಾ ಗಣೇಶ್.
ಮುಂದುವರೆದು, ತುಳು ಸಿನಿಮಾ ನಿರ್ಮಾಣ ಯಾಕೆ ಅನ್ನೋ ಪ್ರಶ್ನೆಗೆ, "ಒಂದು ಪ್ರೀತಿ, ನಮ್ಮ ತುಳು ಭಾಷೆನೂ ಒಂದು ದೊಡ್ಡ ಮಟ್ಟಕ್ಕೆ ಹೋಗಬೇಕು ಅನ್ನೋದು ಆಸೆ. ಇತ್ತೀಚಿನ ದಿನಗಳಲ್ಲಿ ತುಂಬಾ ಚೆನ್ನಾಗಿ ಆಗ್ತಾ ಇದೆ. ತುಳುವಿನಲ್ಲಿ ಕಾಮಿಡಿಗೆ ನಾವು ತುಂಬಾ ಆದ್ಯತೆ ಕೊಡ್ತೇವೆ. ಎಂಟರ್‌ಟೈನ್‌ಮೆಂಟ್‌ನ ನಾವು ಎಂಟರ್‌ಟೈನ್‌ಮೆಂಟ್ ರೀತಿಯೇ ನೋಡ್ತೇವೆ. ಅದೇನೇ ಸ್ಟ್ರೆಸ್ ಇದ್ದರೂ ಕೂಡ ಅಬ್ಬಾ.. ಅಂತ ರಿಲೀವ್ ಮಾಡಿ ಹೋಗ್ತೇವೆ 2 ಗಂಟೆ ಸಿನಿಮಾ ನೋಡಿದ ಮೇಲೆ. ಅದನ್ನ ಈ ಸಿನಿಮಾದಲ್ಲಿ ಮಾಡಿದ್ದೇವೆ" ಎಂದರು ಶಿಲ್ಪಾ ಗಣೇಶ್.

