ಒಂದು ಕಾಲದಲ್ಲಿ ಮುಂಬೈ ಎಂದರೆ ಭಾರತ ಕ್ರಿಕೆಟ್ ಅಲಿಖಿತ ರಾಜಧಾನಿ. ಸಾಲು ಸಾಲು ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡಕ್ಕೆ ನೀಡಿದ್ದ ದೊಡ್ಡ ಖಣಜ. ಅಂತಾರಾಷ್ಟ್ರೀಯ ಟೆಸ್ಟ್ ನಡೆದ 3 ಕ್ರೀಡಾಂಗಣ(ವಾಂಖೆಡೆ, ಬ್ರೆಬೊರ್ನ್, ಜಿಮಖಾನಾ) ಇರುವ ದೇಶದ ಏಕೈಕ ನಗರ ಎಂಬ ಹೆಗ್ಗಳಿಕೆ ಇಂದಿಗೂ ಇರುವುದು ಮುಂಬೈಗೆ ಮಾತ್ರ.
ಒಂದು ಕಾಲದಲ್ಲಿ ದೇಶದ ಮಹತ್ವದ ಪಂದ್ಯಗಳು ನಡೆಯುತ್ತಿದ್ದುದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಮುನ್ನಲೆಗೆ ಬಂದ ಮೇಲೆ ಮುಂಬೈ ಮತ್ತು ವಾಂಖೆಡೆ ಪ್ರಾಮುಖ್ಯತೆ ಅದರ ಪಾಲಾಗಿದ್ದು ಸುಳ್ಳಲ್ಲ. ಹೀಗಿರುವಾಗ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಪೈಪೋಟಿ ನೀಡಲು ಮುಂಬೈ ಭವ್ಯ ಯೋಜನೆಗಳನ್ನು ರೂಪಿಸುತ್ತಿದೆ. ಮೋದಿ ಕ್ರೀಡಾಂಗಣವನ್ನೂ ಮೀರಿಸುವಂತಹ ಮೈದಾನದ ನಿರ್ಮಾಣಕ್ಕೆ ಮುಂದಾಗಿದ್ದು ನವಿಮುಂಬೈನಲ್ಲಿ ತಲೆಯೆತ್ತುವ ಸಾಧ್ಯತೆ ಇದೆ.
ಸದ್ಯಕ್ಕೆ 1.32 ಲಕ್ಷ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯವಿರುವ ನರೇಂದ್ರ ಮೋದಿ ಕ್ರೀಡಾಂಗಣ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ವಿಶ್ವಕಪ್ ಫೈನಲ್, ಐಪಿಎಲ್ ಫೈನಲ್ ನಂತಹ ಮಹತ್ವದ ಪಂದ್ಯಗಳು ಆ ಕ್ರೀಡಾಂಗಣದ ಪಾಲಾಗುತ್ತಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ 33 ಸಾವಿರ ಪ್ರೇಕ್ಷಕರು ಕುಳಿತು ನೋಡಲು ಆಸನದ ವ್ಯವಸ್ಥೆ ಇದೆ. ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ 45,300 ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯ ಇದೆ. ಹೀಗಾಗಿ ಮಂಬೈ ಕ್ರಿಕೆಟ್ ಅಸೋಸಿಯಶನ್ ಅಷ್ಟೇ ಬೃಹತ್ತಾದ ಮತ್ತು ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಈ ಸಲುವಾಗಿ ಮುಂಬೈ ತನ್ನ ಕ್ರಿಕೆಟ್ ಚಟುವಟಿಕೆಯನ್ನು ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಿಂದ ದೂರ ಸರಿಸಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತದ ಆರ್ಥಿಕ ರಾಜಧಾನಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಕ್ರಿಕೆಟ್ ಕೇಂದ್ರಗಳಲ್ಲಿ ಒಂದಾಗುವ ಸಾಧ್ಯತೆ ಇದೆ.
ಸಿಎಂ ಫಡ್ನವಿಸ್ ಜೊತೆ MCA ಮಾತುಕತೆ
MCAಯು ಇದೀಗ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (MMR) ನೊಳಗೆ ಹೊಸ ಕ್ರೀಡಾಂಗಣವನ್ನು ನಿರ್ಮಿಸಲು ಯೋಜಿಸುತ್ತಿದೆ. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವಿಸ್ ಅವರೇ ಉತ್ಸುಕರಾಗಿದ್ದಾರೆ. ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಮತ್ತು ಸಿಡ್ಕೋ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಸಿಂಘಾಲ್ ಅವರು ಈ ಫಡ್ನವಿಸ್ ಅವರನ್ನು ಭೇಟಿ ಮಾಡಿ ಈ ಯೋಜನೆಗೆ ಮಾರ್ಗಸೂಚಿಯನ್ನು ರೂಪಿಸಲು ವಿವರವಾದ ಚರ್ಚೆಗಳನ್ನು ನಡೆಸಿದ್ದಾರೆ. ಹೊಸ ಕ್ರೀಡಾಂಗಣವು 100,000 ಜನರ ಸಾಮರ್ಥ್ಯವನ್ನು ಹೊಂದಲಿದ್ದು, ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾಗಲಿದೆ ಎಂದು ಬಹಿರಂಗಪಡಿಸಲಾಗಿದೆ.ಈ ಬಗ್ಗೆ ಮಾತನಾಡಿದ ಎಂಸಿಎ ಮುಖ್ಯಸ್ಥ ಅಜಿಂಕ್ಯ ನಾಯಕ್, "ಈ ಉಪಕ್ರಮವು ಮಹಾರಾಷ್ಟ್ರದ ಕ್ರೀಡಾ ಪರಿಸರ ವ್ಯವಸ್ಥೆಗೆ ಒಂದು ನಿರ್ಣಾಯಕ ಕ್ಷಣವನ್ನು ಸೂಚಿಸುತ್ತದೆ. ಮುಂಬೈ ಮಹಾನಗರ ಪ್ರದೇಶದಲ್ಲಿ 1 ಲಕ್ಷ ಸಾಮರ್ಥ್ಯದ ಕ್ರೀಡಾಂಗಣವು ಮುಂಬೈ ಕ್ರಿಕೆಟ್ ಅನ್ನು ಉನ್ನತೀಕರಿಸುವುದಲ್ಲದೆ, ಜಾಗತಿಕ ಕ್ರೀಡಾ ನಕ್ಷೆಯಲ್ಲಿ ಮಹಾರಾಷ್ಟ್ರವನ್ನು ದೃಢವಾಗಿ ಇರಿಸುತ್ತದೆ. ಈ ವಿಶ್ವ ದರ್ಜೆಯ ಮೂಲಸೌಕರ್ಯವು ಆಟಗಾರರ ಅಭಿವೃದ್ಧಿಗೆ ಸಾಟಿಯಿಲ್ಲದ ಅವಕಾಶಗಳನ್ನು ಸೃಷ್ಟಿಸುತ್ತದೆ, ಉದಯೋನ್ಮುಖ ಪ್ರತಿಭೆಗಳಿಗೆ ನಿರ್ಣಾಯಕ ಮಾನ್ಯತೆ ನೀಡುತ್ತದೆ ಮತ್ತು ಎಲ್ಲಾ ಹಂತಗಳಲ್ಲಿ ಕ್ರಿಕೆಟ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
ನವಿಮುಂಬೈನಲ್ಲಿ ನಿರ್ಮಾಣ ಯಾಕೆ?
ಜೊತೆಗೆ ನವಿ ಮುಂಬೈ ಪ್ರದೇಶದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಖಾಸಗಿ ಚಾನಲ್ ಒಂದರ ಜೊತೆ ಮಾತನಾಡುವ ವೇಳೆ ಅಜಿಂಕ್ಯ ನಾಯಕ್ ಹೇಳಿದ್ದಾರೆ. "ನವಿ ಮುಂಬೈ ಅತ್ಯುತ್ತಮ ಸಂಪರ್ಕ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಮುಂಬರುವ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ಈ ಸಾಮರ್ಥ್ಯದ ವಿಶ್ವ ದರ್ಜೆಯ ಕ್ರೀಡಾಂಗಣವನ್ನು ನಿರ್ಮಿಸಲು ಇದು ಸೂಕ್ತ ಸ್ಥಳವಾಗಿದೆ. ಕ್ರೀಡಾಂಗಣದ ಕೆಲಸ ಆರು ತಿಂಗಳ ನಂತರ ಪ್ರಾರಂಭವಾಗಬೇಕು. ಅನುಷ್ಠಾನಕ್ಕೆ ಮೊದಲು ಪ್ರಕ್ರಿಯೆ, ಯೋಜನೆ ಮತ್ತು ವಿನ್ಯಾಸಕ್ಕಾಗಿ ನಮಗೆ ಆರು ತಿಂಗಳ ಅವಧಿ ಬೇಕು" ಎಂದು ನಾಯಕ್ ಹೇಳಿದ್ದಾರೆ.2011 ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ವಾಂಖೆಡೆ ಕ್ರೀಡಾಂಗಣವು ಐಸಿಸಿ ಈವೆಂಟ್‌ನ ಯಾವುದೇ ಫೈನಲ್ ಅನ್ನು ಆಯೋಜಿಸಿಲ್ಲ. 2016 ರ ಟಿ20 ವಿಶ್ವಕಪ್ ಫೈನಲ್ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿತ್ತು. 2023 ರ ವಿಶ್ವಕಪ್ ಮತ್ತು 2026 ರ ಟಿ20 ವಿಶ್ವಕಪ್ ಫೈನಲ್ ಪಂದ್ಯಗಳು ಅಹಮದಾಬಾದ್ ನ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದವು.

