Dailyhunt
ಐಪಿಎಲ್ ಟಿಕೆಟ್‌ಗಾಗಿ ತೆಲಂಗಾಣದಿಂದ ಕರೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತ: ಕುತೂಹಲಕಾರಿ ಪ್ರಸಂಗ ಬಿಚ್ಚಿಟ್ಟ ಸುರೇಶ್ ಕುಮಾರ್!

ಐಪಿಎಲ್ ಟಿಕೆಟ್‌ಗಾಗಿ ತೆಲಂಗಾಣದಿಂದ ಕರೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತ: ಕುತೂಹಲಕಾರಿ ಪ್ರಸಂಗ ಬಿಚ್ಚಿಟ್ಟ ಸುರೇಶ್ ಕುಮಾರ್!

Vijay Karnataka 1 week ago

ಬೆಂಗಳೂರು: ರಾಜ್ಯದಲ್ಲಿ ಶಾಸಕರಿಗೆ ಐಪಿಎಲ್ ಟಿಕೆಟ್ ಉಚಿತವಾಗಿ ಕೊಡಬೇಕು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ವಿಧಾನಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೀಗಿದ್ದರೂ ಐಪಿಎಲ್ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ಮೂರು ಉಚಿತ ಟಿಕೆಟ್ ಕೊಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಒಂದು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಈ ಕುರಿತಾಗಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಐಪಿಎಲ್ ಟಿಕೆಟ್ ಗಾಗಿ ತೆಲಂಗಾಣದಿಂದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಫೋನ್ ಕರೆ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಐಪಿಎಲ್ ಟಿಕೆಟ್‌ಗಾಗಿ ಹೇಗೆಲ್ಲಾ ಬೇಡಿಕೆ ಇದೆ, ಎಲ್ಲಿಂದೆಲ್ಲಾ ಕರೆ ಮಾಡಿ ಟಿಕೆಟ್‌ಗಾಗಿ ದುಂಬಲು ಬೀಳುತ್ತಾರೆ ಎಂಬ ಅಂಶದ ಬಗ್ಗೆ ಅವರು ಗಮನ ಸೆಳೆದಿದ್ದಾರೆ. ಸುರೇಶ್ ಕುಮಾರ್ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸುರೇಶ್ ಕುಮಾರ್ ಫೇಸ್ ಬುಕ್ ಪೋಸ್ಟ್‌ನಲ್ಲಿ ಏನಿದೆ?

ಇಂದು ಮಧ್ಯಾಹ್ನ ಹೀಗೊಂದು ವಿಚಿತ್ರ ಮೊಬೈಲ್ ಕರೆ ನನಗೆ ಬಂದಿತ್ತು. ಆಹಾ.. ಎಂತಹ ಕರೆ ಅಂತೀರಿ! ಕರೆ ಮಾಡಿದವರ ಹೆಸರು ಸಂದೀಪ್ ಎಂದು. ಮಿಸ್ಡ್ ಕಾಲ್ ಲಿಸ್ಟ್ ಅಲ್ಲಿದ್ದ ಆ ನಂಬರ್ ಗೆ ನಾನು ಮರುಕರೆ ಮಾಡಿ ಕನ್ನಡದಲ್ಲಿ ಮಾತನಾಡಿದಾಗ ಅವರು ಇಂಗ್ಲೀಷಿನಲ್ಲಿ ತಮ್ಮ ಪರಿಚಯ ಹೇಳಿಕೊಂಡಿದ್ದು ಹೀಗೆ.

" ನನ್ನ ಹೆಸರು ಸಂದೀಪ್ ಎಂದು. ನಿಮ್ಮ( ಸುರೇಶ್ ಕುಮಾರ್ ) ಮೊಬೈಲ್ ನಂಬರ್ ನನಗೆ ರೇವಂತ ರೆಡ್ಡಿ ಅವರ ಆಫೀಸಿಂದ ದೊರಕಿತು. ( ರೇವಂತ್ ರೆಡ್ಡಿ ಎಂದರೆ ತೆಲಂಗಾಣ ಮುಖ್ಯಮಂತ್ರಿ ). ನಾನು ಕಾಂಗ್ರೆಸ್ ಕಾರ್ಯಕರ್ತ ಹಾಗೂ ರೇವಂತರ ರೆಡ್ಡಿ ಅವರ ಸಂಬಂಧಿ. ನನಗೆ ಐಪಿಎಲ್ ಟಿಕೆಟ್ ಬೇಕಿತ್ತು. ದಯವಿಟ್ಟು ಸಹಾಯ ಮಾಡುವಿರಾ " ಎಂಬುದು ಆ ಕರೆಯ ಸಾರಾಂಶ.

ನಾನು ಅವರಿಗೆ ಮಾರುತ್ತರ ಕೊಟ್ಟೆ " ನನಗೆ ಐಪಿಎಲ್ ಟಿಕೆಟ್ ಬೇಡ. ನನ್ನ ಹೆಸರಿನಲ್ಲಿ ಯಾರಿಗೂ ಟಿಕೆಟ್ ಕೊಡುವುದು ಬೇಡ. ಈ ವಿಐಪಿ ಸಂಸ್ಕೃತಿಗೆ ಕೊನೆ ಹಾಡಬೇಕು " ಎಂದು ನಾನು ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ದಯವಿಟ್ಟು ಈ ವಿಚಾರ ನನ್ನ ಜೊತೆ ಮಾತನಾಡಬೇಡಿ ಎಂದೆ.

ಪಾಪ, ತುಂಬಾ ನಿರಾಶರಾದ ಅವರು ಫೋನ್ ಕರೆ ಕಟ್ ಮಾಡಿದರು.ನನಗೂ ನಗು ಬಂತು. ನಕ್ಕುಬಿಟ್ಟೆ. ಅಬ್ಬಾ.. ಐಪಿಎಲ್‌ ಮಾಯೆ ತೆಲಂಗಾಣದವರನ್ನು ನನಗೆ ಫೋನಾಯಿಸುವಂತೆ ಮಾಡಿತು ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಪರ - ವಿರೋಧ ಚರ್ಚೆ

ವಿಧಾನಸಭೆಯಲ್ಲಿ ಐಪಿಎಲ್ ಟಿಕೆಟ್‌ಗಾಗಿ ಶಾಸಕ ವಿಜಯನಾನಂದ ಕಾಶಪ್ಪನವರ್ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿತ್ತು. ಸ್ಪೀಕರ್ ಯುಟಿ ಖಾದರ್ ಕೂಡಾ ಶಾಸಕರ ಮನವಿಗೆ ಸ್ಪಂದಿಸುವಂತೆ ಸೂಚಿಸಿದ್ದರು. ಆದರೆ ವಿಧಾಸಭೆಯಲ್ಲಿ ನಡೆದ ಚರ್ಚೆ ಪರ ಹಾಗೂ ವಿರೋಧ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಸಾರ್ವಜನಿಕ ವಲಯದಲ್ಲಿ ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಶಾಸಕರ ವಿಐಪಿ ಸಂಸ್ಕೃತಿಯ ಬಗ್ಗೆ ಜನರು ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಕೂಡಾ ವಿರೋಧ ವ್ಯಕ್ತಪಡಿಸಿದ್ದರು. ಶಾಸಕರು ಐಪಿಎಲ್ ಟಿಕೆಟನ್ನು ಹಣ ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲವೇ? ಇಂತಹ ವಿಐಪಿ ಸಂಸ್ಕೃತಿಯ ಅಗತ್ಯ ಇದ್ಯಾ ಎಂದು ಪ್ರಶ್ನಿಸಿದ್ದರು.

ಸ್ಪೀಕರ್‌ಗೆ ಪತ್ರ ಬರೆದಿದ್ದ ಸುರೇಶ್ ಕುಮಾರ್

ಶಾಸಕರಿಗೆ ಐಪಿಎಲ್ ಉಚಿತ ಟಿಕೆಟ್ ಕುರಿತಾಗಿ ಸುರೇಶ್ ಕುಮಾರ್ ಅವರು ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. "ಜನರ ಪರವಾಗಿ ಧ್ವನಿ ಎತ್ತಬೇಕಾದ ಸದನದಲ್ಲಿ. ಜನಸೇವಕರಾದ ನಮಗೆ "ವಿಐಪಿ ಮರ್ಯಾದೆ" ಸಿಗಬೇಕೆಂಬ ಆಗ್ರಹ ವ್ಯಕ್ತವಾಗುತ್ತಿರುವುದು ನಿಜಕ್ಕೂ ದುರಂತ. ಜನಸಾಮಾನ್ಯರ ಅದೆಷ್ಟೋ ಗಂಭೀರ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ವರ್ಷಾನುಗಟ್ಟಲೆ ಪರಿಹಾರ ಸಿಗುವುದಿಲ್ಲ. ಆದರೆ ಶಾಸಕರ ಸೌಲಭ್ಯ, ಟಿಕೆಟ್ ವಿಚಾರ ಬಂದಾಗ 24 ಗಂಟೆಯೊಳಗೆ ಸ್ಪಂದಿಸುವ ಉತ್ಸುಕತೆಯನ್ನು ಸರ್ಕಾರ ತೋರಿರುವುದು ಜನಸಾಮಾನ್ಯರಲ್ಲಿ ಆಶ್ಚರ್ಯ ಹಾಗೂ ಜನಪ್ರತಿನಿಧಿಗಳ ಬಗ್ಗೆ ತಿರಸ್ಕಾರ ಮೂಡುವಂತೆ ಮಾಡಿದೆ" ಎಂದಿದ್ದರು.

ಈ ಎಲ್ಲಾ ಬೆಳವಣಿಗೆ ನಡುವೆಯೂ ಐಪಿಎಲ್‌ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ತಲಾ 3 ಹಾಗೂ ಇತರ ಅಂತರಾಷ್ಟ್ರೀಯ ಪಂದ್ಯಾಟ ವೀಕ್ಷಿಸಲು 2 ಟಿಕೆಟ್ ನೀಡಲು ಸೂಚನೆ ನೀಡಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಷನ್ ಪದಾಧಿಕಾರಿಗಳ ಜೊತೆಗೆ ನಡೆದ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka