Dailyhunt
ಐಪಿಎಲ್‌ ಉಚಿತ ಟಿಕೆಟ್‌ ಗೆ ಶಾಸಕರ ಪಿಎಗಳ ಕ್ಯೂ!: ನಮಗೆ ಬೇಡ ಎಂದಿರುವ ರವಿ ಸುಬ್ರಹ್ಮಣ್ಯ, ಸುರೇಶ್ ಕುಮಾರ್

ಐಪಿಎಲ್‌ ಉಚಿತ ಟಿಕೆಟ್‌ ಗೆ ಶಾಸಕರ ಪಿಎಗಳ ಕ್ಯೂ!: ನಮಗೆ ಬೇಡ ಎಂದಿರುವ ರವಿ ಸುಬ್ರಹ್ಮಣ್ಯ, ಸುರೇಶ್ ಕುಮಾರ್

Vijay Karnataka 5 days ago

ಬೆಂಗಳೂರು: ಐಪಿಎಲ್‌ ಕ್ರಿಕೆಟ್‌ ಪಂದ್ಯ ವೀಕ್ಷಣೆಗಾಗಿ ಶಾಸಕರಿಗೆ ಕೆಎಸ್‌ಸಿಎ ನೀಡುವ ತಲಾ 3 ಉಚಿತ ಟಿಕೆಟ್‌ ಅನ್ನು ವಿಧಾನಸಭಾಧ್ಯಕ್ಷರ ಕಚೇರಿಯಲ್ಲಿ ಶನಿವಾರ ಪಡೆಯಲು ಶಾಸಕರ ಆಪ್ತ ಸಹಾಯಕರು ಸರತಿ ಸಾಲಿನಲ್ಲಿ ನಿಂತಿರುವುದು ಗಮನ ಸೆಳೆದಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡದ ನಡುವೆ ಏ.5ರಂದು (ಭಾನುವಾರ) ನಡೆಯಲಿರುವ ಪಂದ್ಯ ವೀಕ್ಷಣೆಗಾಗಿ ಒಟ್ಟು 188 ಶಾಸಕರಿಗೆ ತಲಾ 3ರಂತೆ 564 ಟಿಕೆಟ್‌ಗಳನ್ನು ಸಭಾಧ್ಯಕ್ಷರ ಕಚೇರಿಗೆ ರವಾನೆಯಾಗಿತ್ತು.

ಸಚಿವರಿಗೆ ಪ್ರತ್ಯೇಕವಾಗಿ ಟಿಕೆಟ್‌ ತಲುಪಿಸುವ ವ್ಯವಸ್ಥೆಯಾಗಿತ್ತು. 564 ಟಿಕೆಟ್‌ಗಳ ಪೈಕಿ ಒಂಬತ್ತು ಟಿಕೆಟ್‌ (ಮೂವರ ಶಾಸಕರ) ಬಾಕಿ ಉಳಿದಿರುವುದು ಗೊತ್ತಾಗಿದೆ.

ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ್‌ ಅವರು ಶಾಸಕರ ಕುಟುಂಬಕ್ಕೆ ಐದು ಟಿಕೆಟ್‌ ನೀಡಬೇಕು. ಒಂದು ಟಿಕೆಟ್‌ಗೆ 5,000 ರೂ.ನಿಂದ 20,000 ರೂ. ವೆಚ್ಚವಾಗಲಿದ್ದು, ಸಾಮಾನ್ಯ ಜನರೊಂದಿಗೆ ಸಾಲಿನಲ್ಲಿ ನಿಂತು ಟಿಕೆಟ್‌ ಪಡೆಯಬೇಕೆ ಎಂದು ಸದನದಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿದಂತೆ ಹಲವು ದನಿಗೂಡಿಸಿದ್ದರು. ಆಗ ಟಿಕೆಟ್‌ ಭರವಸೆ ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ್ದ ಕೆಎಸ್‌ಸಿಎ ಪದಾಕಾರಿಗಳು ಶಾಸಕರಿಗೆ ತಲಾ ಮೂರು ಟಿಕೆಟ್‌ ಉಚಿತವಾಗಿ ನೀಡಲು ಒಪ್ಪಿದ್ದರು.

ಸ್ಪೀಕರ್ ಗೆ ಪತ್ರ ಬರೆದ ಇಬ್ಬರು ಶಾಸಕರು

ಬಿಜೆಪಿ ಶಾಸಕರಾದ ಎಲ್‌.ಎ.ರವಿ ಸುಬ್ರಮಣ್ಯ, ಎಸ್‌.ಸುರೇಶ್‌ ಕುಮಾರ್‌ ಅವರು ಉಚಿತ ಟಿಕೆಟ್‌ ಬೇಡವೆಂದು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಉಳಿದಂತೆ, ಬಹುತೇಕ ಎಲ್ಲ ಶಾಸಕರ ಆಪ್ತ ಸಹಾಯಕರು ಶಾಸಕರ ಪರವಾಗಿ ಟಿಕೆಟ್‌ ಪಡೆದಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿದ್ದರು. ಭದ್ರತೆ ದೃಷ್ಟಿಯಿಂದ ಮೊದಲು ಪಂದ್ಯ ಆಯೋಜನೆಗೆ ಅನುಮತಿ ನಿರಾಕರಿಸಿದ್ದ ಸರಕಾರ ಬಳಿಕ ಕೆಎಸ್‌ಸಿಎ ನೀಡಿದ ಭದ್ರತೆಗಳ ಭರವಸೆ ಬಳಿಕವಷ್ಟೇ ಅನುಮತಿ ನೀಡಿತ್ತು.

ಚಿತ ಟಿಕೆಟ್‌ಗೆ ಬಿಜೆಪಿ ಶಾಸಕರಾದ ಎಸ್‌. ಸುರೇಶ್‌ ಕುಮಾರ್‌, ಬಿ.ವೈ.ವಿಜಯೇಂದ್ರ ಬಹಿರಂಗವಾಗಿಯೇ ಆಕ್ಷೇಪಿಸಿದ್ದರು. ಸಂಸದ ತೇಜಸ್ವಿ ಸೂರ್ಯ, ಮಾಜಿ ಸಂಸದ ಡಿ.ಕೆ. ಸುರೇಶ್‌ ಕೂಡ ಉಚಿತ ಟಿಕೆಟ್‌ ಕೋರಿದ ಶಾಸಕರ ನಡೆ ಖಂಡಿಸಿದ್ದರು. ಇಷ್ಟಾದರೂ ಆಪ್ತ ಸಹಾಯಕರನ್ನು ಶನಿವಾರ ಸರತಿ ಸಾಲಿನಲ್ಲಿ ನಿಲ್ಲಿಸಿ ಶಾಸಕರು ಉಚಿತ ಟಿಕೆಟ್‌ ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಭಿಕ್ಷೆ ಬೇಡುವವರಿಗೆ ನಾಚಿಕೆಯಾಗಬೇಕು

ಐಪಿಎಲ್‌ ಕ್ರಿಕೆಟ್‌ ಪಂದ್ಯದ ಟಿಕೆಟ್‌ಗಾಗಿ ಭಿಕ್ಷೆ ಬೇಡುವವರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರ ಪರವಾಗಿ ಆಪ್ತ ಸಹಾಯಕರು ವಿಧಾನಸೌಧದಲ್ಲಿಸರತಿ ಸಾಲಿನಲ್ಲಿನಿಂತು ಟಿಕೆಟ್‌ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಆರ್‌ಸಿಬಿ ತಂಡದ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ11 ಮಂದಿ ಬಲಿಯಾಗಿದ್ದ ಬಗ್ಗೆ ಸದನದಲ್ಲಿಚರ್ಚೆಯಾಗಿದ್ದರೆ ಗೌರವವಿರುತ್ತಿತ್ತು. ಆದರೆ, ನೂರಾರು ಕೋಟಿ ಸುರಿದು ಶಾಸಕರಾದವರು ಐಪಿಎಲ್‌ ಟಿಕೆಟ್‌ಗೆ ಭಿಕ್ಷೆ ಬೇಡುತ್ತಾರಲ್ಲ, ಅಂತಹವರಿಗೆ ನಾಚಿಕೆಯಾಗಬೇಕು. ಯಾವುದೇ ಜನಪ್ರತಿನಿಗಳು ಹೀಗೆ ಮಾಡಬಾರದು. ಕ್ಷೇತ್ರಕ್ಕೆ ಸಹಕಾರ ಬೇಕು ಎಂದು ಭಿಕ್ಷೆ ಬೇಡಲಿ,'' ಎಂದು ಹೇಳಿದ್ದಾರೆ.

ನನ್ನ ವಿರೋಧವಿದೆ: ಸುರೇಶ್ ಕುಮಾರ್

''ಐಪಿಎಲ್‌ ಕ್ರಿಕೆಟ್‌ನ ಟಿಕೆಟ್‌ ಬೇಡ. ನನ್ನ ಹೆಸರಿನಲ್ಲಿ ಬೇರೆಯವರು ಪಡೆಯುವುದಕ್ಕೂ ಅನುಮತಿ ಇಲ್ಲ,'' ಎಂದು ಬಿಜೆಪಿಯ ಶಾಸಕ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ. ಈ ಸಂಬಂಧ ಸ್ಪೀಕರ್‌ಗೆ ಮಾರ್ಚ್ 28ರಂದು ಬರೆದಿದ್ದ ಪತ್ರವನ್ನು ಜಾಲತಾಣದಲ್ಲಿಮತ್ತೊಮ್ಮೆ ಹಂಚಿಕೊಂಡಿರುವ ಅವರು, 'ಟಿಕೆಟ್‌ ನಿರಾಕರಿಸಿರುವ ಶಾಸಕರ ಹೆಸರಿನ ಟಿಕೆಟ್‌ ಅಥವಾ ಪಾಸ್‌ಗಳನ್ನು ಬೇರೆಯವರು ಪಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಕಾಳಸಂತೆಯಲ್ಲೂಈ ರೀತಿಯ ಟಿಕೆಟ್‌ಗಳು ಭಾರಿ ಮೊತ್ತಕ್ಕೆ ಬಿಕರಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಿಂದ ಗೊತ್ತಾಗಿದೆ,'' ಎಂದಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka