Dailyhunt
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಗೆ ಬಲಿಷ್ಠ ಭಾರತ ತಂಡ ಪ್ರಕಟ; ಕೌರ್ ಪಡೆಯಲ್ಲಿ ಸ್ಥಾನ ಗಿಟ್ಟಿಸಿದ ಕನ್ನಡತಿ ಶ್ರೇಯಾಂಕ ಪಾಟೀಲ್

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಗೆ ಬಲಿಷ್ಠ ಭಾರತ ತಂಡ ಪ್ರಕಟ; ಕೌರ್ ಪಡೆಯಲ್ಲಿ ಸ್ಥಾನ ಗಿಟ್ಟಿಸಿದ ಕನ್ನಡತಿ ಶ್ರೇಯಾಂಕ ಪಾಟೀಲ್

Vijay Karnataka 1 week ago

ಸಿಸಿ ಮಹಿಳಾ ಟಿ20 ವಿಶ್ವಕಪ್ 2026 ಮಹತ್ವದ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಅನುಭವಿ ಹರ್ಮನ್ ಪ್ರೀತ್ ಕೌರ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸ್ಮೃತಿ ಮಂದಾನ ಅವರು ಉಪನಾಯಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮೇ 2ರಂದು ಬಿಬಿಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ 15 ಮಂದಿಯ ತಂಡವನ್ನು ಆಯ್ಕೆ ಮಾಡಲಾಯಿತು. ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಜೊತೆ ತಂಡದ ಮುಖ್ಯ ಕೋಚ್ ಅಮುಲ್ ಮೋಜುಮ್ದಾರ್ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅನ್ನು ಗೆದ್ದುಕೊಂಡಿರುವ ಕೌರ್ ನೇತೃತ್ವದ ತಂಡ ಇದೀಗ ಮೊದಲ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಉಮೇದಿನಲ್ಲಿ ಕಣಕ್ಕಳಿಯಲಿದೆ. ಈ ಹಿಂದೆ ಹಲವು ಬಾರಿ ತಂಡ ಉತ್ತಮ ಪ್ರದರ್ಶನ ನೀಡಿದ್ದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಹರ್ಮನ್ ಪ್ರೀತ್ ಅವರು ಟಿ20 ವಿಶ್ವಕಪ್ ನಲ್ಲಿ 5ನೇ ಬಾರಿ ಭಾರತ ತಂಡದ ನೇತೃತ್ವ ವಹಿಸಿದ್ದಾರೆ.

ತಂಡದಲ್ಲಿ ಸ್ಮೃತಿ ಮಂದಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಬ್ಯಾಟಿಂಗ್ ಬಲವಾಗಿದ್ದಾರೆ. ಬೌಲಿಂಗ್ ಜವಾಬ್ದಾರಿ ದೀಪ್ತಿ ಶರ್ಮಾ ಮತ್ತು ರೇಣುಕಾ ಸಿಂಗ್ ಅವರ ಹೆಗಲ ಮೇಲೆ ಇದೆ. ತಂಡದಲ್ಲಿರುವ ನಾಲ್ವರು ಆಟಗಾರ್ತಿಯರಿಗೆ ಇದು ಮೊದಲ ಬಾರಿಗೆ ಕಾಣಿಸಿಕೊಳ್ಳಲಿದೆ. ಭಾರತಿ ಫುಲ್ಮಾಲಿ, ನಂದನಿ ಶರ್ಮಾ, ಶ್ರೀ ಚರಣಿ ಮತ್ತು ಕ್ರಾಂತಿ ಗೌಡ್ ಮೊದಲ ಬಾರಿ ವಿಶ್ವಕಪ್ ನಲ್ಲಿ ಆಡುತ್ತಿದ್ದಾರೆ.

ಶ್ರೇಯಾಂಕಾ ಪಾಟೀಲ್ ಗೆ ಸ್ಥಾನ

ದೀರ್ಘಕಾಲ ಗಾಯದಿಂದಾಗಿ ಕ್ರಿಕೆಟ್ ಕಣದಿಂದ ಹೊರಗುಳಿದಿದ್ದ ಶ್ರೇಯಾಂಕಾ ಪಾಟೀಲ್ ಅವರು 2026ರ ಡಬ್ಲ್ಯೂಪಿಎಲ್ ನಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕಾರಣಕ್ಕೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೇಯಾಂಕಾ ಅವರು ಕಳೆದ ಟಿ20 ವಿಶ್ವಕಪ್ ನಲ್ಲೂ ಭಾರತ ತಂಡದ ಭಾಗವಾಗಿದ್ದರು. ಈವರೆಗೆ ಒಟ್ಟು 21 ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರುವ ಅವರು 28 ವಿಕೆಟ್ ಕಬಳಿಸಿದ್ದಾರೆ. ಜೊತೆಗೆ 3 ಮಹಿಳಾ ಏಕದಿನ ಪಂದ್ಯವನ್ನು ಆಡಿ 5 ವಿಕೆಟ್ ಗಳಿಸಿದ್ದಾರೆ.

ಈ ಬಾರಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಇಂಗ್ಲೆಂಡ್ ಮತ್ತು ವೆಲ್ಸ್ ನಲ್ಲಿ ಜೂನ್ 12ರಿಂದ ಜುಲೈ 15ರವರೆಗೆ ನಡೆಯಲಿದೆ. ಆತಿಥೇಯ ಇಂಗ್ಲೆಂಡ್, ಭಾರತ ಸೇರಿದಂತೆ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿದ್ದು ಒಟ್ಟು 33 ಪಂದ್ಯಗಳು ನಡೆಯಲಿವೆ. ಭಾರತ ತಂಡವು ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನೆದರ್ಲೆಂಡ್, ಬಾಂಗ್ಲಾದೇಶ ತಂಡಗಳೊಂದಿಗೆ ಎ ಬಣದಲ್ಲಿ ಸೆಣೆಸಲಿದೆ.

ಭಾರತ ಮಹಿಳಾ ತಂಡ

ಹರ್ಮನ್ ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಭಾರತಿ ಫಾಲ್ಮುಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀಚರಣಿ, ಯಾಸ್ತಿಕಾ ಭಾಟಿಯಾ, ನಂದಿನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka