ವಾಷಿಂಗ್ಟನ್ ಡಿಸಿ: ಡೊನಾಲ್ಡ್ ಟ್ರಂಪ್ ಅವರ ಬಾಲ್ಯದ ಸ್ನೇಹಿತರಾದ ಪೀಟರ್ ಟೆಕ್ಟಿನ್ ಅವರು, ಮುಂಬರುವ ಮಧ್ಯಂತರ ಚುನಾವಣೆಗಳಿಗೆ ಮುನ್ನ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಅಮೆರಿಕ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ. "ಡೆಮೋಕ್ರಾಟ್‌ಗಳು ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು, ಮಧ್ಯಂತರ ಚುನಾವಣೆಯಲ್ಲಿ ಕುಶಲತೆಯಿಂದ ನಿರ್ವಹಿಸುವ ಸಾಧ್ಯತೆ ಇದ್ದು, ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರುವುದು ಉತ್ತಮ" ಎಂದು ಪೀಟರ್ ಟೆಕ್ಟಿನ್ ಅಭಿಪ್ರಾಯಪಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೀಟರ್ ಟೆಕ್ಟಿನ್, "ನಾವು ತುಂಬಾ ಆತ್ಮೀಯ ಸ್ನೇಹಿತರು. ವಾಸ್ತವವಾಗಿ ಪ್ರೌಢಶಾಲೆಯ ಕೊನೆಯ ವರ್ಷದಲ್ಲಿ ನಾವು ಉತ್ತಮ ಸ್ನೇಹಿತರಾದೆವು. ನ್ಯೂಯಾರ್ಕ್ ಮಿಲಿಟರಿ ಅಕಾಡೆಮಿಯಲ್ಲಿ ನಮ್ಮ ಸ್ನೇಹ ಮತ್ತಷ್ಟು ಗಾಢವಾಯಿತು" ಎಂದು ಹೇಳಿದ್ದಾರೆ.
80 ವರ್ಷದ ಫ್ಲೋರಿಡಾ ಮೂಲದ ವಕೀಲ ಪೀಟರ್ ಟಿಕ್ಟಿನ್, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಮೂಲಕ ವಿದೇಶಿ ಗುಪ್ತಚರ ಸಂಸ್ಥೆಗಳು ಅಮೆರಿಕದ ಚುನಾವಣೆಯನ್ನು ನಿಯಂತ್ರಿಸಬಹುದು ಎಂದು ಎಚ್ಚರಿಸಿದ್ದಾರೆ. ಅಮೆರಿಕದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರುವಂತೆ ತಮ್ಮ ಬಾಲ್ಯದ ಸ್ನೇಹಿತ ನೀಡಿರುವ ಸಲಹೆಯನ್ನು, ಡೊನಾಲ್ಡ್ ಟ್ರಂಪ್ ಸ್ವೀಕರಿಸುತ್ತಾರಾ ಎಂಬ ಕುತೂಹಲ ಅಮೆರಿಕನ್ನರಲ್ಲಿ ಮೂಡಿದೆ.
2021ರಲ್ಲಿ ಬಿಡುಗಡೆಯಾದ ಯುಎಸ್ ಗುಪ್ತಚರ ವರದಿಯ ಪ್ರಕಾರ, ರಷ್ಯಾ, ಚೀನಾ, ಇರಾನ್ ಮತ್ತು ವೆನೆಜುವೆಲಾದಂತಹ ದೇಶಗಳು ಆನ್‌ಲೈನ್ ಪ್ರಚಾರಗಳು ಮತ್ತು ತಪ್ಪು ಮಾಹಿತಿಯ ಮೂಲಕ, ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿವೆ. ಕೆಲವರು ಟ್ರಂಪ್ ಪರವಾಗಿದ್ದಾರೆಂದು ಕಂಡುಬಂದರೆ, ಇನ್ನು ಕೆಲವರು ಅವರ ವಿರುದ್ಧ ಕೆಲಸ ಮಾಡುತ್ತಿದ್ದಾರೆಂದು ನಂಬಲಾಗಿದೆ.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದ ಆರೋಪದ ಮೇಲೆ, ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಟ್ರಂಪ್‌ಗೆ ಕರೆ ನೀಡುವ ಪ್ರಸ್ತಾವಿತ ಕಾರ್ಯಕಾರಿ ಆದೇಶವನ್ನು ರೂಪಿಸಲು ಪೀಟರ್ ಟಿಕ್ಟಿನ್ ಸಹಾಯ ಮಾಡಿದ್ದಾರೆ.
"ಚುನಾವಣೆಗಳನ್ನು ಹೇಗೆ ನಡೆಸಲಾಗುತ್ತದೆ ಎಂಬುದರಲ್ಲಿ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಲು ಟ್ರಂಪ್ ತುರ್ತು ಅಧಿಕಾರಗಳನ್ನು ಬಳಸಬೇಕು. ಇದರಲ್ಲಿ ಹೆಚ್ಚಿನ ಮೇಲ್-ಇನ್ ಮತದಾನವನ್ನು ಮಿತಿಗೊಳಿಸುವುದು ಮತ್ತು ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಬಳಕೆಯನ್ನು ನಿಷೇಧಿಸುವುದು ಸೇರಿವೆ" ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
"ಡೆಮೋಕ್ರಾಟ್‌ಗಳು ಕಾಂಗ್ರೆಸ್‌ನಲ್ಲಿ ಸಾಕಷ್ಟು ಸ್ಥಾನಗಳನ್ನು ಗೆದ್ದರೆ, ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಬ್ಬರನ್ನೂ ದೋಷಾರೋಪಣೆ ಮಾಡಲು ಪ್ರಯತ್ನಿಸಬಹುದು. ಇದು ಹೌಸ್ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರಿಸ್ ಅಧ್ಯಕ್ಷರಾಗಲು ಅನುವು ಮಾಡಿಕೊಡುತ್ತದೆ" ಎಂದು ಪೀಟರ್ ಟೆಕ್ಟಿನ್ ಪ್ರತಿಪಾದಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಪದೇ ಪದೇ ಮತದಾರರ ಗುರುತಿನ ಕಾನೂನುಗಳನ್ನು ಕಠಿಣಗೊಳಿಸಬೇಕೆಂದು ಕರೆ ನೀಡಿದ್ದಾರೆ. "Save America"
ಕಾಯ್ದೆಯನ್ನು ಪ್ರಬಲವಾಗಿ ಬಂಬಲಿಸುವ ಅವರು, ಈ ವರ್ಷದ ಆರಂಭದಲ್ಲಿ, ಮೇಲ್-ಇನ್ ಮತದಾನದ ಸುತ್ತಲಿನ ನಿಯಮಗಳನ್ನು ಬಿಗಿಗೊಳಿಸುವ ಗುರಿಯನ್ನು ಹೊಂದಿರುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.

