Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕದ 2.9 ಕೋಟಿ ರೂ. ಸಂಬಳದ ಉದ್ಯೋಗ ತಿರಸ್ಕರಿಸಿದ IIT ಗೋಲ್ಡ್ ಮೆಡಲಿಸ್ಟ್; ಕಾರಣ ಹೆತ್ತವರು! ದಿನಸಿ ಅಂಗಡಿಯೇ ಜಗತ್ತು

ಅಮೆರಿಕದ 2.9 ಕೋಟಿ ರೂ. ಸಂಬಳದ ಉದ್ಯೋಗ ತಿರಸ್ಕರಿಸಿದ IIT ಗೋಲ್ಡ್ ಮೆಡಲಿಸ್ಟ್; ಕಾರಣ ಹೆತ್ತವರು! ದಿನಸಿ ಅಂಗಡಿಯೇ ಜಗತ್ತು

Vijay Karnataka 1 week ago

ಹೊಸದಿಲ್ಲಿ: ಸಾಮಾನ್ಯವಾಗಿ ಐಐಟಿ ಪದವಿ ಪಡೆದ ವಿದ್ಯಾರ್ಥಿ ಅಂದರೆ ಅವರ ಮುಂದೆ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಆಫರ್‌ಗಳು, ವಿದೇಶಿ ಪ್ರವಾಸ ಮತ್ತು ಕೋಟಿಗಟ್ಟಲೆ ಸಂಬಳದ ಕನಸುಗಳು ಇರುತ್ತವೆ. ಆದರೆ, ಇಲ್ಲೊಬ್ಬ ಯುವಕ ಎಲ್ಲವನ್ನೂ ಮೀರಿ ಮಾನವೀಯತೆಗೆ ಮತ್ತು ಕುಟುಂಬದ ಪ್ರೀತಿಗೆ ಆದ್ಯತೆ ನೀಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದ ಸಾಮಾನ್ಯ ಕುಟುಂಬದವರು ವಿವೇಕ್ ಶರ್ಮಾ. ತಂದೆ ರೈಲ್ವೆ ಕ್ಲರ್ಕ್, ತಾಯಿ ಮನೆ ಪಾಠಗಳನ್ನು ಹೇಳಿಕೊಟ್ಟು ಸಂಸಾರ ನಿರ್ವಹಿಸುತ್ತಿದ್ದರು. ಮಗನ ಭವಿಷ್ಯಕ್ಕಾಗಿ ತಮ್ಮ ಬದುಕಿನ ಉಳಿತಾಯ, ಚಿನ್ನಾಭರಣವನ್ನೆಲ್ಲಾ ಮಾರಿ, ಕಷ್ಟಪಟ್ಟು ಓದಿಸಿದ್ದರು. ಪೋಷಕರ ತ್ಯಾಗವನ್ನು ವ್ಯರ್ಥ ಮಾಡದ ವಿವೇಕ್, ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದು, ಗೋಲ್ಡ್ ಮೆಡಲ್ ಕೂಡ ಗೆದ್ದರು.

ಕೋಟಿಗಳ ಆಫರ್ ಮತ್ತು ದಿಢೀರ್ ತಿರುವು

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸ್ಟಾರ್ಟ್-ಅಪ್ ಕಂಪನಿಯೊಂದು ವಿವೇಕ್‌ಗೆ ವಾರ್ಷಿಕ 2.9 ಕೋಟಿ ರೂ. (240,000 ಡಾಲರ್) ವೇತನದ ಉದ್ಯೋಗದ ಆಫರ್ ನೀಡಿತ್ತು. ಇದು ಅವರ ಕನಸಿನ ಉದ್ಯೋಗವಾಗಿತ್ತು. ಆದರೆ, ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸುವ ಕೆಲವೇ ದಿನಗಳ ಮೊದಲು, ಅವರ ತಂದೆಗೆ ಹೃದಯಾಘಾತವಾಯಿತು. ಅದೇ ಸಮಯದಲ್ಲಿ ತಾಯಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು.

ಆಫರ್ ತಿರಸ್ಕರಿಸಿದ ವಿವೇಕ್

ಆತ್ಮೀಯರು ಹಾಗೂ ವೃತ್ತಿಪರರು "ಇಂತಹ ಅವಕಾಶ ಮತ್ತೆ ಸಿಗಲ್ಲ" ಎಂದು ಸಲಹೆ ನೀಡಿದರು. ಆದರೆ, ವಿವೇಕ್ ಯಾವುದಕ್ಕೂ ಜಗ್ಗಲಿಲ್ಲ. ತಂದೆ-ತಾಯಿಯ ಆರೈಕೆಗಾಗಿ ಅಮೆರಿಕಕ್ಕೆ ಹೋಗುವ ನಿರ್ಧಾರವನ್ನು ರದ್ದುಗೊಳಿಸಿದರು. ವೀಸಾ ಸಂದರ್ಶನಕ್ಕೆ ಹೋಗುವುದನ್ನೇ ಕೈಬಿಟ್ಟರು.

ದಿನಸಿ ಅಂಗಡಿಯೇ ಆಶ್ರಯ

ಕಾನ್ಪುರದಲ್ಲಿಯೇ ಇದ್ದುಕೊಂಡು ಆರಂಭದಲ್ಲಿ ಸಣ್ಣ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿದರು. ಆದರೆ, ಪೋಷಕರ ಚಿಕಿತ್ಸೆಗೆ ಹಣದ ಅಗತ್ಯ ಹೆಚ್ಚಾದಾಗ, ಮನೆಯ ಕೆಳಭಾಗದಲ್ಲಿಯೇ 'ಶರ್ಮಾ ಜನರಲ್ ಸ್ಟೋರ್' ಎಂಬ ದಿನಸಿ ಅಂಗಡಿಯನ್ನು ಪ್ರಾರಂಭಿಸಿದರು. ಐಐಟಿ ಪದವೀಧರ ದಿನಸಿ ಅಂಗಡಿ ನಡೆಸುತ್ತಿರುವುದನ್ನು ಕಂಡು ನೆರೆಹೊರೆಯವರು ಅಚ್ಚರಿಪಟ್ಟರು. ಆದರೆ, ವಿವೇಕ್ ಮಾತ್ರ ಅದನ್ನೇ ಜೀವನದ ಅತಿದೊಡ್ಡ ಸಾಧನೆ ಎಂದು ಭಾವಿಸಿದರು.

ಮತ್ತೆ ಹುಡುಕಿಕೊಂಡು ಬಂದ ಅದೃಷ್ಟ

ಕಾಲಕ್ರಮೇಣ ಪೋಷಕರ ಆರೋಗ್ಯ ಸುಧಾರಿಸಿತು. ಇದೇ ಸಮಯದಲ್ಲಿ ವಿವೇಕ್ ಬಿಡುವಿನ ವೇಳೆಯಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಕೋಡಿಂಗ್ ಕಲಿಸಲು ಪ್ರಾರಂಭಿಸಿದರು ಮತ್ತು ರಾತ್ರಿಯ ವೇಳೆ ಫ್ರೀಲಾನ್ಸ್ ಸಾಫ್ಟ್‌ವೇರ್ ಪ್ರಾಜೆಕ್ಟ್‌ಗಳನ್ನು ಮಾಡತೊಡಗಿದರು. ವಿವೇಕ್ ಅವರ ಈ ಸಮರ್ಪಣೆ, ಬುದ್ಧಿವಂತಿಕೆ ಮತ್ತು ಸಂಕಷ್ಟದ ಸಮಯದ ನಿರ್ಧಾರವನ್ನು ಗಮನಿಸಿದ ಅಮೆರಿಕದ ಆ ಕಂಪನಿ, ಅವರಿಗೆ ಮತ್ತೆ ಸಂಪರ್ಕಿಸಿತು. ಆದರೆ ಈ ಬಾರಿ, ಅವರನ್ನು ಅಮೆರಿಕಕ್ಕೆ ಕರೆಸುವ ಬದಲು, ಅವರು ಕಾನ್ಪುರದಲ್ಲೇ ಇದ್ದುಕೊಂಡು ಕಂಪನಿಯ ಶಿಕ್ಷಣ ಸಂಬಂಧಿತ ಯೋಜನೆಗಳಿಗೆ ಕೆಲಸ ಮಾಡುವಂತೆ ಆಹ್ವಾನಿಸಿತು.

ಈ ಕಥೆಯು ಇಂದಿನ ಯುವ ಪೀಳಿಗೆಗೆ ಒಂದು ದೊಡ್ಡ ಪಾಠ. ಯಶಸ್ಸು ಅಂದರೆ ಕೇವಲ ಬ್ಯಾಂಕ್ ಬ್ಯಾಲೆನ್ಸ್ ಅಥವಾ ಅಮೆರಿಕದ ಜೀವನವಲ್ಲ; ಬದಲಿಗೆ ಸಂಕಷ್ಟದ ಸಮಯದಲ್ಲಿ ಹೆತ್ತವರಿಗೆ ಆಸರೆಯಾಗಿ ನಿಲ್ಲುವುದು ಮತ್ತು ಜೀವನದ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಎಂಬುದನ್ನು ವಿವೇಕ್ ಶರ್ಮಾ ಸಾಬೀತುಪಡಿಸಿದ್ದಾರೆ. "ದುಡ್ಡು ಸಂಪಾದಿಸಲು ಇಡೀ ಜೀವನವೇ ಇದೆ, ಆದರೆ ಹೆತ್ತವರ ಸೇವೆ ಮಾಡಲು ಸಿಗುವ ಸಮಯ ಬಹಳ ಕಡಿಮೆ" ಎಂಬ ವಿವೇಕ್ ಅವರ ಮಾತುಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಮನಗೆದ್ದಿವೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka