Dailyhunt
ಅಮೆರಿಕದ ಸೇನಾ ಅಧ್ಯಕ್ಷ ರ್‍ಯಾಂಡಿ ಜಾರ್ಜ್‌ ವಜಾ; ಮುಖ್ಯಸ್ಥರಿಲ್ಲದ ಸೇನೆಯನ್ನು ಇರಾನ್‌ಗೆ ಕಳುಹಿಸುವುದಾದರೂ ಹೇಗೆ?

ಅಮೆರಿಕದ ಸೇನಾ ಅಧ್ಯಕ್ಷ ರ್‍ಯಾಂಡಿ ಜಾರ್ಜ್‌ ವಜಾ; ಮುಖ್ಯಸ್ಥರಿಲ್ಲದ ಸೇನೆಯನ್ನು ಇರಾನ್‌ಗೆ ಕಳುಹಿಸುವುದಾದರೂ ಹೇಗೆ?

Vijay Karnataka 1 week ago

ವಾಷಿಂಗ್ಟನ್‌ ಡಿಸಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಇರಾನ್‌ ವಿರುದ್ಧದ ತಮ್ಮ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುಡುಗಿದ್ದಾರೆ. ಈ ರಣಕಹಳೆಯ ನಡುವೆಯೇ ಅಮೆರಿಕದ ರಕ್ಷಣಾ ಕೇಂದ್ರ ಪೆಂಟಗನ್‌ನಲ್ಲಿ ಭಾರೀ ಗೊಂದಲಗಳು ಭೂಕಂಪನ ಸೃಷ್ಟಿಯಾಗಿದೆ.

ಯುದ್ಧದ ತಂತ್ರಗಾರಿಕೆ ಹೆಣೆಯಬೇಕಿದ್ದ ಅಮೆರಿಕದ ಸೇನಾ ಮುಖ್ಯಸ್ಥ ಜನರಲ್ ರ್‍ಯಾಂಡಿ ಜಾರ್ಜ್‌ ಅವರನ್ನು, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ದಿಢೀರನೆ ಸೇವೆಯಿಂದ ವಜಾಗೊಳಿಸಿದ್ದಾರೆ.

ಹೌದು, ಇರಾನ್ ಮೇಲೆ 2-3 ವಾರಗಳಲ್ಲಿ ಭೀಕರ ದಾಳಿ ಮಾಡುವುದಾಗಿ ಡೊನಾಲ್ಡ್ ಟ್ರಂಪ್‌ ಹೇಳಿಕೆ ನೀಡಿದ್ದಾರೆ. ಆದರೆ ಈ ದಾಳಿಗಳನ್ನು ಯೋಜಿಸಬೇಕಾದ ಸೇನಾ ಮುಖ್ಯಸ್ಥರನ್ನೇ ಪೀಟ್‌ ಹೆಗ್ಸೆತ್‌ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದಾರೆ. ಕೇವಲ ರ್‍ಯಾಂಡಿ ಜಾರ್ಜ್‌ ಮಾತ್ರವಲ್ಲದೇ, ಆರ್ಮಿ ಟ್ರಾನ್ಸ್‌ಫಾರ್ಮೇಶನ್ ಮತ್ತು ಟ್ರೈನಿಂಗ್ ಕಮಾಂಡ್ ಮುಖ್ಯಸ್ಥ ಜನರಲ್ ಡೇವಿಡ್ ಹಾಡ್ನೆ ಹಾಗೂ ಆರ್ಮಿ ಚಾಪ್ಲಿನ್ ಕಾರ್ಪ್ಸ್ ಮುಖ್ಯಸ್ಥ ಮೇಜರ್ ಜನರಲ್ ವಿಲಿಯಂ ಗ್ರೀನ್ ಜೂನಿಯರ್ ಅವರಿಗೂ ಗೇಟ್‌ಪಾಸ್‌ ನೀಡಲಾಗಿದೆ.

ಸಾಮಾನ್ಯವಾಗಿ ಅಮೆರಿಕದ ಸೇನಾ ಮುಖ್ಯಸ್ಥರ ಅಧಿಕಾರಾವಧಿ ನಾಲ್ಕು ವರ್ಷಗಳು. 2023ರಲ್ಲಿ ಯುಎಸ್‌ ಆರ್ಮಿ ಚೀಫ್‌ ಆಗಿ ಅಧಿಕಾರ ವಹಿಸಿಕೊಂಡಿದ್ದ ಜನರಲ್ ರ್‍ಯಾಂಡಿ ಜಾರ್ಜ್‌ ಅವರ ಅಧಿಕಾರಾವಧಿ 2027ರಲ್ಲಿ ಪೂರ್ಣಗೊಳ್ಳಬೇಕಿತ್ತು. ಅಂದರೆ ಅವರ ಸೇವಾವಧಿ ಪೂರ್ಣಗೊಳ್ಳಲು ಇನ್ನೂ ಒಂದೂವರೆ ವರ್ಷ ಬಾಕಿ ಇತ್ತು. ಆದರೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ರ್‍ಯಾಂಡಿ ಅವರನ್ನು ತಕ್ಷಣವೇ ರಾಜೀನಾಮೆ ನೀಡಿ ನಿವೃತ್ತರಾಗುವಂತೆ ಸೂಚಿಸಿದ್ದಾರೆ.


ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್, "ಜನರಲ್ ರ್‍ಯಾಂಡಿ ಎ. ಜಾರ್ಜ್ ಅವರು ಸೇನೆಯ 41ನೇ ಮುಖ್ಯಸ್ಥರ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿವೃತ್ತರಾಗಲಿದ್ದಾರೆ. ಅಮೆರಿಕ ಸೇನೆಗೆ ಮತ್ತು ನಮ್ಮ ರಾಷ್ಟ್ರಕ್ಕೆ ಜನರಲ್ ಜಾರ್ಜ್‌ ಅವರು ದಶಕಗಳ ಕಾಲ ನೀಡಿದ ಸೇವೆಗೆ ಯುದ್ಧ ಇಲಾಖೆ ಕೃತಜ್ಞವಾಗಿದೆ. ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ನಾವು ಹಾರೈಸುತ್ತೇವೆ" ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್‌ನನ್ನು ಶಿಲಾಯುಗಕ್ಕೆ ತಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇರಾನ್‌, ಅಮೆರಿಕದ ಸೈನಿಕರನ್ನೇ ಶಿಲಾಯುಗಕ್ಕೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಟ್ರಂಪ್‌ ಆಡಳಿತ ತನ್ನ ಸೇನಾ ಮುಖ್ಯಸ್ಥರನ್ನೇ ಸೇವೆಯಿಂದ ನಿವೃತ್ತಿಯಾಗುವಂತೆ ಮಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಒಂದು ಕಡೆ ಇರಾನ್ ವಿರುದ್ಧ ಅಮೆರಿಕ ಸೇನೆ ಕಾದಾಡುತ್ತಿದೆ. ಇನ್ನೊಂದು ಕಡೆ ಪೆಂಟಗನ್‌ನಲ್ಲಿ ಅಮೆರಿಕ ಸೇನೆಯ ಉನ್ನತ ನಾಯಕರ ತಲೆದಂಡವಾಗುತ್ತಿದೆ. ಇದು ಸಹಜವಾಗಿಯೇ ಅಮೆರಿಕ ಸೇನೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಅಪಾಯವಿದೆ ಎಂದು ಅನೇಕ ಮಿಲಿಟರಿ ಪರಿಣಿತರು ಮತ್ತು ರಕ್ಷಣಾ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.


ಯುದ್ಧದ ಸಮಯದಲ್ಲಿ ಮಿಲಿಟರಿ ನಾಯಕತ್ವದ ಸ್ಥಿರತೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ನಾಯಕತ್ವದಲ್ಲಿ ಪದೇ ಪದೇ ಬದಲಾವಣೆಗಳಾದರೆ ಅದು ರಣರಂಗದಲ್ಲಿ ಹೋರಾಡುವ ಸೈನಿಕರ ಮೇಲೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಪೀಟ್ ಹೆಗ್ಸೆತ್ ಅವರ ಈ ಸರಣಿ ವಜಾ ಪ್ರಕ್ರಿಯೆಗಳು, ಸೇನೆಯಲ್ಲಿ ಗೊಂದಲವನ್ನು ಸೃಷ್ಟಿಸುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka