ಬೆಂಗಳೂರು: ನಮ್ಮ ಮೆಟ್ರೋ 3ನೇ ಹಂತಕ್ಕೆ (ಕೆಂಪು ಮಾರ್ಗ) ಕೇಂದ್ರದ ಒಪ್ಪಿಗೆ ವಿಳಂಬವಾದಷ್ಟೂ ಎಲ್ಲ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್‌ಡಿ) ಅಳವಡಿಕೆಯ ಕಾರ್ಯವೂ ತಡವಾಗಲಿದೆ. ಈ ಹಂತದ ಡಿಪಿಆರ್‌ಗೆ ಒಪ್ಪಿಗೆ ಸೂಚಿಸುವುದಕ್ಕೆ ಯಾವುದೇ ಡೆಡ್‌ಲೈನ್ ಇಲ್ಲ ಎಂದೂ ಕೇಂದ್ರ ಸರಕಾರ ಹೇಳಿರುವುದರಿಂದ ನಿಖರವಾಗಿ ಎಂದಿನಿಂದ ಪಿಎಸ್‌ಡಿ ಅಳವಡಿಕೆ ಶುರುವಾಗಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ತಿಳಿಸಿದೆಮೆಟ್ರೋದ ಈಗಿನ ಹಾಗೂ ಭವಿಷ್ಯದ ಯೋಜನೆಗಳೂ ಸೇರಿ 191 ನಿಲ್ದಾಣಗಳು ನಿರ್ಮಾಣವಾಗಲಿವೆ.
ಈ ಪೈಕಿ 177 ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆಗೆ ಬಿಎಂಆರ್‌ಸಿಎಲ್ ನೀಲನಕ್ಷೆ ರೂಪಿಸಿಕೊಂಡಿದೆ. ಇದಕ್ಕೆ ಸುಮಾರು 1,274 ಕೋಟಿ ರೂ. ಖರ್ಚಾಗಬಹುದು ಎಂದು ಅಂದಾಜು ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿದೆ. ಸಾಮಗ್ರಿ ಖರೀದಿಗಾಗಿ 747 ಕೋಟಿ ರೂ., ಸಿವಿಲ್ ಕಾಮಗಾರಿಗಳಿಗಾಗಿ 317 ಕೋಟಿ ರೂ. ಹಾಗೂ ಸಿಗ್ನಲಿಂಗ್, ಟೆಲಿಕಾಂ ಮತ್ತು ವಿದ್ಯುತ್ ಮಾರ್ಪಾಡುಗಳಿಗಾಗಿ 210 ಕೋಟಿ ರೂ. ಇದರಲ್ಲಿ ಸೇರಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಪ್ರತ್ಯೇಕವಾಗಿ ಸಲ್ಲಿಸದೆ, ನಮ್ಮ ಮೆಟ್ರೊ 3 'ಎ' ಹಂತ ಹೆಬ್ಬಾಳ-ಸರ್ಜಾಪುರ ಯೋಜನೆಯ ಡಿಪಿಆರ್ ಜತೆಗೆ ಸೇರ್ಪಡೆ ಮಾಡಿ ಕಳಿಸಲಾಗಿದೆ. ಇದರಿಂದಾಗಿ 3 'ಎ' ಹಂತದ ಯೋಜನೆಗೆ ಕೇಂದ್ರದ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಒಪ್ಪಿಗೆ ನೀಡುವತನಕ ಪಿಎಸ್‌ಡಿ ಅಳವಡಿಕೆಗೂ ಒಪ್ಪಿಗೆ ಸಿಗುವುದಿಲ್ಲ.
ನಮ್ಮ ಮೆಟ್ರೋದ ನೇರಳೆ, ಹಸಿರು ಮತ್ತು ಹಳದಿ ಮಾರ್ಗ ಸೇರಿ 83 ನಿಲ್ದಾಣಗಳಿವೆ.ಈಗಿರುವ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆ ಸುಲಭವಾಗಿಲ್ಲ. ರಾತ್ರಿ ವೇಳೆ ಅಂದರೆ ರೈಲು ಕಾರ್ಯಾಚರಣೆ ಇಲ್ಲದಿರುವಾಗ ತಾಂತ್ರಿಕ ಕಾರ್ಯಗಳನ್ನು ನಡೆಸಬೇಕಿದೆ. ಕೆಲ ವೇಳೆ ರೈಲುಗಳ ಸಂಚಾರ ನಿಧಾನಗೊಳಸಬೇಕಾದ ಅಥವಾ ತಡೆ ಹಿಡಿಯಬೇಕಾದ ಸಂದರ್ಭ ಬರಬಹುದು. 3 'ಎ' ಹಂತಕ್ಕೆ ಎಷ್ಟು ಬೇಗ ಅನುಮತಿ ಸಿಗುತ್ತದೋ ಅಷ್ಟು ಬೇಗ ಪಿಎಸ್‌ಡಿ ಅಳವಡಿಕೆ ಕಾಮಗಾರಿ ಆರಂಭಿಸಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಜೆಸ್ಟಿಕ್, ಆರ್.ವಿ.ರಸ್ತೆಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿಸ್ಟೀಲ್ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಮೆಟ್ರೊ ರೈಲು ಬಂದು ನಿಲ್ಲುವ ಎರಡು ದ್ವಾರಗಳ ಎರಡು ಬದಿಯೂ ಭದ್ರತಾ ಸಿಬ್ಬಂದಿ ನೇಮಿಸಿ ಪ್ರಯಾಣಿಕರು ಟ್ರ್ಯಾಕ್‌ನ ಸಮೀಪ ಹೋಗದಂತೆ ಇಡೀ ದಿನ ಎಚ್ಚರಿಕೆ ವಹಿಸಲಾಗುತ್ತಿದೆ. ಆದಾಗ್ಯೂ 2024ರಲ್ಲಿ ನಮ್ಮ ಮೆಟ್ರೊದಲ್ಲಿಅನಧಿಕೃತವಾಗಿ ಟ್ರ್ಯಾಕ್‌ಗೆ ಇಳಿದ 8 ಪ್ರಕರಣಗಳು ಹಾಗೂ 2 ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿವೆ. ಕಳೆದ ವರ್ಷ ಟ್ರ್ಯಾಕ್‌ಗೆ ಇಳಿದ 5 ಪ್ರಕರಣ ಹಾಗೂ 2 ಆಕಸ್ಮಿಕವಾಗಿ ಇಳಿದ ಪ್ರಕರಣಗಳು ಹಾಗೂ ಈ ವರ್ಷ ಒಂದು ಆತ್ಮಹತ್ಯೆ ಸೇರಿದಂತೆ 5 ಟ್ರ್ಯಾಕ್‌ಗೆ ಇಳಿದ ಪ್ರಕರಣ ದಾಖಲಾಗಿದೆ.
ಪರಿಷ್ಕೃತ ಡಿಪಿಆರ್ ಸಲ್ಲಿಕೆ
ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾದ ಕಾರಣ ಬಿಎಂಆರ್‌ಸಿಎಲ್ ಪರಿಷ್ಕೃತ ಅಂದಾಜು ಸಿದ್ಧಪಡಿಸಿ ಕೇಂದ್ರಕ್ಕೆ ಪುನಃ ಡಿಪಿಆರ್ ಕಳಿಸಿದೆ. ಈ ಮೊದಲು 28,405 ಕೋಟಿ ರೂ. ಇದ್ದ ಈ ಯೋಜನೆ ಈಗ 25,999 ಕೋಟಿ ರೂ. ವೆಚ್ಚಕ್ಕೆ ಇಳಿಕೆಯಾಗಿದೆ. 37 ಕಿ.ಮೀ.ನ ಹೆಬ್ಬಾಳ-ಸರ್ಜಾಪುರ ಕಾರಿಡಾರ್‌ಗೆ ಕರ್ನಾಟಕ ಸರಕಾರ ಅನುಮೋದನೆ ನೀಡಿದೆ. ಕೇಂದ್ರದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯ ಒಪ್ಪಿಗಾಗಿ ಕಾಯಲಾಗುತ್ತಿದೆ.
