ಕಣ್ಣೂರು: ನನಗೆ ಬಿಜೆಪಿ ಹೈಕಮಾಂಡ್ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಜವಾಬ್ದಾರಿಯನ್ನು ನೀಡಿದೆ. ಅದರಂತೆ ನಾನು ನಾಡಿನ ಮೂಲೆ ಮೂಲೆಗೂ ಸಂಚರಿಸಿ, ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ.." ಇದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮತ್ತು ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಚಹರೆ ಕೆ.
ಅಣ್ಣಾಮಲೈ ಅವರ ಸ್ಪಷ್ಟನುಡಿ.
ಪಕ್ಷನಿಷ್ಠೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಈ ಪರಿಯ ಸ್ಪಷ್ಟತೆಯನ್ನು ಪ್ರದರ್ಶಿಸಿದ ಅಣ್ಣಾಮಲೈ ಅವರಿಗೆ ಇದೀಗ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಅನೇಕರು ಅಣ್ಣಾಮಲೈ ಅವರ ಪಕ್ಷನಿಷ್ಠೆಯನ್ನು ಕೊಂಡಾಡುತ್ತಿದ್ದಾರೆ. ಇನ್ನೂ ಕೆಲವರು ಸಿಂಗಂ ಖ್ಯಾತಿಯ ತಮ್ಮ ಮೆಚ್ಚಿನ ರಾಜಕಾರಣಿಗೆ ಟಿಕೆಟ್ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಣ್ಣಾಮಲೈ ಅವರನ್ನು ಹೊರಗಿಟ್ಟು ತಮಿಳುನಾಡು ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ.
ಕೇರಳದ ಕಣ್ಣೂರಿನಲ್ಲಿ ಮಾಧ್ಯುಮಗಳೊಂದಿಗೆ ಮಾತನಾಡಿದ ಕೆ. ಅಣ್ಣಾಮಲೈ, "ಈ ಚುನಾವಣೆಯಲ್ಲಿ ತಮಿಳುನಾಡಿನಾದ್ಯಂತ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ನನ್ನ ಪಾತ್ರ. ಪಕ್ಷವು 7ನೇ ತಾರೀಖಿನವರೆಗೆ ಪುದುಚೇರಿ ಮತ್ತು ಕೇರಳದಲ್ಲಿ ಪ್ರಚಾರ ಮಾಡುವ ಜವಾಬ್ದಾರಿಯನ್ನು ನನಗೆ ನೀಡಿದೆ. 7ರಿಂದ 23ರವರೆಗೆ ನಾನು ತಮಿಳುನಾಡಿನಾದ್ಯಂತ ಎಲ್ಲಾ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕು. ಅದು ಪಕ್ಷವು ನನಗೆ ನೀಡಿದ ಜವಾಬ್ದಾರಿ. ನಾನು ಆ ಜವಾಬ್ದಾರಿಯನ್ನು ಪೂರೈಸುತ್ತೇನೆ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಪಕ್ಷನಿಷ್ಠೆಗೆ ಅಭಿಮಾನಿಗಳ ಸಲಾಂ:
ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುವ ವಿಷಯವಾಗಿ ಅಣ್ಣಾಮಲೈ ಅವರಲ್ಲಿರುವ ಈ ಸ್ಪಷ್ಟತೆ ಇದೀಗ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ತಾವು ಬಯಸಿದ ಹುದ್ದೆ ಅಥವಾ ಜವಾಬ್ದಾರಿ ಸಿಗಲಿಲ್ಲ ಎಂಬ ಕಾರಣಕ್ಕೆ ಹಲವು ಬಾರಿ ಪಕ್ಷಾಂತರ ಮಾಡಿದ ರಾಜಕಾರಣಿಗಳ ನಡುವೆ, ಅಣ್ಣಾಮಲೈ ಅವರು ಪ್ರತ್ಯೇಕವಾಗಿ ಕಾಣುತ್ತಾರೆ ಎಂಬುದು ಅವರ ಬೆಂಬಲಿಗರೆ ಅನಿಸಿಕೆಯಾಗಿದೆ.ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಮೇಲೆ ಕೋಪವಾಗಲಿ, ಬೇಸರವಾಗಲಿ ವ್ಯಕ್ತಪಡಿಸಿದ ಅಣ್ಣಾಮಲೈ, ಪಕ್ಷ ನೀಡಿರುವ ಪ್ರಚಾರ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಹೇಳಿದ್ದಾರೆ. ಇದು ತಮಿಳುನಾಡಿನ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯವನ್ನು ತಂಬಿದೆ ಎಂಬುದು ಅನೇಕರ ಅಭಿಪ್ರಾಯ.
ಚುನಾವಣಾ ರಾಜಕೀಯದಿಂದ ದೂರ ಸರಿದಿರುವ ಅಣ್ಣಾಮಲೈ, ತಮಿಳುನಾಡಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಜವಾಬ್ದಾರಿಯಿಂದ ಮಾತ್ರ ವಿಮುಖರಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಅಣ್ಣಾಮಲೈ ಸಜ್ಜಾಗಿದ್ದಾರೆ. ತಮಗೆ ಟಿಕೆಟ್ ಸಿಗದಿದ್ದರೂ, ಪಕ್ಷ ಮತ್ತು ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಅವರ ನಿಲವು ಜನರ ಮೆಚ್ಚುಗೆ ಗಳಿಸಿದೆ.
ಏನೆಲ್ಲಾ ಪ್ರತಿಕ್ರಿಯೆಗಳು?
ಇನ್ನು ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿರುವ ಕೆ. ಅಣ್ಣಾಮಲೈ ನಿರ್ಧಾರಕ್ಕೆ, ಅವರ ಅಪಾರ ಬೆಂಬಲಿಗರು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. "ಒಂದು ಹಕ್ಕಿ ನೆಲದ ಮೇಲೆ ವಿಶ್ರಾಂತಿ ಪಡೆಯಬಹುದು, ಆದರೆ ಅದು ತಲುಪಬೇಕಾದ ಎತ್ತರವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅಣ್ಣಾಮಲೈ ಅವರನ್ನು ಇನ್ನೂ ಕಡಿಮೆ ಅಂದಾಜು ಮಾಡುವವರು ಅವರ ಶಕ್ತಿ ಮತ್ತು ಜನರಲ್ಲಿ ಅವರ ಬೆಳೆಯುತ್ತಿರುವ ಪ್ರಭಾವವನ್ನು ಇನ್ನೂ ಅರ್ಥಮಾಡಿಕೊಳ್ಳಬೇಕಾಗಿದೆ. ಅವರನ್ನು ಕಡಿಮೆ ಅಂದಾಜು ಮಾಡಿದರೆ,ನಷ್ಟ ಅವರದಾಗುವುದಿಲ್ಲ, ನಷ್ಟ ಬಿಜೆಪಿಯದ್ದಾಗಿರುತ್ತದೆ" ಎಂದು ಓರ್ವ ಅಭಿಮಾನಿ ತಮ್ಮ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತೋರ್ವ ಬೆಂಬಲಿಗ, "ನನಗೆ ಅನಿಸುವಂತೆ ಬಿಜೆಪಿಯು ಕೆ. ಅಣ್ಣಾಮಲೈ ಅವರಂತಹ ಶಕ್ತಿ ಕೇಂದ್ರಕ್ಕಾಗಿ ಬೇರೆ ಯೋಜನೆಗಳನ್ನು ಹೊಂದಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೋರ್ವ, "ಬಿಜೆಪಿಯಲ್ಲಿ ದೊಡ್ಡ ರಾಷ್ಟ್ರೀಯ ಪಾತ್ರಕ್ಕಾಗಿ ಕೆ. ಅಣ್ಣಾಮಲೈ ಅವರನ್ನು ಸ್ಪಷ್ಟವಾಗಿ ಸಿದ್ಧಪಡಿಸಲಾಗುತ್ತಿದೆ. ಪುದುಚೇರಿ, ಕೇರಳ ಮತ್ತು ನಂತರ ಇಡೀ ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎನ್‌ಡಿಎಗಾಗಿ ಪ್ರಚಾರ ಮಾಡುವುದು, ಪಕ್ಷದ ನಾಯಕತ್ವವು ಅವರ ಮೇಲೆ ಹೊಂದಿರುವ ಬೃಹತ್ ನಂಬಿಕೆಯನ್ನು ತೋರಿಸುತ್ತದೆ" ಎಂದು ಅಂದಾಜಿಸಿದ್ದಾರೆ.
ಮತ್ತೋರ್ವ ಬಿಜೆಪಿ ಬೆಂಬಲಿಗ, "ಕೆ. ಅಣ್ಣಾಮಲೈ ಅವರ ನಿರ್ಧಾರ ಸರಿಯಾಗಿದೆ. ನನ್ನ ದಾರಿ ನನಗೆ ಎನ್ನುವುದು ರಾಜಕೀಯವಾಗಿ ಸ್ವಯಂ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಹೈಕಮಾಂಡ್ ಡಿಎಂಕೆಯನ್ನು ಸೋಲಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಬಿಜೆಪಿ ಘಟಕ ಅದನ್ನು ಸಾಧಿಸಲು ಹೊರಟಿದೆ. ರಾಜಕೀಯದಲ್ಲಿ, ಅರ್ಹತೆ ಯಾವುದಕ್ಕೂ ಮುಖ್ಯವಲ್ಲ. ನಾಯಕತ್ವವು ಒಮ್ಮೆ ಅವರನ್ನು ನಂಬಿತ್ತು ಆದರೆ ಅವರು ಆ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು" ಎಂದು ಹೇಳಿದ್ದಾರೆ.
ಅದೆನೆ ಇರಲಿ, ಅಣ್ಣಾಮಲೈ ಅವರು ಟಿಕೆಟ್ ಸಿಗದಿದ್ದರೂ, ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎನ್‌ಡಿಎ ಪರ ಪ್ರಚಾರದ ಜವಾಬ್ದಾರಿಯನ್ನು ನಿರ್ವವಹಿಸುವುದಾಗಿ ಹೇಳಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಬಹುದು. 2020ರಲ್ಲಿ ತಮ್ಮ ಐಪಿಎಸ್ ವೃತ್ತಿಗೆ ರಾಜೀನಾಮೆ ನೀಡಿದ್ದ ಅಣ್ಣಾಮಲೈ, ಬಿಜೆಪಿ ಸೇರ್ಪಡೆಯಾಗಿದ್ದರು. ರಾಷ್ಟ್ರವಾದ ಮೆಚ್ಚಿ ಬಿಜೆಪಿ ಸೇರುತ್ತಿರುವುದಾಗಿ ಅಣ್ಣಾಮಲೈ ಹೇಳಿಕೆ ನೀಡಿದ್ದರು.

