Dailyhunt
ಅಂತಾರಾಜ್ಯ ಮೆಟ್ರೋ ಜೋಡಣೆ ವಿಚಾರ ಮತ್ತೆ ಮುನ್ನೆಲೆಗೆ ;  ಅಂತಿಮ ನಿಲ್ದಾಣ ಸಂಪರ್ಕಕ್ಕೆ  ಯೋಚನೆ

ಅಂತಾರಾಜ್ಯ ಮೆಟ್ರೋ ಜೋಡಣೆ ವಿಚಾರ ಮತ್ತೆ ಮುನ್ನೆಲೆಗೆ ; ಅಂತಿಮ ನಿಲ್ದಾಣ ಸಂಪರ್ಕಕ್ಕೆ ಯೋಚನೆ

Vijay Karnataka 1 week ago

ಬೆಂಗಳೂರು : ಕರ್ನಾಟಕ - ತಮಿಳುನಾಡು ನಡುವಿನ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಜೋಡಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ತಾಂತ್ರಿಕವಾಗಿ ಮೆಟ್ರೊ ವ್ಯವಸ್ಥೆ ಹೊಂದಾಣಿಕೆ ಸಾಧ್ಯವಿಲ್ಲದ ಕಾರಣ ಎರಡೂ ಕಡೆಯ ಅಂತಿಮ ನಿಲ್ದಾಣಗಳನ್ನು ಸಂಪರ್ಕಿಸುವ ಸೌಲಭ್ಯ ಕಲ್ಪಿಸಿ ಪ್ರಯಾಣಿಕರ ಓಡಾಟ ಸುಲಭವಾಗಿಸಲು ಯೋಚಿಸಲಾಗುತ್ತಿದೆ.

ನಮ್ಮ ಮೆಟ್ರೊ ಮತ್ತು ಸಿಎಂಆರ್‌ಎಲ್‌ (ಚೆನ್ನೈ ಮೆಟ್ರೊ ರೈಲ್‌ ಲಿ. ) ಮೆಟ್ರೋವವನ್ನು ಹೊಸೂರು ಕೈಗಾರಿಕಾ ವಲಯದಲ್ಲಿ ಸಂಯೋಜಿಸುವ ಯೋಜನೆ ಇದಾಗಿತ್ತು. ಕೃಷ್ಣಗಿರಿ ಸಂಸದ ಎ.ಚೆಲ್ಲಕುಮಾರ್‌ ಈ ಯೋಜನೆಗೆ ಮನವಿ ಮಾಡಿದ್ದರು. ಹೀಗಾಗಿ, ಎರಡೂ ಕಡೆಯ ಗಡಿಯಿಂದ ಸೇರಿ ಸುಮಾರು 23 ಕಿಮೀ ಮೆಟ್ರೋ ವಿಸ್ತರಿಸಲು ಕಾರ್ಯಸಾಧ್ಯತಾ ಅಧ್ಯಯನ ಕೈಗೊಳ್ಳಲಾಗಿತ್ತು.

ಆದರೆ, ತಮಿಳುನಾಡು ಮೆಟ್ರೋ ಓವರ್‌ಹೆಡ್‌ ವಿದ್ಯುತ್‌ ಪೂರೈಕೆ 25 ಕೆವಿ ಎಸಿ ಓವರ್‌ಹೆಡ್‌ ಕಟಿನರಿ ವ್ಯವಸ್ಥೆ ಆಧಾರಿತವಾಗಿದ್ದರೆ ನಮ್ಮ ಮೆಟ್ರೊ 750 ವಿ ಡಿಸಿ ಥರ್ಡ್‌ರೈಡ್‌ ವ್ಯವಸ್ಥೆ ಬಳಸುತ್ತಿದೆ. ಜತೆಗೆ, ಎರಡರದ್ದೂ ಸಿಗ್ನಲಿಂಗ್‌ ವ್ಯವಸ್ಥೆ, ಪ್ಲಾಟ್‌ಫಾಮ್೯ ಎತ್ತರ, ವಿದ್ಯುತ್‌ಜಾಲ ಕೂಡ ಭಿನ್ನವಾಗಿದ್ದು, ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ, ಒಟ್ಟಾರೆ ಎರಡು ಮೆಟ್ರೊ ನೇರ ಜೋಡಣೆ ಕಾರ್ಯಸಾಧುವಲ್ಲಎಂದು ಬಿಎಂಆರ್‌ಸಿಎಲ್‌ನ (ಬೆಂಗಳೂರು ಮೆಟ್ರೊ ರೈಲು ನಿಗಮ ) ವರದಿ ನೀಡಿತ್ತು.

ಎಫ್‌ಒಬಿ ಸಂಪರ್ಕ?

ಅದೇ ವೇಳೆ ಬಿಎಂಆರ್‌ಸಿಎಲ್‌ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಹಳದಿ ಮಾರ್ಗದ ಕೊನೆಯ ನಿಲ್ದಾಣ ಬೊಮ್ಮಸಂದ್ರದಿಂದ 11 ಕಿಮೀ ಮಾರ್ಗ ವಿಸ್ತರಿಸಿ ಅತ್ತಿಬೆಲೆವರೆಗೆ ಕೊಂಡೊಯ್ದು ನಿಲ್ದಾಣ ನಿರ್ಮಿಸುವ ಅಧ್ಯಯನವನ್ನೂ ನಡೆಸಿತ್ತು. ಈ ವಿಸ್ತರಣೆಯ ಪ್ರಸ್ತಾಪವನ್ನು ಬಿಎಂಆರ್‌ಸಿಎಲ್‌ ರಾಜ್ಯ ಸರಕಾರದ ಮುಂದಿಟ್ಟಿದೆ.

ಅತ್ತ, ಸಿಎಂಆರ್‌ಎಲ್‌ ತನ್ನ ಗಡಿಯ ಅಂತ್ಯದವರೆಗೆ ಮೆಟ್ರೋ ಮಾರ್ಗ ವಿಸ್ತರಿಸಿ ನಿಲ್ದಾಣ ನಿರ್ಮಿಸಿಕೊಳ್ಳಬಹುದು. ಹೀಗೆ ಎರಡೂ ನಿಲ್ದಾಣಗಳ ನಡುವೆ ಸುಮಾರು 100 ಮೀ. ಒಳಗೆ ಅಂತರ ಇರುವಂತೆ ನೋಡಿಕೊಳ್ಳಬಹುದು. ಎರಡೂ ನಿಲ್ದಾಣಗಳನ್ನು ಪಾದಚಾರಿ ಮೇಲ್ಸೇತುವೆ ಮೂಲಕ ಸಂಪರ್ಕಿಸಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಜತೆಗೆ, ನಮ್ಮ ಮೆಟ್ರೋವನ್ನು ಬೊಮ್ಮಸಂದ್ರದಿಂದ ಗಡಿದಾಟಿ ಹೊಸೂರಿಗೆ ಕೊಂಡೊಯ್ಯುವುದು ಸುಲಭವಲ್ಲ. ಇದಕ್ಕೆ ಕೇಂದ್ರ ಸರಕಾರದ ಅಧಿಸೂಚನೆಯಂತಹ ದೀರ್ಘಾವಧಿ ಸಮಯ ಹಿಡಿಯುತ್ತದೆ. ಹೀಗಾಗಿ, ಎರಡು ಮೆಟ್ರೋ ವ್ಯವಸ್ಥೆಗಳನ್ನು ಸಂಯೋಜಿಸದೆ ಪೂರಕ ಸೌಲಭ್ಯ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಚರ್ಚೆ ನಡೆದಿದೆ.


ಇದರಿಂದ ಅಂತಿಮ ಎರಡು ನಿಲ್ದಾಣಗಳು ಇಂಟರ್‌ಚೇಂಜ್‌ ರೀತಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ. ಎರಡೂ ಮೆಟ್ರೋ ವ್ಯವಸ್ಥೆಗಳು ತಮ್ಮದೇ ಆದ ಕಾರ್ಯವಿಧಾನ ಅನುಸರಿಸಲಿವೆ. ಇದರಿಂದ ರೈಲುಗಳ ನಿರ್ವಹಣೆ ಹೊಣೆ ಸೇರಿ ಇತರೆ ತಾಂತ್ರಿಕ ಗೊಂದಲ ಇರುವುದಿಲ್ಲಎಂದು ಮೆಟ್ರೊ ಅಧಿಕಾರಿಗಳು ಹೇಳುತ್ತಾರೆ.


ವಿರೋಧವೂ ಇದೆ:

ಕರ್ನಾಟಕ - ತಮಿಳುನಾಡು ಮೆಟ್ರೋ ಯೋಜನೆಗೆ ಕನ್ನಡಪರ ಸಂಘಟನೆಗಳ ವಿರೋಧವೂ ಇದೆ. ಈಗಾಗಲೇ ಹೊಸೂರು ಇಂಡಸ್ಟ್ರಿಯಲ್‌ ಪ್ರದೇಶ ರಾಜ್ಯದ ಕೈಗಾರಿಕೆಗಳನ್ನು ಹೈಜಾಕ್‌ ಮಾಡುತ್ತಿದೆ. ಇಲ್ಲಿನ ಕಂಪನಿಗಳನ್ನು ಸೆಳೆಯುತ್ತಿದೆ. ಜತೆಗೆ, ಕಾರ್ಮಿಕರ ಅಭಾವಕ್ಕೂ ಕಾರಣವಾಗಿದೆ. ಮೆಟ್ರೋ ಜೋಡಣೆಯಾದಲ್ಲಿ ತಮಿಳುನಾಡಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಕರ್ನಾಟಕಕ್ಕೆ ತೊಂದರೆಯೇ ಆಗಲಿದೆ ಎಂಬ ಭಾವನೆ ಇಲ್ಲಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka