Dailyhunt
ಬಾಹ್ಯಾಕಾಶದಿಂದ ಆರ್ಟೆಮಿಸ್‌-2 ಗಗನಯಾತ್ರಿಗಳು ಕ್ಲಿಕ್ಕಿಸಿದ ಭೂಮಿಯ ಚಿತ್ರ; ಈ ಅಮೂಲ್ಯ ಆಸ್ತಿಯ ಒಡೆಯರು ಬಡಿದಾಡುವುದೇ ವಿಚಿತ್ರ

ಬಾಹ್ಯಾಕಾಶದಿಂದ ಆರ್ಟೆಮಿಸ್‌-2 ಗಗನಯಾತ್ರಿಗಳು ಕ್ಲಿಕ್ಕಿಸಿದ ಭೂಮಿಯ ಚಿತ್ರ; ಈ ಅಮೂಲ್ಯ ಆಸ್ತಿಯ ಒಡೆಯರು ಬಡಿದಾಡುವುದೇ ವಿಚಿತ್ರ

Vijay Karnataka 2 weeks ago

ವಾಷಿಂಗ್ಟನ್‌ ಡಿಸಿ: ಸಕಲ ಜೀವರಾಶಿಗಳನ್ನು ತನ್ನ ಮಡಿಲಲ್ಲಿ ಸಲಹುತ್ತಿರುವ ವಸುಧೆ, ಯಾವುದೇ ಕಾರಣಕ್ಕೂ ಯಾರನ್ನೂ ದೂರ ತಳ್ಳುವುದಿಲ್ಲ. ಎಲ್ಲ ಜೀವಿಗಳನ್ನೂ ಒಂದೇ ರೀತಿಯಲ್ಲಿ ನೋಡುವ ಆಕೆ, ತಾಯಿ ಪ್ರೀತಿಯನ್ನು ಸಮಾನವಾಗಿ ಹಂಚುತ್ತಾಳೆ. ಅಷ್ಟೇ ಅಲ್ಲ ಈ ವಸುಧೆ ಗೋಚರ ಬ್ರಹ್ಮಾಂಡದಲ್ಲಿ ನಾವು ಇದುವರೆಗೂ ನೋಡಿದ ಅತ್ಯಂತ ಸುಂದರ ಗ್ರಹ.

ಇಷ್ಟೊಂದು ಸುಂದರ ಭೂಮಿಯನ್ನು ಮಾನವ ಅದ್ಯಾವ ಕಾರಣಕ್ಕೆ ಹಾಳು ಮಾಡುತ್ತಿದ್ದಾನೋ ತಿಳಿಯದು.

ಮಧ್ಯಪ್ರಾಚ್ಯದಲ್ಲಿ ಈಗ ಯುದ್ಧದ ಕಾರ್ಮೀಡ, ಅತ್ತ ರಷ್ಯಾ-ಉಕ್ರೇನ್‌ ಕೂಡ ಮದ್ದುಗುಂಡುಗಳ ವಿಷಗಾಳಿ ಕುಡಿಯುತ್ತಾ ವರ್ಷಗಳೇ ಉರುಳಿವೆ. ಯಾರನ್ನೂ ಯಾವ ಕಾರಣಕ್ಕೂ ನೋಯಿಸಿದ ಭೂಮಿಯನ್ನು, ಮನುಷ್ಯ ತನ್ನ ದುರಾಸೆ ಮತ್ತು ಹಿಂಸಾತ್ಮಕ ಪ್ರವೃತ್ತಿಯ ಕಾರಣದಿಂದ ಪ್ರತಿಕ್ಷಣವೂ ನೋಯಿಸುತ್ತಿದ್ದಾನೆ. ವಸುಧೆಯ ಮಡಿಲನ್ನು ತನ್ನ ಘಾತಕ ಶಸ್ತ್ರಗಳಿಂದ ಬಗೆದು ಕ್ರೂರ ನಗೆ ಬೀರುತ್ತಿದ್ದಾನೆ.

ಆದರೆ ಇಷ್ಟೆಲ್ಲಾ ನೋವು ನೀಡಿದ ಬಳಿಕವೂ ಭೂಮಿ ಮಾತ್ರ ತನ್ನ ಕರ್ತವ್ಯದಿಂದ ವಿಮುಖವಾಗಿಲ್ಲ. ಭೂಮಿ ಮಾತ್ರ ತನ್ನ ಸೌಂದರ್ಯವನ್ನು ಕಳೆದುಕೊಂಡಿಲ್ಲ. ಇದಕ್ಕೆ ಪುಷ್ಠಿ ಎಂಬಂತೆ ಚಂದಿರನತ್ತ ಪ್ರಯಾಣ ಆರಂಭಿಸಿರುವ ಆರ್ಟೆಮಿಸ್‌-2 ಗಗನಯಾತ್ರಿಗಳು, ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಭೂಮಿಯ ಈ ಸುಂದರ ಫೋಟೋ ಸಾಕ್ಷಿ.


You Guys Look Great:

ಹೌದು, ಆರ್ಟೆಮಿಸ್‌-2 ಯೋಜನೆಯ ಭಾಗವಾಗಿ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದಿರನ ದರ್ಶನಕ್ಕೆ ಹೊರಟಿರುವ ನಾಸಾದ ನಾಲ್ವರು ಗಗನಯಾತ್ರಿಗಳು, ಬಾಹ್ಯಾಕಾಶದಿಂದ ಭೂಮಿಯ ಸುಂದರ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ. ಇದನ್ನು ನಾಸಾದ ಕಮಾಂಡ್‌ ಸೆಂಟರ್‌ ಸ್ವೀಕರಿಸಿದ್ದು, ನಾಸಾ ಅರ್ಥ್‌ ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದೆ. ಓರಾಯನ್‌ ನೌಕೆಯಿಂದ ಗಗನಯಾತ್ರಿಗಳು ಭೂಮಿಯ ಚಿತ್ರವನ್ನು ಸೆರೆಹಿಡಿದಿದ್ದಾರೆ.

ಮಿಷನ್ ಸ್ಪೆಷಲಿಸ್ಟ್ ಆಗಿರುವ ಕ್ರಿಸ್ಟಿನಾ ಕೋಚ್ ಅವರು ಈ ಭೂಮಿಯ ಸುಂದರ ದೃಶ್ಯವನ್ನು ನೋಡಿ ಖುಷಿಯಿಂದ, "You Guys Look Great" (ನೀವೆಲ್ಲರೂ ಅದ್ಭುತವಾಗಿ ಕಾಣುತ್ತಿದ್ದೀರಿ) ಎಂದು ಭೂಮಿಯಲ್ಲಿರುವ ಮಿಷನ್ ಕಂಟ್ರೋಲ್‌ಗೆ ಮೆಸೇಜ್ ರವಾನಿಸಿದ್ದಾರೆ. ಮಿಷನ್ ಕಮಾಂಡರ್ ರೀಡ್ ವೈಸ್‌ಮ್ಯಾನ್ ಅವರು ತಮ್ಮ ಪರ್ಸನಲ್ ಟ್ಯಾಬ್ಲೆಟ್ ಕ್ಯಾಮೆರಾದಲ್ಲಿ ಈ ಮನಮೋಹಕ ಫೋಟೋಗಳನ್ನು ಸೆರೆಹಿಡಿದಿದ್ದಾರೆ.

ಭೂಮಿಯ ಹಿಂದೆ ಸೂರ್ಯ ಮುಳುಗುತ್ತಿರುವಾಗ ಆಫ್ರಿಕಾ, ಯುರೋಪ್ ಖಂಡಗಳು ಮತ್ತು ಉತ್ತರ ಧ್ರುವದ ಅರೋರಾಗಳು (Auroras) ಕಣ್ಮನ ಸೆಳೆದಿವೆ. ಈ ಚಿತ್ರಗಳು ಕೇವಲ ವಿಜ್ಞಾನಿಗಳನ್ನಷ್ಟೇ ಅಲ್ಲ, ಜಗತ್ತಿನ ಮೂಲೆ ಮೂಲೆಯ ಜನರನ್ನು ಆಕರ್ಷಿಸುತ್ತಿವೆ. ನಾವೆಷ್ಟೇ ದೂರ ಹೋದರೂ, ನಮ್ಮ ನೆಲೆ ಇದೇ ಭೂಮಿ ಎನ್ನುವ ಭಾವನಾತ್ಮಕ ಸಂದೇಶವನ್ನು ಈ ಚಿತ್ರಗಳು ಸಾರುತ್ತಿವೆ.


ಕಳೆದ್‌ ಬುಧವಾರ (ಏ.1)ರಂದು ಆರ್ಟೆಮಿಸ್‌-2 ಬಾಹ್ಯಾಕಾಶ ನೌಕೆ ಉಡಾವಣೆ ಕಂಡಿದ್ದು, ಒಟ್ಟು 10 ದಿನಗಳ ಅವಧಿಯಲ್ಲಿ ನಾಸಾದ ನಾಲ್ವರು ಗಗನಯಾತ್ರಿಗಳು ಚಂದಿರನ ಕಕ್ಷೆಯನ್ನು ಸುತ್ತಿ ಬರಲಿದ್ದಾರೆ. ಆರ್ಟೆಮಿಸ್‌-2 ಯೋಜನೆ ಬರೋಬ್ಬರಿ 54 ವರ್ಷಗಳ ಬಳಿಕ ಚಂದ್ರನ ಕಕ್ಷೆಯತ್ತ ಮಾನವರನ್ನು ಕಳುಹಿಸಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka