ಪಾಕಿಸ್ತಾನ ತಂಡದ ಹಿರಿಯ ಆಟಗಾರ ಮೊಹಮ್ಮದ್ ರಿಝ್ವಾನ್ ಅವರ ನಾಟಕಗಳು ಒಂದೆರಡಲ್ಲ. ಮೈದಾನ ಒಳಗಿರಬಹುದು ಹೊರಗಿರಬಹುದು ಈ ಡ್ರಾಮಾ ಕಿಂಗ್ ನಟನೆ ಈ ಹಿಂದೆಯೂ ಅನೇಕ ಬಾರಿ ಟ್ರೋಲ್ ಆಗಿದ್ದಿದೆ. ಇದೀಗ ಸಿಲ್ಹೆಟ್ ನಲ್ಲಿ ಮುಗಿದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಸೋಲಿನತ್ತ ಮುಖ ಮಾಡಿದ್ದಾಗ, ಬಾಲಿವುಡ್ ಶೈಲಿಯ ಹಾಸ್ಯಭರಿತ ಘಟನೆಯೊಂದು ಮೈದಾನದಲ್ಲಿ ನಡೆದಿದೆ.
ಬಾಂಗ್ಲಾದೇಶದ ವಿಕೆಟ್ ಕೀಪರ್ ಲಿಟನ್ ದಾಸ್ ಹಾಗೂ ಇತರ ಆಟಗಾರರು ರಿಜ್ನಾನ್ ಜೊತೆ ಮಾಡಿದ ಈ ಮೋಜಿನ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಬಾಂಗ್ಲಾದೇಶ ತಂಡದ ವಿರುದ್ಧ ಪಾಕಿಸ್ತಾನ 2-0 ಅಂತರದ ಐತಿಹಾಸಿಕ "ಬಾಂಗ್ಲಾವಾಶ್" ಸರಣಿ ಸೋಲಿನ ಸುಳಿಗೆ ಸಿಲುಕಿತ್ತು. ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 4ನೇ ದಿನದ ಪಂದ್ಯದಲ್ಲಿ, 437 ರನ್‌ಗಳ ಬೃಹತ್ ಗುರಿ ಬೆನ್ನಟ್ಟುತ್ತಿದ್ದ ಪಾಕಿಸ್ತಾನ ಪರ ವಿಕೆಟ್ ಗಳು ಬೀಳುತ್ತಿದ್ದ ಸಂದರ್ಭದಲ್ಲಿ ರಿಝ್ವಾನ್ ಪ್ರತಿಹೋರಾಟ ನಡೆಸಿ ಅರ್ಧಶತಕ ಗಳಿಸಿದ್ದರು. ಈ ವೇಳೆ ಬ್ಯಾಟಿಂಗ್ ಮಾಡುವುದನ್ನು ಅರ್ಧದಲ್ಲೇ ನಿಲ್ಲಿಸಿದ ರಿಝ್ವಾನ್ ಸೈಟ್‌ಸ್ಕ್ರೀನ್ ಬಳಿ ಯಾರೋ ಓಡಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಜೆಯ ಬೆಳಕು ಕಡಿಮೆಯಾಗುತ್ತಿದ್ದರಿಂದ ರಿಝ್ವಾನ್ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಭಾವಿಸಿದ ಲಿಟನ್ ದಾಸ್, ಅವರ ಬಳಿ ಬಂದು ಆಕ್ಷೇಪ ವ್ಯಕ್ತಪಡಿಸಿದರು.
ಸ್ಟಂಪ್ ಮೈಕ್‌ನಲ್ಲಿ ಸಂಭಾಷಣೆ ಸೆರೆ
ಲಿಟನ್ ದಾಸ್ ಮತ್ತು ರಿಝ್ವಾನ್ ನಡುವೆ ನಡೆದ ಹಿಂದಿ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ಹೀಗೆ ದಾಖಲಾಗಿದೆಲಿಟನ್ ದಾಸ್: ಏನು ಮಾಡುತ್ತಿದ್ದೀಯಾ?
ರಿಝ್ವಾನ್ (ಸೈಟ್ ಸ್ಕ್ರೀನ್ ನತ್ತ ಕೈತೋರಿಸುತ್ತಾ): ಅಲ್ಲಿ ನೋಡು, ಅಲ್ಲಿ ಯಾರೋ ನಿಂತಿದ್ದಾರೆ.
ಲಿಟನ್ ದಾಸ್: ಅಲ್ಲಿ ಯಾಕೆ ನೋಡುತ್ತೀಯಾ? ಇಲ್ಲಿ ಬ್ಯಾಟಿಂಗ್ ಮಾಡು. ಐವತ್ತು ರನ್ ಮುಗಿಯಿತು, ಇನ್ನು ಆಕ್ಟಿಂಗ್ ಶುರುವಾಗುತ್ತದೆ.
ಲಿಟನ್ ದಾಸ್ ಅವರ ಈ ಮಾತನ್ನು ಕೇಳಿದ ತಕ್ಷಣ ಬಾಂಗ್ಲಾದೇಶದ ಸ್ಲಿಪ್ ಫೀಲ್ಡರ್‌ಗಳು ಪ್ರಸಿದ್ಧ ಬಾಲಿವುಡ್ ಕಾಮೆಡಿ ಸಿನಿಮಾ 'ಹೇರಾ ಫೇರಿ'ಯ ಡೈಲಾಗ್‌ಗಳನ್ನು ಬಳಸಿ ರಿಝ್ವಾನ್ ಅವರನ್ನು ರೇಗಿಸಲು ಆರಂಭಿಸಿದರು. "ಹಮ್ ಇಸ್ ಓವರ್ ಆಕ್ಟಿಂಗ್ ಕಾ ಫಿಫ್ಟಿ ಪೈಸಾ ಕಾಟೇಂಗೆ!" (ಈ ಓವರ್ ಆಕ್ಟಿಂಗ್‌ಗೆ ನಾವು ಐವತ್ತು ಪೈಸೆ ಕಟ್ ಮಾಡುತ್ತೇವೆ!) ಎಂದು ಒಬ್ಬ ಫೀಲ್ಡರ್ ಕಿಚಾಯಿಸಿದರೆ, ಮತ್ತೊಬ್ಬ "ಅಚ್ಛಾ ಆಕ್ಟಿಂಗ್ ಕರ್ ರಹಾ ಹೈ, ಸಬ್ಕೋ ಸಿಖಾ ರಹಾ ಹೈ" (ಚೆನ್ನಾಗಿ ಆಕ್ಟಿಂಗ್ ಮಾಡುತ್ತಿದ್ದಾನೆ, ಎಲ್ಲರಿಗೂ ಕಲಿಸುತ್ತಿದ್ದಾನೆ) ಎಂದರು.
ಬಾಲಿವುಡ್‌ನಲ್ಲಿ ಚಾನ್ಸ್?
ಅಷ್ಟಕ್ಕೇ ನಿಲ್ಲದ ಬಾಂಗ್ಲಾ ಆಟಗಾರರು, ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿ ಮತ್ತಷ್ಟು ವ್ಯಂಗ್ಯವಾಡಿದರು. ರಿಝ್ವಾನ್ ಅಂಪೈರ್ ಜೊತೆ ಸುದೀರ್ಘವಾಗಿ ಚರ್ಚಿಸುತ್ತಿರುವುದನ್ನು ಕಂಡು ಒಬ್ಬ ಆಟಗಾರ, `ಇವನು ಬಾಲಿವುಡ್‌ಗೇ ಹೋಗಿಬಿಡುತ್ತಾನೆ ಅಣ್ಣಾ! ' ಎಂದರು. ಅದಕ್ಕೆ ಶಾರ್ಟ್ ಲೆಗ್‌ನಲ್ಲಿದ್ದ ಮತ್ತೊಬ್ಬ ಆಟಗಾರ ತಕ್ಷಣವೇ, `ಇಲ್ಲ ಇಲ್ಲ, ಅಲ್ಲಿ ಇವನಿಗೆ ಜಾಗ ಸಿಗುವುದಿಲ್ಲ ಅಣ್ಣಾ' ಎಂದು ಉತ್ತರಿಸಿದರು. ಪಾಕಿಸ್ತಾನಿ ಕಲಾವಿದರಿಗೆ ಭಾರತೀಯ ಚಿತ್ರರಂಗದಲ್ಲಿ ಇದೀಗ ನಿಷೇಧ ಹೇರಲಾಗಿದೆ. ಹೀಗಾಗಿ ಈ ವ್ಯಂಗ್ಯ ಮಹತ್ವ ಪಡೆದಿದೆ. ಈ ಹಿಂದೆ ರಿಝ್ವಾನ್ ಅವರ ಇಂಗ್ಲಿಷ್ ಮಾತನಾಡುವ ವಿಚಾರವಾಗಿ ವಿಪರೀತ ಟ್ರೋಲ್ ಗೊಳಗಾಗಿಧ್ದನ್ನು ನೆನಪಿಸಿಕೊಳ್ಳಬಹುದು.ಶತಕ ವಂಚಿತ ರಿಝ್ವಾನ್
ಈ ಎಲ್ಲಾ ಟ್ರೋಲ್‌ಗಳ ನಡುವೆಯೂ ರಿಝ್ವಾನ್ ತಮ್ಮ ಏಕಾಂಕಿ ಹೋರಾಟವನ್ನು ಮುಂದುವರಿಸಿದರು. ಆದರೆ, ಕೊನೆಯ ದಿನ 94 ರನ್ ಗಳಿಸಿದ್ದಾಗ ಶೋರಿಫುಲ್ ಇಸ್ಲಾಂ ಎಸೆತದಲ್ಲಿ ಮೆಹಿದಿ ಹಸನ್ ಮಿರಾಝ್ ಗೆ ಕ್ಯಾಚಿತ್ತು ಔಟಾದರು. ಇದರ ಬೆನ್ನಲ್ಲೇ ಪಾಕಿಸ್ತಾನ ತಂಡ ತನ್ನ ಕೊನೆಯ 3 ವಿಕೆಟ್‌ಗಳನ್ನು ಯಾವುದೇ ರನ್ ಗಳಿಸದೇ ಕಳೆದುಕೊಂಡು ಕುಸಿತ ಕಂಡಿತು. ಅಂತಿಮವಾಗಿ ಪಾಕಿಸ್ತಾನ ಈ ಪಂದ್ಯವನ್ನು 78 ರನ್‌ಗಳಿಂದ ಹಾಗೂ ಸರಣಿಯನ್ನು 2-0 ಇಂದ ಸೋತಿತು.
