Dailyhunt Logo
  • Light mode
    Follow system
    Dark mode
    • Play Story
    • App Story
ಬಾರ್ಡರ್ ಗವಾಸ್ಕರ್ ಟ್ರೋಫಿ 2027: ಭಾರತವನ್ನು ಮಣಿಸಲು ಆಸ್ಟ್ರೇಲಿಯಾ ಮಾಸ್ಟರ್ ಪ್ಲಾನ್; ಅಭ್ಯಾಸ ಪಂದ್ಯವಾಡದಿರಲು ನಿರ್ಧಾರ!

ಬಾರ್ಡರ್ ಗವಾಸ್ಕರ್ ಟ್ರೋಫಿ 2027: ಭಾರತವನ್ನು ಮಣಿಸಲು ಆಸ್ಟ್ರೇಲಿಯಾ ಮಾಸ್ಟರ್ ಪ್ಲಾನ್; ಅಭ್ಯಾಸ ಪಂದ್ಯವಾಡದಿರಲು ನಿರ್ಧಾರ!

Vijay Karnataka 6 days ago

2024ರಲ್ಲಿ ತನ್ನ ನೆಲದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡವನ್ನು ಸೋಲಿಸಿದ್ದ ಆಸ್ಟ್ರೇಲಿಯಾ ತಂಡದ ಇದೀಗ ಭಾರತದ ನೆಲದಲ್ಲಿ ಸತತ ಎರಡು ದಶಕಗಳಿಂದ ಎದುರಾಗುತ್ತಿರುವ ಹಿನ್ನಡೆಗೆ ಕೊನೆ ಹಾಡಲು ವಿನೂತನ ಯೋಜನೆಯೊಂದನ್ನು ಸಿದ್ಧಪಡಿಸಿದೆ.

ಸಾಮಾನ್ಯವಾಗಿ ದೊಡ್ಡ ಟೆಸ್ಟ್ ಸರಣಿಗೂ ಮುನ್ನ ಪ್ರವಾಸಿ ತಂಡ ಅಭ್ಯಾಸ ಪಂದ್ಯಗಳನ್ನು (Warm-up matches) ಆಡುವುದು ರೂಢಿ. ಆದರೆ 2027ರ ಜನವರಿಯಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಯಾವುದೇ ಸಾಂಪ್ರದಾಯಿಕ ಅಭ್ಯಾಸ ಪಂದ್ಯಗಳನ್ನು ಆಡದಿರಲು ಪ್ರವಾಸಿ ಆಸ್ಟ್ರೇಲಿಯಾ ತಂಡ ನಿರ್ಧರಿಸಿದೆ. ಸಾಂಪ್ರದಾಯಿಕ ಪಂದ್ಯಗಳಿಗಿಂತ ನಿಯಂತ್ರಿತ ವಾತಾವರಣದಲ್ಲಿ ಆಯೋಜಿಸುವ ವಿಶೇಷ ತರಬೇತಿ ಶಿಬಿರವೇ ಹೆಚ್ಚು ಪರಿಣಾಮಕಾರಿ ಎಂಬುದು ಕಾಂಗರೂಗಳ ಹೊಸ ಲೆಕ್ಕಾಚಾರವಾಗಿದೆ.

ಸರಣಿ ಆರಂಭಕ್ಕೆ ಇನ್ನೂ ಐದು ತಿಂಗಳಿಗೂ ಅಧಿಕ ಸಮಯವಿರುವಾಗಲೇ ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಆಂಡ್ರ್ಯೂ ಮೆಕ್‌ ಡೊನಾಲ್ಡ್ ಅವರು ಈ ಮಾಸ್ಟರ್ ಪ್ಲಾನ್ಸಿದ್ಗೊಧಗೊಳಿಸಿದ್ದಾರೆ. 'cricket.com.au' ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, "ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ನಮಗೆ ಅಗತ್ಯ ಸಮಯವಿದೆ. ಆಟಗಾರರಿಗೆ ಸಾಕಷ್ಟು ಅನುಭವವೂ ಇರುವುದರಿಂದ ಪ್ರತ್ಯೇಕ ಅಭ್ಯಾಸ ಪಂದ್ಯಗಳನ್ನು ಆಡುವ ಅಗತ್ಯ ನಮಗನಿಸುತ್ತಿಲ್ಲ. ಬದಲಿಗೆ ಭಾರತದ ಹವಾಮಾನ ಮತ್ತು ಪಿಚ್ ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತಹ ಪ್ರತ್ಯೇಕ ತರಬೇತಿ ಕೇಂದ್ರವನ್ನು ಆಯ್ಕೆ ಮಾಡಿ ಶಿಬಿರ ನಡೆಸಲಿದ್ದೇವೆ," ಎಂದು ಸ್ಪಷ್ಟಪಡಿಸಿದ್ದಾರೆ.


ಯುಎಇ ಅಥವಾ ಭಾರತದಲ್ಲಿ ವಿಶೇಷ ತರಬೇತಿ ಶಿಬಿರ

ಪೂರ್ವಭಾವಿ ತರಬೇತಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹಲವು ಆಯ್ಕೆಗಳನ್ನು ಮುಕ್ತವಾಗಿಟ್ಟಿದೆ. ಈ ಹಿಂದೆ ತರಬೇತಿ ಪಡೆದಿದ್ದ ಯುಎಇ (UAE) ಅಥವಾ ಭಾರತದ ಪರಿಸ್ಥಿತಿಯನ್ನೇ ಹೋಲುವ ಸ್ಥಳಗಳನ್ನು ಗುರುತಿಸಲಾಗುತ್ತಿದೆ. 2023ರ ಭಾರತ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವು ಬೆಂಗಳೂರಿನ ಸಮೀಪದ ಆಲೂರುನಲ್ಲಿ ಪ್ರತ್ಯೇಕ ತರಬೇತಿ ಪಡೆದು ಯಶಸ್ವಿಯಾಗಿತ್ತು. ಈ ಬಾರಿಯೂ ಮೊದಲ ಟೆಸ್ಟ್ ಪಂದ್ಯ ನಡೆಯುವ ಸ್ಥಳದ ವಾತಾವರಣ ಹಾಗೂ ಪಿಚ್‌ಗಳನ್ನು ಮರುಸೃಷ್ಟಿಸಲು ಸಾಧ್ಯವಾಗುವಂತಹ ಅತ್ಯುತ್ತಮ ಸೌಲಭ್ಯವಿರುವ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ.

"ನಮ್ಮ ಮುಂದೆ ಕೆಲವು ಆಯ್ಕೆಗಳಿವೆ. ನಾವು ಹಿಂದೆ ಯುಎಇಗೆ ಹೋಗಿದ್ದೆವು ಮತ್ತು ಕಳೆದ ಬಾರಿ ಭಾರತದ ಬೆಂಗಳೂರಿಗೂ ಬಂದಿದ್ದೆವು. ಹಾಗಾಗಿ, ಪ್ರತಿಯೊಬ್ಬ ಆಟಗಾರನನ್ನು ಹೇಗೆ ಸಿದ್ಧಗೊಳಿಸಬೇಕು ಎಂಬುದರ ಆಧಾರದ ಮೇಲೆ ಯೋಜನೆ ರೂಪಿಸುತ್ತಿದ್ದೇವೆ" ಎಂದು ಮೆಕ್ ಡೊನಾಲ್ಡ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡವು 2023 ರ ಬಾರ್ಡರ್-ಗವಾಸ್ಕರ್ ಟ್ರೋಫಿಗೂ ಮುನ್ನ ಬೆಂಗಳೂರಿನ ಸಮೀಪದ ಆಲೂರುನಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಿ ಇದೇ ಮಾದರಿಯನ್ನು ಅನುಸರಿಸಿತ್ತು. ಆದರೆ ಈ ಬಾರಿ, ಸರಣಿಯ ಸಮಯದಲ್ಲಿ ಎದುರಾಗಬಹುದಾದ ಪಿಚ್‌ಗಳು, ಹವಾಮಾನ ಮತ್ತು ಆಟದ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ಹೋಲುವ ಪ್ರತ್ಯೇಕ ತರಬೇತಿ ಕೇಂದ್ರವನ್ನು ಗುರುತಿಸುವುದರ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ.

"ಮೊದಲ ಟೆಸ್ಟ್ ಪಂದ್ಯ ಅಥವಾ ಇಡೀ ಸರಣಿಯಲ್ಲಿ ನಮಗೆ ಎದುರಾಗಬಹುದಾದ ಪರಿಸ್ಥಿತಿಗಳನ್ನು ಹತ್ತಿರದಿಂದ ಮರುಸೃಷ್ಟಿಸಲು ಸಾಧ್ಯವಾಗುವ ಪ್ರತ್ಯೇಕ ತರಬೇತಿ ಕೇಂದ್ರ ದೊರೆತರೆ, ಅದುವೇ ಅತ್ಯಂತ ಸೂಕ್ತ. ಅಂತಹ ಸ್ಥಳ ಮತ್ತು ವಾತಾವರಣವನ್ನು ನಾವು ಹುಡುಕುತ್ತಿದ್ದೇವೆ. ನಮಗೆ ಸೂಕ್ತ ಸ್ಥಳ ಸಿಗುವ ಭರವಸೆಯಿದೆ, ಆದರೆ ಸ್ಥಳ ಇನ್ನೂ ಅಂತಿಮಗೊಂಡಿಲ್ಲ" ಎಂದು ಮೆಕ್‌ ಡೊನಾಲ್ಡ್ ತಿಳಿಸಿದ್ದಾರೆ.

ಹೀಗಿದೆ ಸರಣಿಯ ವೇಳಾಪಟ್ಟಿ

ಈ ಬಾರಿಯ ಬಾರ್ಡರ್-ಗವಾಸ್ಕರ್ ಟ್ರೋಫಿಯು ಕ್ರೀಡಾ ಇತಿಹಾಸದಲ್ಲೇ ಅತ್ಯಂತ ವಿಶೇಷವೆನಿಸಿದೆ. 2027ರ ಜನವರಿ 21 ರಿಂದ ಮಾರ್ಚ್ 3 ರವರೆಗೆ ನಡೆಯಲಿರುವ ಈ ಸರಣಿಯು ಕಳೆದ 57 ವರ್ಷಗಳಲ್ಲೇ ಭಾರತದ ನೆಲದಲ್ಲಿ ನಡೆಯುತ್ತಿರುವ ಮೊದಲ 5 ಪಂದ್ಯಗಳ ಬೃಹತ್ ಟೆಸ್ಟ್ ಸರಣಿಯಾಗಿದೆ.ಮೊದಲ ಟೆಸ್ಟ್ ಪಂದ್ಯ ಜನವರಿ 21ರಂದು ನಾಗ್ಪುರದಲ್ಲಿ ಪ್ರಾರಂಭವಾಗಲಿದೆ. ಉಳಿದ ಪಂದ್ಯಗಳು ಚೆನ್ನೈ, ಗುವಾಹಾಟಿ, ರಾಂಚಿ ಹಾಗೂ ಅಹಮದಾಬಾದ್ ಗಳಲ್ಲಿ ನಡೆಯಲಿವೆ.

ಪಂದ್ಯದಿನಾಂಕ ಸ್ಥಳ
1ನೇ ಟೆಸ್ಟ್ಜನವರಿ 21 - 25ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ, ನಾಗಪುರ
2ನೇ ಟೆಸ್ಟ್ಜನವರಿ 29 - ಫೆಬ್ರವರಿ 2ಎಂ. ಎ. ಚಿದಂಬರಂ ಕ್ರೀಡಾಂಗಣ, ಚೆನ್ನೈ
3ನೇ ಟೆಸ್ಟ್ಫೆಬ್ರವರಿ 11 - 15ಡಾ. ಭೂಪೇನ್ ಹಜಾರಿಕಾ ಕ್ರಿಕೆಟ್ ಕ್ರೀಡಾಂಗಣ, ಗುವಾಹಾಟಿ
4ನೇ ಟೆಸ್ಟ್ಫೆಬ್ರವರಿ 19 - 23ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣ, ರಾಂಚಿ
5ನೇ ಟೆಸ್ಟ್ಫೆಬ್ರವರಿ 27 - ಮಾರ್ಚ್ 3ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್

ಭಾರತದ ಪಿಚ್ ಗೆ ಹೊಂದಿಕೊಳ್ಳುವ ಆಟಗಾರರ ಆಯ್ಕೆ

ಭಾರತಕ್ಕೆ ಆಗಮಿಸುವ ಮುನ್ನ ಆಸ್ಟ್ರೇಲಿಯಾ ತನ್ನ ತವರಲ್ಲಿ ನ್ಯೂಜಿಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ಮುಗಿದ ಕೇವಲ ಎರಡು ವಾರಗಳ ಅಂತರದಲ್ಲಿ ಭಾರತದ ವಿರುದ್ಧದ ಮೊದಲ ಟೆಸ್ಟ್ ಆರಂಭವಾಗಲಿದೆ. ಆದ್ದರಿಂದ ನ್ಯೂಜಿಲೆಂಡ್ ವಿರುದ್ಧ ಆಡುವ ತಂಡಕ್ಕೂ, ಭಾರತ ಪ್ರವಾಸಕ್ಕೆ ಆಯ್ಕೆಯಾಗುವ ತಂಡಕ್ಕೂ ವ್ಯತ್ಯಾಸವಿರಲಿದೆ ಎಂದು ಮೆಕ್‌ ಡೊನಾಲ್ಡ್ ಸುಳಿವು ನೀಡಿದ್ದಾರೆ. ಭಾರತೀಯ ಪಿಚ್‌ಗಳಿಗೆ ಸೂಕ್ತವಾದ ಸ್ಪಿನ್ ಹಾಗೂ ಪ್ರತ್ಯೇಕ ಕೌಶಲ್ಯ ಹೊಂದಿರುವ ಆಟಗಾರರನ್ನು ಮೊದಲೇ ಗುರುತಿಸಲಾಗುತ್ತಿದೆ. ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್, ಆಫ್-ಸ್ಪಿನ್ನರ್ ಟಾಡ್ ಮರ್ಫಿ, ಆಲ್ ರೌಂಡರ್ ಕೂಪರ್ ಕೊನೊಲಿ ಹಾಗೂ ಬ್ಯಾಟರ್‌ಗಳಾದ ಪೀಟರ್ ಹ್ಯಾಂಡ್ಸ್‌ಕಾಂಬ್ ಮತ್ತು ಮ್ಯಾಥ್ಯೂ ರೆನ್‌ ಶಾ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ. ಈ ಆಟಗಾರರು 'ಬಿಗ್ ಬ್ಯಾಶ್ ಲೀಗ್' (BBL) ಒಪ್ಪಂದಗಳ ನಡುವೆಯೂ ಆಸ್ಟ್ರೇಲಿಯಾದಲ್ಲೇ ಪ್ರತ್ಯೇಕ ಕೆಂಪು ಚೆಂಡಿನ (Red-ball) ತರಬೇತಿ ಆರಂಭಿಸಲಿದ್ದಾರೆ.

ಎರಡು ದಶಕಗಳ ಬರ ನೀಗಿಸುವ ಗುರಿ

ಆಸ್ಟ್ರೇಲಿಯಾ ತಂಡವು 2004-05ರ ಋತುವಿನ ನಂತರ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಉಪಖಂಡದ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಅನುಭವಿಸಿದ ಸರಣಿ ಸೋಲುಗಳ ಹಿನ್ನೆಲೆಯಲ್ಲಿ, ಈ ಬಾರಿ ಆಸೀಸ್ ಪಡೆ ತನ್ನ ತಂತ್ರಗಾರಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಮೊದಲ ಎಸೆತ ಎಸೆಯುವ ಮುನ್ನವೇ ಸುದೀರ್ಘ ಸಿದ್ಧತೆಯಲ್ಲಿ ತೊಡಗಿರುವ ಆಸ್ಟ್ರೇಲಿಯಾಗೆ ಈ ಹೊಸ 'ಬ್ಲೂಪ್ರಿಂಟ್' ಯಶಸ್ಸು ತಂದುಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka