ಚಿಕ್ಕಬಳ್ಳಾಪುರ : ಅಸಲಿಗೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ರೀತಿಯಲ್ಲಿ ಆರೋಗ್ಯ ಸಚಿವರಾಗಿದ್ದ, ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಅವರನ್ನು, ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಸೋಲಿಸಿದ್ದರು. ಇದಾದ ನಾಲ್ಕೈದು ತಿಂಗಳಲ್ಲೇ, ಚಿಕ್ಕಬಳ್ಳಾಪುರ ಕಾಂಗ್ರೆಸ್ಸಿನಲ್ಲಿ ಸಣ್ಣಮಟ್ಟದ ಅಸಮಾಧಾನ ಶುರುವಾಗಿತ್ತು.
ಅದು ಬೆಳೆಬೆಳೆಯುತ್ತಾ, ಈಗ, ಜಿಲ್ಲಾ ಕಾಂಗ್ರೆಸ್ ನಾಯಕರು, ಏಕವಚನದಲ್ಲಿ ಒಬ್ಬರು ಇನ್ನೊಬ್ಬರನ್ನು ಬೀದಿಗೆ ಎಳೆಯುವ ಹಂತಕ್ಕೆ ಬಂದು ನಿಂತಿದೆ.
ಚಿಕ್ಕಬಳ್ಳಾಪುರ ಅಸೆಂಬ್ಲಿ ಕ್ಷೇತ್ರದಲ್ಲಿ ಗೆದ್ದ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲೂ ಅದೇ ಫಲಿತಾಂಶ ಬರಬಹುದು ಎನ್ನುವ ಲೆಕ್ಕಾಚಾರದಲ್ಲಿತ್ತು. ಶೈಕ್ಷಣಿಕ ಮತ್ತು ಆರೋಗ್ಯ ವಲಯದ ಬಲಾಢ್ಯ ಉದ್ಯಮಿಯ ಕುಟುಂಬದ ರಕ್ಷಾ ರಾಮಯ್ಯನವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ, ರಾಜ್ಯದ ಲೆಕ್ಕ ಬೇರೆ, ಕೇಂದ್ರದ ಮೋದಿಯವರದ್ದು ಲೆಕ್ಕ ಬೇರೆ ಎನ್ನುವ ಹಾಗೇ, ರಕ್ಷಾ ರಾಮಯ್ಯ, ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ವಿರುದ್ದ, 1,63,460 ಮತಗಳ ಭಾರೀ ಅಂತರದಿಂದ ಸೋಲು ಕಂಡಿದ್ದರು. ಅಲ್ಲಿಂದ, ಜಿಲ್ಲಾ ಕಾಂಗ್ರೆಸ್ ಬಣ ರಾಜಕೀಯ ಇನ್ನೊಂದು ಮಜಲಿಗೆ ತಿರುಗಿತು.
ಬೂದಿಮುಚ್ಚಿದ ಕೆಂಡದಂತಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಒಡಕು
ಹಾದಿಬೀದಿ ರಂಪವಾಗಿರುವ ಚಿಕ್ಕಬಳ್ಳಾಪುರ ಕಾಂಗ್ರೆಸ್ ಒಡಕು, ಈಗ ದಾರಿದಾರಿಯಲ್ಲಿ ಚರ್ಚೆಯ ವಿಷಯವಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಎಚ್ಚರಿಕೆಗೂ ಕ್ಯಾರೇ ಎನ್ನದೇ, ಎಲ್ಲರೂ ಪತ್ರಿಕಾಗೋಷ್ಠಿಯನ್ನು ನಡೆಸಿ, ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಇವರ ವಾಗ್ದಾಳಿಯಲ್ಲಿ, ಜಿಲ್ಲಾ ಕಾಂಗ್ರೆಸ್ ನಾಯಕರಿಗೆ, ಬಿಜೆಪಿ ಜೊತೆ ಇರುವ ಸಂಬಂಧವೂ ಬಯಲಾಗುತ್ತಿದೆ ಎನ್ನುವುದು ಗಮನಿಸಬೇಕಾದ ವಿಚಾರ.ಡಾ.ಎಂ.ಸಿ.ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ
ಜಿಲ್ಲೆಯ ಪ್ರಭಾವಿ ನಾಯಕರು ಮತ್ತು ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರದಿಂದಾಗಿ ಹೊಸಹೊಸ ವಿಷಯಗಳು ಹೊರ ಬರುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ವಿರುದ್ದ ಏಕವಚನದಲ್ಲಿ / ತೆಲುಗಿನಲ್ಲಿ ಹರಿಹಾಯುತ್ತಿದ್ದ ಪ್ರದೀಪ್ ಈಶ್ವರ್, ಈಗ ಅವರಿಗೆ ಹತ್ತಿರವಾಗುತ್ತಿದ್ದಾರೆ ಎನ್ನುವುದು ಒಂದು ಆರೋಪ. ಇನ್ನೊಂದು ಕಡೆ, ಎಂಸಿ ಸುಧಾಕರ್, ರಕ್ಷಾ ರಾಮಯ್ಯ, ಬಿಜೆಪಿಯ ಬಿಟೀಂ ಎನ್ನುವುದು ಇನ್ನೊಂದು ಆರೋಪವಾಗಿದೆ.ಇವೆಲ್ಲದರ ನಡುವೆ, ಜಿಲ್ಲಾ ಕಾಂಗ್ರೆಸ್ ನಾಯಕರು, ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನು ನಡೆಸಿ, ಪಕ್ಷದ ಮಾನಮರ್ಯಾದೆಯನ್ನು ಬೀದಿಗೆ ತಂದು ನಿಲ್ಲಿಸಿಯಾಗಿದೆ ಎನ್ನುವುದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ದುಃಖವಾಗಿದೆ. ಕೆಪಿಸಿಸಿಯಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವರು ಇದಕ್ಕೆ ಮದ್ದು ಅರೆಯದಿದ್ದರೆ, ಚಿಕ್ಕಬಳ್ಳಾಪುರದ ಜೊತೆಗೆ, ಕೋಲಾರವನ್ನೂ, ಬಿಜೆಪಿಗೆ ಧಾರೆ ಎರೆದಂತೆ ಎನ್ನುವುದು ಇವರ ನೋವು.
ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡು, ಸುಮ್ಮನೆ ಬೆಂಗಳೂರಿನಲ್ಲಿರು
ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡು, ಸುಮ್ಮನೆ ಬೆಂಗಳೂರಿನಲ್ಲಿರು, ಚಿಕ್ಕಬಳ್ಳಾಪುರಕ್ಕೆ ಬರಬೇಡ ಎಂದು ರಕ್ಷಾ ರಾಮಯ್ಯಗೆ, ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದ್ದಾರೆ. ಬೆಳೆದು ಬಂದ ದಾರಿಯನ್ನು ಮರೀಬೇಡ ಗುರೂ ಎಂದು ರಕ್ಷಾ ರಾಮಯ್ಯ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನೊಂದು ಕಡೆ, ಜಿಲ್ಲಾ ಕಾಂಗ್ರೆಸ್ ನಾಯಕರು, ಅಸಂವಿಧಾನಿಕ ಪದವನ್ನು ಪ್ರದೀಪ್ ಈಶ್ವರ್ ವಿರುದ್ದ ಬಳಸುತ್ತಿದ್ದಾರೆ. ಸುಖಾಸುಮ್ಮನೆ ಜಾತಿಯನ್ನು ಎಳೆದು ತಂದು, ರಾಜಕೀಯ ಮಾಡುತ್ತಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ.ಎಲ್ಲವನ್ನೂ ನೋಡಿಕೊಂಡು ಮುಸಿಮುಸಿ ನಗುತ್ತಿರುವ ಬಿಜೆಪಿ
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಬಿಜೆಪಿ ನಾಯಕರು ಎಲ್ಲವನ್ನೂ ನೋಡಿಕೊಂಡು ಮುಸಿಮುಸಿ ನಕ್ಕು ಸುಮ್ಮನಾಗುತ್ತಿದ್ದಾರೆ. ನಾವೇನು ಕಾರ್ಯತಂತ್ರ ರೂಪಿಸುವ ಅವಶ್ಯಕತೆಯೇ ಇಲ್ಲ, ಬಿಜೆಪಿ ಪರವಾಗಿ, ಕಾಂಗ್ರೆಸ್ ನಾಯಕರೇ ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ಎಲ್ಲವನ್ನೂ ನೋಡಿ, ತಮ್ಮ ಪಾಡಿಗೆ ತಾವಿದ್ದಾರೆ. ರಾಜಕೀಯದಲ್ಲಿ ದಾಳವನ್ನು ಹೇಗೆ ಉರುಳಿಸಬೇಕು ಎನ್ನುವುದನ್ನು ಡಾ.ಕೆ.ಸುಧಾಕರ್, ಲೋಕಸಭಾ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆಯನ್ನು ಸೋತಿದ್ದು ಓವರ್ ಕಾನ್ಫಿಡೆನ್ಸ್'ನಿಂದ ಎಂದೂ ಅವರು ಒಪ್ಪಿಕೊಂಡಿದ್ದರು.ಕವಲು ದಾರಿಯಲ್ಲಿದೆ ಚಿಕ್ಕಬಳ್ಳಾಪುರ ಕಾಂಗ್ರೆಸ್
ರಾಜಕೀಯದಲ್ಲಿ ಯಾರೂ ಶತ್ರಗಳಿಲ್ಲ, ಯಾರೂ ಮಿತ್ರರೂ ಇಲ್ಲ ಎನ್ನುವ ಹಾಗೇ, ಚಿಕ್ಕಬಳ್ಳಾಪುರ ಕಾಂಗ್ರೆಸ್ ರಾಜಕೀಯ ಕವಲು ದಾರಿಯಲ್ಲಿದೆ. ಇನ್ನೊಂದು ಕಡೆ ಕೋಲಾರದಲ್ಲಿ, ಕೆಎಚ್ ಮುನಿಯಪ್ಪ ವರ್ಸಸ್ ಅದರ್ಸ್ ಎನ್ನುವ ರೀತಿಯಲ್ಲಿ ರಾಜಕೀಯ ವಿದ್ಯಮಾನಗಳೂ ನಡೆಯುತ್ತಿದೆ. ಒಂದು ಕಡೆ ಜಿಲ್ಲಾ ನಾಯಕರಿಗೆ ಸಚಿವ ಸ್ಥಾನ ಸಿಗಲಿಲ್ಲ/ ಅಥವಾ ಹೋಯಿತು ಎನ್ನುವ ಅಪಸ್ವರದ ನಡುವೆ, ಸದ್ಯದ ಕಾಂಗ್ರೆಸ್ ಕಿತ್ತಾಟವನ್ನು ನೋಡಿ, ಬಿಜೆಪಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳದೇ ಇರುತ್ತಾ.. ಎಷ್ಟಾದರೂ ಇದು ರಾಜಕೀಯವಲ್ಲವೇ, ಎನ್ನುವುದು ಕಾರ್ಯಕರ್ತರ ಮಾತಾಗಿರಬಹುದು.
