Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರಲ್ಲಿ ಆ.15ರಂದು ಫ್ರೀಡಂ ಹಬ್ಬ: ವಿಧಾನಸೌಧದಲ್ಲಿ ವಿಶೇಷ ಸಿದ್ಧತೆ, ರಾಜಧಾನಿ ನಾಗರಿಕರು ಒಟ್ಟಾಗಿ ಸ್ವಾತಂತ್ರ್ಯ ದಿನ ಆಚರಿಸಲು ಅವಕಾಶ

ಬೆಂಗಳೂರಲ್ಲಿ ಆ.15ರಂದು ಫ್ರೀಡಂ ಹಬ್ಬ: ವಿಧಾನಸೌಧದಲ್ಲಿ ವಿಶೇಷ ಸಿದ್ಧತೆ, ರಾಜಧಾನಿ ನಾಗರಿಕರು ಒಟ್ಟಾಗಿ ಸ್ವಾತಂತ್ರ್ಯ ದಿನ ಆಚರಿಸಲು ಅವಕಾಶ

Vijay Karnataka 2 days ago

ಬೆಂಗಳೂರು: ಬೆಂಗಳೂರಿನಲ್ಲಿಇದೇ ಮೊದಲ ಬಾರಿಗೆ ಜಿಬಿಎ ವತಿಯಿಂದ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ರಸ್ತೆಗಳಲ್ಲಿಆ.15ರಂದು ಮಧ್ಯಾಹ್ನ 12 ರಿಂದ ರಾತ್ರಿ 10 ಗಂಟೆಯವರೆಗೆ 'ಫ್ರೀಡಂ ಹಬ್ಬ'ವನ್ನು ಆಚರಿಸಲಾಗುತ್ತಿದೆ.ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾರ್ವಜನಿಕರ ಬೃಹತ್‌ ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಬೆಂಗಳೂರನ್ನು ತಮ್ಮ ನೆಲೆಯಾಗಿಸಿಕೊಂಡಿರುವ ರಾಜ್ಯದ ನಾನಾ ಭಾಗಗಳ ಹಾಗೂ ಇತರೆ ರಾಜ್ಯಗಳ ಜನರು ವಿಧಾನಸೌಧದ ಮುಂಭಾಗದಲ್ಲಿದಿನವಿಡೀ ನಡೆಯುವ ಸಂಭ್ರಮಾಚರಣೆಯಲ್ಲಿತಮ್ಮ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ಪ್ರದರ್ಶಿಸಲಿದ್ದಾರೆ. ವಿಧಾನಸೌಧ ಮತ್ತು ಅದಕ್ಕೆ ಸಂಪರ್ಕಿಸುವ ರಸ್ತೆಗಳು ಸಾರ್ವಜನಿಕರ ಪರೇಡ್‌, ಸಮುದಾಯಗಳ ಪ್ರದರ್ಶನ, ಸಂಗೀತ, ಪ್ರಾದೇಶಿಕ ಖಾದ್ಯಗಳು ಹಾಗೂ ಕರಕುಶಲ ವಸ್ತುಗಳನ್ನೊಳಗೊಂಡ ಸಾಂಸ್ಕೃತಿಕ ಕಾರಿಡಾರ್‌ಗಳಾಗಿ ಬದಲಾಗಲಿವೆ. ವಿಧಾನಸೌಧದ ಒಳಗಿರುವ ಭವ್ಯ ಶಾಸನಸಭೆ ಸಭಾಂಗಣದ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ.

ಫ್ರೀಡಂ ಹಬ್ಬವನ್ನು ಘೋಷಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ''ಇದು ಬೆಂಗಳೂರನ್ನು ತಮ್ಮ ನೆಲೆಯಾಗಿಸಿಕೊಂಡಿರುವ ನಾನಾ ಸಮುದಾಯಗಳನ್ನು ಪ್ರತಿನಿಧಿಸುವವರು ಒಂದೆಡೆ ಸೇರಿ ಆಚರಿಸುವ ಸ್ವಾತಂತ್ರ್ಯದ ಹಬ್ಬವಾಗಿದೆ. ಫ್ರೀಡಂ ಹಬ್ಬವು ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಸರಕಾರದ ಔಪಚಾರಿಕ ಕಾರ್ಯಕ್ರಮವಾಗಿರಿಸದೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಸಂಸ್ಕೃತಿಯ ದಿನಪೂರ್ತಿ ಸಾರ್ವಜನಿಕ ಸಂಭ್ರಮಾಚರಣೆಯನ್ನಾಗಿ ಪರಿವರ್ತಿಸಲಿದೆ. ಫ್ರೀಡಂ ಹಬ್ಬವು ಸರಕಾರಿ ಕಾರ್ಯಕ್ರಮವಲ್ಲ; ಇದು ಬೆಂಗಳೂರಿನ ಜನರು ಒಟ್ಟಾಗಿ ಆಚರಿಸುವ ಹಬ್ಬವಾಗಿದೆ,'' ಎಂದರು.

''ಸಾಮಾಜಿಕ ಜೀವನದ ಪ್ರತಿಯೊಂದು ಸ್ತರದ ಬೆಂಗಳೂರಿಗರನ್ನು ಒಂದೆಡೆ ತರುವ ಈ ಹಬ್ಬವು, ನಾನಾ ರಾಜ್ಯಗಳನ್ನು ಪ್ರತಿನಿಧಿಸುವ ಸಮುದಾಯಗಳ ಭವ್ಯ ಪರೇಡ್‌, ಸಾಂಪ್ರದಾಯಿಕ ಉಡುಪುಗಳು, ಜಾನಪದ ಕಲೆಗಳು, ಸಂಗೀತ, ನೃತ್ಯ, ಕರಕುಶಲ ವಸ್ತುಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ರಾಜ್ಯದ ಶ್ರೀಮಂತ ಪರಂಪರೆ ಮತ್ತು ಭಾರತದ ಅಸಾಧಾರಣ ಸಾಂಸ್ಕೃತಿಕ ವೈವಿಧ್ಯತೆ ಎರಡನ್ನೂ ಸಂಭ್ರಮಿಸಲಿದೆ. ಬೆಂಗಳೂರಿನಲ್ಲಿ ನೆಲೆಗೊಂಡಿರುವ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಗುಜರಾತಿ, ಹಿಂದಿ, ಒಡಿಯಾ ಮತ್ತು ಈಶಾನ್ಯ ರಾಜ್ಯಗಳ ಸಮುದಾಯಗಳು ಸೇರಿದಂತೆ ಹಲವು ಭಾಷಿಕ ಸಂಪ್ರದಾಯಗಳನ್ನು ಪ್ರತಿನಿಧಿಸುವ ನಾಗರಿಕರು, ಕೊಡಗು, ಮಂಗಳೂರು, ಉತ್ತರ ಕರ್ನಾಟಕ ಮತ್ತು ರಾಜ್ಯದ ಇತರ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ,'' ಎಂದು ತಿಳಿಸಿದರು.

ವಿಧಾನಸೌಧ ಮೆಟ್ಟಿಲುಗಳ ಮೇಲೆ ಹಬ್ಬ:

''ಫ್ರೀಡಂ ಹಬ್ಬವು ವಿಧಾನಸೌಧವನ್ನು ಭಾರತದ 'ವಿವಿಧತೆಯಲ್ಲಿ ಏಕತೆ'ಯ ಜೀವಂತ ವೇದಿಕೆಯನ್ನಾಗಿ ಮಾಡಲಿದೆ. ಈ ಹಬ್ಬವು ಕುಟುಂಬಗಳು, ಮಕ್ಕಳು, ಕಲಾವಿದರು, ಸಾಂಸ್ಕೃತಿಕ ಸಂಸ್ಥೆಗಳು ಹಾಗೂ ಸಮುದಾಯಗಳನ್ನು ಸ್ವಾತಂತ್ರ್ಯ ಜಂಟಿ ಸಂಭ್ರಮಾಚರಣೆಯಲ್ಲಿ ಒಂದಾಗಲು ಆಹ್ವಾನಿಸುತ್ತದೆ. ಈ ಆಚರಣೆಯನ್ನು ಸಾರ್ವಜನಿಕರ ಹಬ್ಬವಾಗಿ ರೂಪಿಸಿ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ನಡೆಯುವ ಅಧಿಕೃತ ಸ್ವಾತಂತ್ರ್ಯ ದಿನಾಚರಣೆ ನಂತರ ಶುರುವಾಗಿ ರಾತ್ರಿ 10 ಗಂಟೆವರೆಗೆ ಮುಂದುವರಿಯಲಿದೆ. ಈ ವೇಳೆ ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್‌ಗಳಾಗಿ ಬದಲಾಗಲಿವೆ,'' ಎಂದು ತಿಳಿಸಿದರು.

40 ತುಕಡಿಗಳಿಂದ ಇಂಡಿಯಾ ಪರೇಡ್‌:

''ಸುಮಾರು 40 ತುಕಡಿಗಳನ್ನು ಒಳಗೊಂಡ ವರ್ಣರಂಜಿತ 'ಇಂಡಿಯಾ ಪರೇಡ್‌', ಸ್ವಾತಂತ್ರ್ಯ ಚಳವಳಿಯ 'ಲಿವಿಂಗ್‌ ಮ್ಯೂಸಿಯಂ', ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜ್ಯದ ಕೊಡುಗೆ ಬಿಂಬಿಸುವ ಜಿಲ್ಲಾಆಧಾರಿತ ಪೆವಿಲಿಯನ್‌ಗಳು, ಸಂವಿಧಾನ ಚೌಕ, ಮಕ್ಕಳ ಕಲಿಕೆ ಮತ್ತು ಚಟುವಟಿಕೆ ವಲಯಗಳು, ವಿಧಾನಸೌಧದ ಮಾರ್ಗದರ್ಶಿತ ಪ್ರವಾಸಗಳು, 200 ಅಡಿಯ ಸಾರ್ವಜನಿಕ ಕಲಾ ಗೋಡೆ, ಸೋಲ್‌ ಸಂತೆಯ ಮಳಿಗೆಗಳು, ಸಂಜೆಯ ಸಂಗೀಯ ಕಛೇರಿ ಹಾಗೂ ಪಟಾಕಿಯ ಬಾಣ-ಬಿರುಸುಗಳ ಪ್ರದರ್ಶನವಿರಲಿದೆ,'' ಎಂದು ಹೇಳಿದರು.

ಮಕ್ಕಳಿಗಾಗಿ ವಿಧಾನಸೌಧ ಓಪನ್‌:

''ಮಕ್ಕಳು ಈ ಆಚರಣೆಯ ಕೇಂದ್ರ ಬಿಂದುವಾಗಲಿದ್ದಾರೆ. ಅನೇಕ ಮಕ್ಕಳಿಗೆ ಭವ್ಯವಾದ ವಿಧಾನಸೌಧದ ಒಳಗೆ ಹೆಜ್ಜೆ ಹಾಕುವ ಅವಕಾಶ ಸಿಗಲಿದೆ. ನಾವು ನಮ್ಮ ಮಕ್ಕಳಿಗೆ ವಿಧಾನಸೌಧದ ಬಾಗಿಲುಗಳನ್ನು ತೆರೆಯುತ್ತಿದ್ದೇವೆ. ಆ.15ರಂದು ಆ ಬಾಗಿಲುಗಳ ಮೂಲಕ ನಡೆದು ಬರುವ ಪ್ರತಿಯೊಂದು ಮಗುವೂ ಜೀವಮಾನವಿಡೀ ನೆನಪಿನಲ್ಲಿಟ್ಟುಕೊಂಡು ಮನೆಗೆ ಹಿಂದಿರುಗಬೇಕೆಂಬುದು ನನ್ನ ಆಸೆ. ಪ್ರಜಾಪ್ರಭುತ್ವವು ಮಕ್ಕಳು ಪಠ್ಯಪುಸ್ತಕಗಳಲ್ಲಿಮಾತ್ರ ಓದುವ ವಿಷಯವಾಗಿ ಉಳಿಯಬಾರದು; ಅದು ಜೀವಂತವಾಗುವ ಸಂಸ್ಥೆಯಲ್ಲೇ ಅವರು ಅದನ್ನು ಅನುಭವಿಸಬೇಕು,'' ಎಂದರು.

''ಮಾರ್ಗದರ್ಶಿತ ಪ್ರವಾಸಗಳ ಜತೆಗೆ 'ಮಕ್ಕಳ ಮೇಳ', ಕಲಾಕಾರರು ಸ್ವಾತಂತ್ರ್ಯ ಹೋರಾಟಗಾರರನ್ನು ಜೀವಂತಗೊಳಿಸುವ 'ಮಕ್ಕಳ ಫ್ರೀಡಂ ವಿಲೇಜ್‌', ಸಂವಾದಾತ್ಮಕ ಕಲಿಕೆಯ ಆಟಗಳು, ಕಥೆ ಹೇಳುವಿಕೆ ಮತ್ತು ಕರಕುಶಲ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಶೈಕ್ಷಣಿಕ ಹಾಗೂ ಆನಂದದಾಯಕವಾಗಿಸಲು ವಿನ್ಯಾಸಗೊಳಿಸಲಾಗುತ್ತಿದೆ,'' ಎಂದು ಮಾಹಿತಿ ನೀಡಿದರು.

''ಬ್ಯಾರಿಕೇಡ್‌ಗಳ ಹಿಂದೆ ನಿಂತು ಅಧಿಕೃತ ಸಮಾರಂಭಗಳನ್ನು ವೀಕ್ಷಿಸುವ ಬದಲಿಗೆ, ನಾಗರಿಕರು ಸ್ವತಃ ಕಲಾವಿದರಾಗಿ, ಸ್ವಯಂಸೇವಕರಾಗಿ, ಸಾಂಸ್ಕೃತಿಕ ರಾಯಭಾರಿಗಳಾಗಿ ಪ್ರಮುಖ ವೇದಿಕೆಯನ್ನು ಪಡೆದುಕೊಳ್ಳಲಿದ್ದಾರೆ. ಜಾನಪದ ಪ್ರದರ್ಶನಗಳು, ಸಾಂಪ್ರದಾಯಿಕ ಸಂಗೀತ, ಸಮುದಾಯದ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಪ್ರಸ್ತುತಿಗಳು ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳನ್ನು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್‌ ಆಗಿ ಪರಿವರ್ತಿಸಲಾಗುತ್ತಿದೆ,'' ಎಂದು ತಿಳಿಸಿದರು.

''ಫ್ರೀಡಂ ಹಬ್ಬದ ವೆಬ್‌ಸೈಟ್‌ ಮತ್ತು ಸಹಾಯವಾಣಿಯ ಮೂಲಕ ನಾನಾ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಿಗೆ ನಾಗರಿಕರು ನೋಂದಾಯಿಸಿಕೊಳ್ಳಬೇಕು. ಇದರ ವಿವರಗಳನ್ನು ಮುಂದಿನ 48 ಗಂಟೆಗಳಲ್ಲಿಹಾಗೂ ಸರಕಾರದ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಕಟಿಸಲಾಗುವುದು,'' ಎಂದು ತಿಳಿಸಿದರು.

ಫ್ರೀಡಂ ಹಬ್ಬದ ಮುಖ್ಯಾಂಶಗಳು:

* ವಿಧಾನಸೌಧ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ರಸ್ತೆಗಳಲ್ಲಿಆ.15ರಂದು ಮಧ್ಯಾಹ್ನ 12 ರಿಂದ ರಾತ್ರಿ 10ವರೆಗೆ ಸ್ವಾತಂತ್ರ್ಯ ನಡಿಗೆ

* 40 ತುಕಡಿಗಳಿಂದ ಪರೇಡ್‌, ಜಾನಪದ ನೃತ್ಯ, ಸಂಗೀತ, ಸಾಂಸ್ಕೃತಿ ಕಾರ್ಯಕ್ರಮಗಳ ಪ್ರದರ್ಶನ

* ಸಂವಾದಾತ್ಮಕ ಆಟಗಳು, ಕಥೆ ಹೇಳುವಿಕೆ, ಕಲೆ, ಕರಕುಶಲ ವಸ್ತುಗಳು, ಸೃಜನಶೀಲ ಕಾರ್ಯಾಗಾರಗಳು, ಕುಟುಂಬ ಚಟುವಟಿಕೆಗಳನ್ನೊಳಗೊಂಡ ಮಕ್ಕಳ ಮೇಳ

* 120ಕ್ಕೂ ಅಧಿಕ ಹೆಚ್ಚು ಆಯ್ದ ಜೀವನಶೈಲಿ, ಕರಕುಶಲ ವಸ್ತುಗಳು, ಜೈವಿಕ ಉಡುಪುಗಳು, ಆಟಿಕೆಗಳು, ಜವಳಿ ಮತ್ತು ಆಹಾರ ಮಳಿಗೆಗಳ ಸೋಲ್‌ ಸಂತೆ

* ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮೈಲಿಗಲ್ಲುಗಳನ್ನು ಮರುಸೃಷ್ಟಿಸುವ ವಾಕ್‌ ಥ್ರೂ ಮ್ಯೂಸಿಯಂ. ನಾಟಕ, ಸಾಂಸ್ಕೃತಿಕ, ಸ್ಥಳೀಯ ಸಂಪ್ರದಾಯಗಳ ಪ್ರದರ್ಶನ

* ಸಾರ್ವಜನಿಕರು ಸಂವಿಧಾನ ರಚನಾ ಸಭೆಯ ಗ್ಯಾಲರಿಗಳನ್ನು ವೀಕ್ಷಿಸಬಹುದು, ಅಪರೂಪದ ಸಂವಿಧಾನಾತ್ಮಕ ದಾಖಲೆಗಳನ್ನು ನೋಡಬಹುದು ಮತ್ತು ದಿನವಿಡೀ ಪ್ರಸ್ತಾವನೆಯ ಸಮೂಹ ವಾಚನದಲ್ಲಿ ಪಾಲ್ಗೊಳ್ಳಬಹುದು

* ಭಾರತದ ಸ್ವಾತಂತ್ರ್ಯ ಚಳವಳಿಯ ಅರಿವು ಮೂಡಿಸುವ ಮೂಲಕ ಮಕ್ಕಳ ಎದುರು ಸ್ವಾತಂತ್ರ್ಯ ಹೋರಾಟಗಾರರನ್ನು ಜೀವಂತಗೊಳಿಸುವುದು, ರಸಪ್ರಶ್ನೆಗಳು, ಸಂವಾದಾತ್ಮಕ ಕಲಿಕೆ ಮತ್ತು ತಕ್ಷಣದ ಬಹುಮಾನಗಳ ಮೂಲಕ ಮಕ್ಕಳನ್ನು ಕಾರ್ಯಕ್ರಮದಲ್ಲಿತೊಡಗಿಸಿಕೊಳ್ಳುವುದು.

* ಕಿರಿಯ ವೀಕ್ಷಕರು ಮತ್ತು ಅವರ ಕುಟುಂಬದವರು ತರಬೇತಿ ಪಡೆದ ಸ್ವಯಂಸೇವಕರ ನೇತೃತ್ವದಲ್ಲಿ ವಿಶೇಷವಾಗಿ ಆಯೋಜಿಸಲಾದ ಮಾರ್ಗದರ್ಶಿತ ಪ್ರವಾಸಗಳ ಮೂಲಕ ಶಾಸನಸಭೆಯನ್ನು ವೀಕ್ಷಿಸುವ ಅಪರೂಪದ ಅವಕಾಶ

* 200 ಅಡಿಗಳ ಸಾರ್ವಜನಿಕ ಕಲಾ ಗೋಡೆಯು ನಾಗರಿಕರಿಗೆ ಬರವಣಿಗೆ, ವರ್ಣಚಿತ್ರ ಮತ್ತು ಜಂಟಿ ಕಲಾಕೃತಿಗಳ ಪ್ರದರ್ಶನ

* ಸಂಗೀತಗಾರರು ಮತ್ತು ಕಲಾವಿದರಿಂದ ಪ್ರದರ್ಶನ. ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಸಂಗೀತ ಕಛೇರಿ, ಸಾರ್ವಜನಿಕರ ಸಾಮೂಹಿಕ ಗಾಯನ

* ಪಟಾಕಿಯ ಬಾಣ-ಬಿರುಸುಗಳ ಪ್ರದರ್ಶನದೊಂದಿಗೆ ಫ್ರೀಡಂ ಹಬ್ಬಕ್ಕೆ ತೆರೆ

Dailyhunt
Disclaimer: This content has not been generated, created or edited by Dailyhunt. Publisher: Vijay Karnataka