ಬೆಂಗಳೂರು: ದೇಶದ ಸಿಲಿಕಾನ್ ಸಿಟಿ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ (ಟ್ರಾಫಿಕ್) ಎಂಬುದು ನಿತ್ಯದ ಕರಾಳ ವಾಸ್ತವವಾಗಿದೆ. ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲಹರಣ ಮಾಡುವುದು ಬೆಂಗಳೂರಿಗರ ಪಾಲಿಗೆ ಅನಿವಾರ್ಯವಾಗಿದೆ. ಇದೀಗ ಈ ಸಮಸ್ಯೆ ಬಗ್ಗೆ ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಇವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ನಿತ್ಯದ ಪ್ರಯಾಣದ ವೇಳೆ ಎದುರಾದ ಭೀಕರ ಟ್ರಾಫಿಕ್ ಅನುಭವವನ್ನು 'ಎಕ್ಸ್' (ಟ್ವಿಟರ್) ವೇದಿಕೆಯಲ್ಲಿ ಹಂಚಿಕೊಂಡಿರುವ ಕ್ರಿಸ್ ಗೋಪಾಲಕೃಷ್ಣನ್, "ಇಂದು 31 ಕಿಲೋಮೀಟರ್ ಪ್ರಯಾಣಿಸಲು ನನಗೆ ಎರಡೂವರೆ ಗಂಟೆ ಬೇಕಾಯಿತು. ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಕೇವಲ ಟ್ರಾಫಿಕ್‌ಗೆ ಮಾತ್ರವಲ್ಲದೆ, ರಸ್ತೆಗಳ ದುಸ್ಥಿತಿ ಮತ್ತು ವಾಹನ ಸವಾರರಲ್ಲಿನ ಶಿಸ್ತಿನ ಕೊರತೆಯನ್ನು ಈ ಸಮಸ್ಯೆಗೆ ಮುಖ್ಯ ಕಾರಣಗಳೆಂದು ಗುರುತಿಸಿದ್ದಾರೆ. "ಟ್ರಾಫಿಕ್, ರಸ್ತೆಗಳ ಸ್ಥಿತಿ ಮತ್ತು ವಾಹನ ಸವಾರರ ಶಿಸ್ತಿನ ಕೊರತೆಯೇ ಈ ದುಸ್ಥಿತಿಗೆ ಕಾರಣ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆಗಳ ಮಹಾಪೂರ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಬೆಂಗಳೂರಿನ ಸಾವಿರಾರು ಮಂದಿ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.ಒಬ್ಬ ಬಳಕೆದಾರರು, "ಕಳೆದ ವಾರ ನನ್ನ 28 ಕಿ.ಮೀ ಪ್ರಯಾಣಕ್ಕೆ 3 ಗಂಟೆ ಹಿಡಿಯಿತು. ರಸ್ತೆಗಳು ಮತ್ತು ಸಂಚಾರ ನಿಯಮಗಳು ಸರಿಯಾಗುವವರೆಗೂ ಕಂಪನಿಗಳು ಉದ್ಯೋಗಿಗಳಿಗೆ 'ರಿಮೋಟ್ ವರ್ಕ್' (ಮನೆನಿಂದಲೇ ಕೆಲಸ) ಸೌಲಭ್ಯವನ್ನು ಮುಂದುವರಿಸಬೇಕು" ಎಂದು ಸಲಹೆ ನೀಡಿದ್ದಾರೆ.
ಇನ್ನು ಕೆಲವರು ಸಾರ್ವಜನಿಕ ಸಾರಿಗೆಯ ಮಹತ್ವವನ್ನು ಒತ್ತಿಹೇಳಿದ್ದಾರೆ. "ನಗರದ ಮೂಲಸೌಕರ್ಯಗಳು ಅತಿಯಾದ ಖಾಸಗಿ ವಾಹನಗಳ ಒತ್ತಡವನ್ನು ತಾಳಲಾರವು. ವಾರಾಂತ್ಯದಲ್ಲಾದರೂ ಜನರು ಬಸ್ ಅಥವಾ ಮೆಟ್ರೋವನ್ನು ಬಳಸುವ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕರಿಸಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಳೆಯುತ್ತಿರುವ ನಗರ, ಕುಂಠಿತ ಮೂಲಸೌಕರ್ಯ
ಬೆಂಗಳೂರು ತಂತ್ರಜ್ಞಾನ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ, ಮೂಲಸೌಕರ್ಯ ಅಭಿವೃದ್ಧಿ ಮಾತ್ರ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ವೇಗವಾಗಿಲ್ಲ ಎಂಬುದು ನಾಗರಿಕರ ವಾದ. ರಸ್ತೆಗಳ ವಿಸ್ತರಣೆ, ಮೆಟ್ರೋ ಕಾಮಗಾರಿಗಳ ತ್ವರಿತಗತಿಯ ಪೂರ್ಣಗೊಳಿಸುವಿಕೆ, ಕಠಿಣ ಸಂಚಾರ ನಿಯಮಗಳ ಜಾರಿ ಮತ್ತು ಸುಧಾರಿತ ನಗರ ಯೋಜನೆಯ ಅವಶ್ಯಕತೆ ಇದೆ ಎಂದು ಹಲವರು ಆಗ್ರಹಿಸಿದ್ದಾರೆ.ಮತ್ತೊಬ್ಬ ಬಳಕೆದಾರರು ಈ ಸಮಸ್ಯೆಯ ಆಳವನ್ನು ವಿಶ್ಲೇಷಿಸುತ್ತಾ, "31 ಕಿ.ಮೀ ಗೆ 2.5 ಗಂಟೆ ಎಂದರೆ ನಮ್ಮ ದೈನಂದಿನ ಜೀವನದ ಶಕ್ತಿ ಮತ್ತು ಸಮಯ ಎಷ್ಟು ವ್ಯರ್ಥವಾಗುತ್ತಿದೆ ಎಂಬುದು ಅರಿವಾಗುತ್ತದೆ. ಈ ಸಂಚಾರ ದಟ್ಟಣೆಯು ಕೇವಲ ದಟ್ಟಣೆಯಲ್ಲ, ಇದು ರಸ್ತೆ ಸಾಮರ್ಥ್ಯ, ಅವೈಜ್ಞಾನಿಕ ಬೆಳವಣಿಗೆ ಮತ್ತು ಶಿಸ್ತಿನ ಕೊರತೆಯ ಮಿಶ್ರಣ. ಅತಿದೊಡ್ಡ ದುರಂತವೆಂದರೆ, ಜನರು ಇಂತಹ ಅಸಹನೀಯ ಪರಿಸ್ಥಿತಿಯನ್ನೇ 'ಸಾಮಾನ್ಯ' ಎಂದು ಸ್ವೀಕರಿಸತೊಡಗಿದ್ದಾರೆ" ಎಂದು ಅಳಲು ತೋಡಿಕೊಂಡಿದ್ದಾರೆ.
ಕ್ರಿಸ್ ಗೋಪಾಲಕೃಷ್ಣನ್ ಅವರ ಈ ದನಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಭೀಕರತೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದು, ಆಡಳಿತ ವರ್ಗ ಎಚ್ಚೆತ್ತುಕೊಳ್ಳುತ್ತಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

