ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿಯಲು ಸಮೀಪದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಆಟದ ಮೈದಾನ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬುಧವಾರ ಸಂಜೆ ಕುಸಿದು ಬಿದ್ದ ಕಾಂಪೌಂಡ್ ಹಿಂಭಾಗದಲ್ಲಿ ಈ ಮೊದಲು ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿಯ ವಸತಿ ಗೃಹಗಳಿದ್ದವು.
ಐದು ವರ್ಷದ ಹಿಂದೆ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಿಸುವಾಗ ಅವನ್ನು ತೆರವು ಮಾಡಲಾಗಿತ್ತು. ಅಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ತೆಗೆದ ಮಣ್ಣಿನ ರಾಶಿಯೂ ಇದ್ದು, ಮೊದಲು ಪಾರ್ಕಿಂಗ್ ಜಾಗ ಮಾಡಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಸದ್ಯ ಇಲ್ಲಿ ವಿದ್ಯಾರ್ಥಿಗಳಿಗೆ ಚಿಕ್ಕ ಮೈದಾನ ಮಾಡಿಕೊಳ್ಳಲಾಗುತ್ತಿದ್ದು, ಕ್ರಿಕೆಟ್ ಪ್ರಾಕ್ಟೀಸ್‌ಗೆ ನೆಟ್ ನಿರ್ಮಿಸಿಕೊಳ್ಳಲಾಗಿದೆ. ಇದಕ್ಕಾಗಿ ಹೊಸ ಮಣ್ಣನ್ನು ಹಾಕಿ ಜಾಗ ಸಮತಟ್ಟು ಮಾಡಿಕೊಳ್ಳಲಾಗಿದ್ದು, ಆಸ್ಪತ್ರೆ ಕಡೆಯಿಂದ ಬಂದ ಮಳೆ ನೀರು ಹೊರಗೆ ಹೋಗಲಾಗದೆ ಅಲ್ಲಿ ಬ್ಲಾಕ್ ಆಗಿದ್ದರಿಂದ ಒತ್ತಡ ಉಂಟಾಗಿ ಗೋಡೆ ಕುಸಿದಿದೆಎಂದು ಸ್ಥಳೀಯರು ದೂರುತ್ತಾರೆ.
ಹಲವಾರು ವರ್ಷಗಳಿಂದ ಇದೇ ಪರಿಸರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವ ಫಯಾಜ್ ಈ ಕುರಿತು ಪ್ರತಿಕ್ರಿಯಿಸಿ, ''ಕ್ರಿಕೆಟ್ ಆಡಲೆಂದು ನಿರ್ಮಿಸಿದ ಮೈದಾನದಿಂದಾಗಿ ಸಮಸ್ಯೆ ಉಂಟಾಗಿದೆ. ಅಲ್ಲಿನೀರು ಬ್ಲಾಕ್ ಆಗುತ್ತಿದೆ. ಇದರಿಂದಾಗಿ ಹಳೆ ಗೋಡೆಗೆ ಹಾನಿಯಾಗಿದೆ. ಇದು ಮಾತ್ರವಲ್ಲದೆ, ಹೊಸದಾಗಿ ನಿರ್ಮಿಸಿದ ಕಾಂಪೌಂಡ್ ಕೂಡ ಬಿರುಕು ಬಿಟ್ಟಿದೆ,'' ಎಂದು ವಿವರಿಸಿದರು. ಬುಧವಾರ ಸಂಜೆ ಕಾಂಪೌಂಡ್ ಕುಸಿದ ವೇಳೆ ಫಯಾಜ್ ಅವರು ಅನತಿ ದೂರದಲ್ಲಿಬಟ್ಟೆ ವ್ಯಾಪಾರ ಮಾಡುತ್ತಿದ್ದರು.
ಅರ್ಧಕಟ್ಟಿ ಬಿಟ್ಟರು
ಕೆಲ ವರ್ಷಗಳ ಹಿಂದಷ್ಟೇ ಉದ್ಘಾಟನೆಯಾದ ವೈದ್ಯಕೀಯ ಮಹಾವಿದ್ಯಾಲಯದ ಎದುರಿನ ಹಾಗೂ ಸುತ್ತಲ ಕಾಂಪೌಂಡ್ ಹೊಸದಾಗಿ ನಿರ್ಮಿಸಲಾಗಿದೆ. ಆದರೆ, ಅದೇ ಕಾಂಪೌಂಡ್ ಅಂಚಿನಿಂದ ಆರಂಭವಾಗುವ ಅಂದರೆ ಸೇಂಟ್ ಬೆಸಿಲಿಕಾ ಚರ್ಚ್ ಹಿಂಭಾಗದ ರಸ್ತೆ ಎಡಪಾಶ್ರ್ವದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಮಾತ್ರ ಮರು ನಿರ್ಮಾಣ ಮಾಡಿಲ್ಲ. ಈ ತಡೆಗೋಡೆಯ ಕೆಲಭಾಗ ತೀರಾ ಹಳೆಯ ಗಾರೆಯದು. ಇನ್ನು ಕೆಲ ಭಾಗ 20-30 ವರ್ಷ ಹಳೆಯದಧಿಷ್ಟೇ. ಕಾಂಪೌಂಡ್‌ನಲ್ಲಿ ಸಿಮೆಂಟ್ ಸಾಲಿಡ್ ಬ್ಲಾಕ್ ಇದೆ. ಈಗ ಬಿದ್ದಿರುವ ಭಾಗವೇ ಇದು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದರು.ಹೊಸತರಲ್ಲೂ ಬಿರುಕು
ಮಹಾವಿದ್ಯಾಲಯದ ಎದುರಿನ ಕಾಂಪೌಂಡ್‌ಗಳು ಕೂಡ ಬಿರುಕು ಬಿಟ್ಟು ಬೀಳುವ ಸ್ಥಿತಿಗೆ ಬಂದಿವೆ. ಕೆಲವೆಡೆ ಕೊಂಚ ಮುಂದಕ್ಕೆ ವಾಲಿವೆ. ಇದರ ಜತೆಗೆ ಕುಸಿದ ಗೋಡೆಯ ಮೇಲ್ಭಾಗದಲ್ಲಿ ಮುತ್ತು ಮಾರಿಯಮ್ಮ ಚಿಕ್ಕ ದೇವಸ್ಥಾನವಿದ್ದು, ಅದಕ್ಕೆ ಹೊಂದಿಕೊಂಡಂತೆ ಚಿಕ್ಕದೊಂದು ಅರಳಿ ಮರವಿದೆ. ಅದರ ಬೇರುಗಳು ಕಾಂಪೌಂಡ್ ಕೆಳಗಿಳಿದಿರುವುದು ಕುಸಿತದ ಭಾಗದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ.ಹೊಣೆಗಾರಿಕೆ ಅನಾಥ
ಬೌರಿಂಗ್ ಆಸ್ಪತ್ರೆಯು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿದೆ. 2021ರವರೆಗೆ ಇದು ಬೆಂಗಳೂರು ಮೆಡಿಕಲ್ ಕಾಲೇಜು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿತ್ತು. ಹೀಗಾಗಿ, ಕಾಂಪೌಂಡ್ ಯಾರ ಕಾಲದಲ್ಲಿಯಾರು ನಿರ್ಮಿಸಿದ್ದು, ಇದಕ್ಕೆ ಯಾರು ಹೊಣೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ''ಕಾಂಪೌಂಡ್ ಬಲಿಷ್ಠವಾಗಿತ್ತು, ಬಿದ್ದಿದೆ,'' ಎಂದಷ್ಟೆ ಅಧಿಕಾರಿಗಳು ಹೇಳುತ್ತಿದ್ದಾರೆ. ''ಮೈದಾನ ಮಾಡಿಕೊಳ್ಳಲು ಅಲ್ಲಿನ ಮಣ್ಣು ತೆಗೆಯಲಾಗಿದೆಯೇ ಹೊರತು ಹೆಚ್ಚುವರಿಯಾಗಿ ಹಾಕಿಲ್ಲ,'' ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು.ವಿಧಿವಿಜ್ಞಾನ ತಂಡ ಭೇಟಿ
ಗುರುವಾರ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡ, ಸೋಕೊ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬಿದ್ದಿರುವ ಕಾಂಪೌಂಡ್ ಉದ್ದ, ಎತ್ತರ ಅಳೆದಿರುವ ಅಧಿಕಾರಿಗಳು ಸ್ಥಳದಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದರು. ಜತೆಗೆ ಬೀಳಲು ಕಾರಣ ಸೇರಿದಂತೆ ಇತರೆ ಮಾಹಿತಿ ಕಲೆ ಹಾಕಿದ್ದಾರೆ.
