Dailyhunt
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮ್ಯಾಪಿಂಗ್‌ ಪ್ರಕ್ರಿಯೆ ; 95 ಸಾವಿರ ಮತದಾರರ ಕಥೆ ಏನು?

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮ್ಯಾಪಿಂಗ್‌ ಪ್ರಕ್ರಿಯೆ ; 95 ಸಾವಿರ ಮತದಾರರ ಕಥೆ ಏನು?

Vijay Karnataka 1 week ago

ರಾಮನಗರ : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಪೂರ್ವ ಸಿದ್ಧತೆಯಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಮ್ಯಾಪಿಂಗ್‌ ಪ್ರಕ್ರಿಯೆ ಶೇ.89.80 ರಷ್ಟು ಪ್ರಗತಿ ಸಾಧಿಸಿದೆ. ಆದರೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 95 ಸಾವಿರ ಮತದಾರರ ಮ್ಯಾಪಿಂಗ್‌ಗೆ ಬಿಎಲ್‌ಒಗಳು ಹರಸಾಹಸ ಪಡುತ್ತಿದ್ದಾರೆ.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಯುತ್ತಿರುವ ಮತದಾರರ ಮ್ಯಾಪಿಂಗ್‌ ಪ್ರಕ್ರಿಯೆ ಉತ್ತಮ ಪ್ರಗತಿ ಸಾಧಿಸಿದೆ. ಶೇ. 80 ರಿಂದ 85 ರಷ್ಟು ಮ್ಯಾಪಿಂಗ್‌ ಅನ್ನು ಅಷ್ಟೇ ವೇಗವಾಗಿ ಮತ್ತು ಸುಲಲಿತವಾಗಿ ಮಾಡಿ ಮುಗಿಸಿದ ಬಿಎಲ್‌ಒಗಳು, ಶೇ.10 ರಷ್ಟು ಉಳಿದವರ ಮ್ಯಾಪಿಂಗ್‌ಗೆ ಹೈರಾಣಾಗುತ್ತಿದ್ದಾರೆ.

ಶೇ. 85 ರಿಂದ ಶೇ.90 ಗಡಿ ತಲುಪಲು ತಿಂಗಳ ಸಮಯ ಹಿಡಿದಿದೆ. ಅಲ್ಲದೆ ಒಂದು ಹಂತದಲ್ಲಿ ಜಿಲ್ಲೆಯಲ್ಲಿ ಶೇ.94. ರಷ್ಟು ಮ್ಯಾಪಿಂಗ್‌ ಮಾಡಲಾಗಿತ್ತು. ಆದರೆ ಆಯೋಗ ಇದನ್ನು ಶೇ. 89 ಕ್ಕೆ ಇಳಿಸಿದ್ದು, ಬಿಎಲ್‌ಒಗಳಿಂದ ಆಗಿದ್ದ ಲೋಪದೋಷಗಳ ಕಾರಣ ಶೇ.4ರಷ್ಟು ಮ್ಯಾಪಿಂಗ್‌ನ್ನು ರದ್ದುಗೊಳಿಸಿದೆ.

ಮುಂದೆ ಇವರ ಕಥೆ ಏನು ?

ಮೇಲಧಿಕಾರಿಗಳಿಂದ ನಿರಂತರ ಒತ್ತಡ, ಕೈಗೆ ಸಿಗದ ಮತದಾರರು, ಪತ್ತೆ ಆಗದ ಮತದಾರರ ಮೂಲ, ದಾಖಲೆಗಳ ಕೊರತೆಯಿಂದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಎಷ್ಟೇ ಹರಸಾಹಸಪಟ್ಟರು ಮತಪಟ್ಟಿಯಲ್ಲಿ 95 ಸಾವಿರರ ಮತದಾರರನ್ನು ಮ್ಯಾಪಿಂಗ್‌ ಮಾಡಲು ಈವರೆಗೆ ಸಾಧ್ಯವಾಗಿಲ್ಲ. ಮುಂದೆ ಇವರ ಕಥೆ ಏನು ಎಂಬ ಪ್ರಶ್ನೆ ಎದುರಾಗಿದೆ.

ಇನ್ನೂ ಸಾವಿರಾರು ಮೃತರ ಹೆಸರು ಮತಪಟ್ಟಿಯಲ್ಲಿದೆ. ಮೃತರ ಹೆಸರನ್ನು ಮ್ಯಾಪಿಂಗ್‌ ಮಾಡಲು ಸಾಧ್ಯವಿಲ್ಲ. ಕುಟುಂಬ ಸದಸ್ಯರಿಂದ ಮರಣ ಪ್ರಮಾಣ ಪತ್ರ ಪಡೆದು, ಅವರಿಂದ ಸಹಿ ಪಡೆದು ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗುತ್ತಿದೆ. ಇಲ್ಲಿಒಂದಷ್ಟು ಪ್ರಮಾಣದಲ್ಲಿ ಮೃತರ ಮರಣ ಪ್ರಮಾಣ ಪತ್ರ ಇಲ್ಲ. ಮತ್ತೊಂದೆಡೆ ಎರಡು, ಮೂರು ಕಡೆಗಳಲ್ಲಿಮತದಾರರ ಪಟ್ಟಿಯಲ್ಲಿ ಹೆಸರನ್ನು ಉಳಿಸಿಕೊಳ್ಳಲಾಗುತ್ತಿದೆ. ಅವರ ಸಮ್ಮತಿಯ ಮೇಲೆ ಒಂದ ಕಡೆ ಮಾತ್ರ ಹೆಸರನ್ನು ಉಳಿಸಿ, ಉಳಿದ ಕಡೆ ಅದನ್ನು ಡುಪ್ಲಿಕೇಟ್‌ ಐಟಿ ಎಂದು ನಮೂದಿಸಲಾಗುತ್ತಿದೆ.


ನಂತರ ಇದನ್ನು ಡಿಲಿಟ್‌ ಮಾಡಲಾಗುವುದು. ಒಂದಷ್ಟು ಮಂದಿ ಆಯಾ ಮತಗಟ್ಟೆಗಳಲ್ಲೇ ಇಲ್ಲ. ಶಾಶ್ವತವಾಗಿ ವಲಸೆ ಹೋಗಿದ್ದಾರೆ. ಇದ್ದವರೂ ಕೈಗೆ ಸಿಗುತ್ತಿಲ್ಲ. ಅಗತ್ಯ ಮಾಹಿತಿ ನೀಡಲು ವಿಫಲರಾಗುತ್ತಿದ್ದಾರೆ. ಎಷ್ಟೇ ಶತಪ್ರಯತ್ನ ಮಾಡುತ್ತಿದ್ದರೂ ಉಳಿದವರ ಮ್ಯಾಪಿಂಗ್‌ ಸಾಧ್ಯವಾಗುತ್ತಿಲ್ಲ. 2002ರ ಮತಪಟ್ಟಿಯಂತೆ ಅವರ ಹೆಸರು ಮೂಲ ತಂದೆ, ತಾಯಿಯ ಹೆಸರಿಗೆ ಮ್ಯಾಪಿಂಗ್‌ ಆಗುತ್ತಿಲ್ಲ.

ಮತದಾರರ ಮ್ಯಾಪಿಂಗ್‌

ಒಟ್ಟು 9,40,066 ಮತದಾರರ ಪೈಕಿ 8,44,169 ಮತದಾರರ ಹೆಸರು ಈವರೆಗೆ ಮ್ಯಾಪಿಂಗ್‌ ಆಗಿವೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿಅತಿ ಹೆಚ್ಚು ಶೇ.90.73, ನಂತರ ಮಾಗಡಿ ಶೇ.89.43, ಕನಕಪುರ 89.41 ಕೊನೆಯಾಗಿ ರಾಮನಗರ ಕ್ಷೇತ್ರದಲ್ಲಿ 88.45 (ಹಾರೋಹಳ್ಳಿ 91.62) ರಷ್ಟು ಮ್ಯಾಪಿಂಗ್‌ ಮುಕ್ತಾಯಗೊಂಡಿದೆ.

ಜಿಲ್ಲೆಯಲ್ಲಿ ಉಳಿದ 95 ಸಾವಿರ ಮತದಾರರಿಗೆ ಇನ್ನೂ ಕಾಲಾವಕಾಶವಿದ್ದು, ಕೂಡಲೇ ಬಿಎಲ್‌ಒಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಿ ಮ್ಯಾಪ್‌ ಮಾಡಿಸಿಕೊಳ್ಳಬಹುದು. ಇಲ್ಲದಿದ್ದಲ್ಲಿಎಸ್‌ಐಆರ್‌ ಘೋಷಣೆಯ ನಂತರ ಮತದಾರರ ಹೆಸರನ್ನು ಮತಪಟ್ಟಿಯಿಂದ ತಾತ್ಕಾಲಿಕವಾಗಿ ಕೈಬಿಡಲಾಗುತ್ತದೆ. ಚುನಾವಣಾ ಆಯೋಗ ಕೇಳುವ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಮತಟ್ಟಿಯಲ್ಲಿಹೆಸರು ಉಳಿಯಲಿದೆ, ಇಲ್ಲದಿದ್ದರೆ ಡಿಲಿಟ್‌ ಆಗಲಿದೆ.


ರಾಮನಗರ ಟೌನ್‌ನಲ್ಲಿ 11 ಸಾವಿರ ಮತದಾರರ ಮೂಲ ಪತ್ತೆಯಾಗಿಲ್ಲ!

ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಮ್ಯಾಪಿಂಗ್‌ ಆಗಿದೆ. ಅಲ್ಲಿಮತದಾರರ ಮೂಲವನ್ನು ಹುಡುಕುವುದು ಸುಲಭವಾಗಿದ್ದು, ಶೇ.91.31 ರಷ್ಟು ಗ್ರಾಮಾಂತರದಲ್ಲಿ ಪ್ರಗತಿಯಾಗಿದೆ. ಆದರೆ ರಾಮನಗರ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ಪಟ್ಟಣ, ಬಿಡದಿ ಪಟ್ಟಣ ಪ್ರದೇಶದಲ್ಲಿ ಶೇ.86.79 ರಷ್ಟು ಮಾತ್ರ ಪ್ರಗತಿಯಾಗಿದೆ.

ರಾಮನಗರ ಟೌನ್‌ನಲ್ಲಿ 11,302, ಹಾರೋಹಳ್ಳಿ ಪಟ್ಟಣದಲ್ಲಿ1,963, ಕನಕಪುರ ಪಟ್ಟಣದಲ್ಲಿ 67,74, ಮಾಗಡಿ ಪಟ್ಟಣದಲ್ಲಿ5,826, ಚನ್ನಪಟ್ಟಣದಲ್ಲಿ 8,622 ಮತದಾರರ ಮೂಲಗಳು ಇನ್ನೂ ಪತ್ತೆಯಾಗಿಲ್ಲ. ಒಟ್ಟಾರೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ22,390, ಮಾಗಡಿಯಲ್ಲಿ25621, ಕನಕಪುರದಲ್ಲಿ25019, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 21849 ಮತದಾರರ ಹೆಸರನ್ನು ಪಟ್ಟಿಯಲ್ಲಿ ಮ್ಯಾಪಿಂಗ್‌ ಹರಸಾಹಸ ಮಾಡಲಾಗುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka