ಬೆಂಗಳೂರು: ಕರ್ನಾಟಕ - ಮಹಾರಾಷ್ಟ್ರ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಗುಡ್‌ನ್ಯೂಸ್. ಮುಂಬೈ - ಬೆಂಗಳೂರು ನಡುವೆ ಮೂರು ತಿಂಗಳು ಪ್ರತಿ ವಾರ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಬೆಂಗಳೂರು ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ಬೇಸಿಗೆಯ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ ಮತ್ತು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸುವುದಾಗಿ ಮಧ್ಯ ರೈಲ್ವೆಯು ಸೂಚಿಸಿದೆ ಎಂದು ತಿಳಿಸಿದೆ.
ಬೆಂಗಳೂರು - ಮುಂಬೈ ವಿಶೇಷ ರೈಲಿನ ವೇಳಾಪಟ್ಟಿ ಏನು?
- ರೈಲು ಸಂಖ್ಯೆ 01013 ಲೋಕಮಾನ್ಯ ತಿಲಕ್ ಟರ್ಮಿನಲ್ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 19 ರಿಂದ ಜುಲೈ 12 ರವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 11:50 ಗಂಟೆಗೆ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಹೊರಟು, ಸೋಮವಾರ ಬೆಳಿಗ್ಗೆ 11:45 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.
- ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 01014 ಎಸ್‌ಎಂವಿಟಿ ಬೆಂಗಳೂರು - ಲೋಕಮಾನ್ಯ ತಿಲಕ್ ಟರ್ಮಿನಲ್ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು, ಏಪ್ರಿಲ್ 20 ರಿಂದ ಜುಲೈ 13, 2026 ರವರೆಗೆ ಪ್ರತಿ ಸೋಮವಾರ ಮಧ್ಯಾಹ್ನ 01:50 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು, ಮಂಗಳವಾರ ಮಧ್ಯಾಹ್ನ 01:30 ಗಂಟೆಗೆ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ. ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಒಟ್ಟು 13 ಟ್ರಿಪ್‌ಗಳನ್ನು ಪೂರೈಸಲಿವೆ.
ಎಲ್ಲೆಲ್ಲಿ ನಿಲುಗಡೆಯಾಗಲಿದೆ?
ಮಾರ್ಗಮಧ್ಯೆ, ಈ ರೈಲುಗಳು ಠಾಣೆ, ಕಲ್ಯಾಣ್, ಲೋನಾವಾಲಾ, ಪುಣೆ, ಸತಾರಾ, ಕರಾಡ್, ಸಾಂಗ್ಲಿ, ಮಿರಜ್, ರಾಯಬಾಗ, ಘಟಪ್ರಭಾ, ಬೆಳಗಾವಿ, ಲೋಂಡಾ, ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಹಾವೇರಿ, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ಈ ಮೂಲಕ ಕರ್ನಾಟಕದ 7 ಜಿಲ್ಲೆಗಳಲ್ಲಿ 13 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.22 ಬೋಗಿಗಳು ಇರಲಿವೆ
ಈ ರೈಲು ಎಸಿ, ಸ್ಲೀಪರ್, ಜನರಲ್ ಮತ್ತು ಎಸ್‌ಎಲ್‌ಆರ್‌ಡಿ ಬೋಗಿಗಳನ್ನು ಒಳಗೊಂಡ ಒಟ್ಟು 22 ಬೋಗಿಗಳನ್ನು ಹೊಂದಿರುತ್ತದೆ.
