ರಾಮನಗರ: ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುಷ್ಠಾನಕ್ಕೆ ಬರಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ತಲೆ ಎತ್ತಲಿದೆ.
ಈ ಯೋಜನೆ 18,133 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ 9 ಗ್ರಾಮಗಳ ವ್ಯಾಪ್ತಿಯಲ್ಲಿ ಈ ನವನಗರ (ಎಐ ಸಿಟಿ) ನಿರ್ಮಾಣವಾಗಲಿದೆ.
ಇದಕ್ಕಾಗಿ ಈ ವ್ಯಾಪ್ತಿಯಲ್ಲಿ ಸುಮಾರು ಭೂಮಿಯನ್ನು ರೆಡ್ ಝೋನ್‌ನಲ್ಲಿಇಡಲಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಜಿಬಿಡಿಎ ಯೋಜನೆಗೆ ಬೈರಮಂಗಲ, ಬನ್ನಿಗಿರಿ, ಹೊಸೂರು, ವಡೇರಹಳ್ಳಿ, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ಅರಳಾಲುಸಂದ್ರ ಒಟ್ಟು 9 ಗ್ರಾಮಗಳ ಸುಮಾರು 7,481ಎಕರೆ ಪ್ರದೇಶ ಗುರುತಿಸಿ, ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆಡಳಿತಾತ್ಮಕ ಕಾರಣಗಳಿಂದ ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸುವ ಅವಧಿಯನ್ನು ಒಂದು ವರ್ಷ ಮುಂದೂಡಲಾಗಿತ್ತು. ಇದೀಗ ಯೋಜನೆಗೆ ಸಂಪುಟದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಬರುವ ಸಾಧ್ಯತೆ ಇದೆ.
ನವನಗರ ನಿರ್ಮಾಣ ಉದ್ದೇಶದಿಂದಲೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಇತ್ತೀಚೆಗೆ ಮರುನಾಮಕರಣ ಮಾಡಲಾಗಿತ್ತು. ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದನ್ನು ಗಮನದಲ್ಲಿಇಟ್ಟುಕೊಂಡು ವಿಶ್ವ ದರ್ಜೆಯ ಕೆಲ ನಗರಗಳಿಗೆ ಸಮಾನವಾಗಿ ನಗರ ನಿರ್ಮಾಣ ಮಾಡಲು ಜಿಬಿಡಿಎ ಮುಂದಾಗಿದೆ.
ಮೆಟ್ರೋ ರೈಲು ಸಂಪರ್ಕ ಬಿಡದಿಗೆ ವಿಸ್ತರಣೆ
ಯೋಜನೆಗೆ ವಿರೋಧ ಕಂಡು ಬಂದರೂ ರೈತರಿಂದ ಭೂಸ್ವಾಧೀನ ಕಾರ್ಯ ನಡೆದಿರುವುದಲ್ಲದೆ, ಸರಕಾರ ನಿಗದಿಪಡಿಸಿರುವ ಹಣವನ್ನು ತಲುಪಿಸುವ ಕೆಲಸ ಇನ್ನೊಂದೆಡೆ ನಡೆದಿದೆ. ಇದೇ ಕಾರಣಕ್ಕಾಗಿ ಚಲ್ಲಘಟ್ಟವರೆಗೆ ಇರುವ ಮೆಟ್ರೋ ರೈಲು ಸಂಪರ್ಕವನ್ನು ಬಿಡದಿವರೆಗೂ ವಿಸ್ತರಿಸಲು ಸರಕಾರ ಈಗಾಗಲೇ ನಿರ್ಧರಿಸಿದೆ.2013ರ ಭೂಸ್ವಾಧೀನ ಕಾಯಿದೆ ಅನುಸಾರ ನಿಗದಿಪಡಿಸಿರುವ ಪರಿಹಾರ ಹಾಗೂ ಅಭಿವೃದ್ಧಿ ಪಡಿಸಿದ ವಸತಿ ನಿವೇಶನ ಪರಿಹಾರವಾಗಿ ನೀಡಲಾಗುವುದು. ಅಂತೆಯೇ, ವಾಣಿಜ್ಯ ನಿವೇಶನಗಳನ್ನು ಸಹ ಪರಿಹಾರವಾಗಿ ನೀಡಲು ನಿರ್ಣಯ. ಯೋಜನೆಗಾಗಿ ಅವಶ್ಯವಿರುವ ಹಣವನ್ನು ಸಾಲದ ಮುಖೇನ ಪಡೆಯಲು ಅನುಮೋದನೆ. ನಿಗದಿತ ಸಾಲದ ಮೊತ್ತಕ್ಕೆ ಸರಕಾರದ ಭದ್ರತೆ ನೀಡಲು ಹಾಗೂ ವಿಶ್ವದರ್ಜೆಯ ನಗರ ನಿರ್ಮಿಸಲು ಅಂತಾರಾಷ್ಟ್ರೀಯ ಮಟ್ಟದ ಯೋಜನಾ ನಿರ್ವಹಣೆ ಸಮಾಲೋಚಕ ಸಂಸ್ಥೆಯನ್ನು ಟೆಂಡರ್ ಮುಖೇನ ಆಯ್ಕೆ ಮಾಡಲು ಸಂಪುಟ ಅನುಮೋದನೆ ನೀಡಿದೆ.
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣ ಯೋಜನೆಗೆ ಸಂಪುಟದ ಅನುಮೋದನೆ ದೊರೆತಿದೆ. ಭೂಸ್ವಾಧೀನ ಸೇರಿದಂತೆ ಯೋಜನೆ ಅನುಷ್ಠಾನಕ್ಕೆ ಜಿಬಿಡಿಎ ಅಂತಿಮ ಸಿದ್ಧತೆ ಮಾಡಿಕೊಂಡಿದೆ. ಶೀಘ್ರದಲ್ಲೇ ಅಂತಿಮ ಅಧಿಸೂಚನೆ ಹೊರಬರಲಿದೆ. ರೈತರಿಗೆ ಗರಿಷ್ಠ ಪ್ರಮಾಣದ ಪರಿಹಾರ ಮೊತ್ತ ಹಾಗೂ ಪಾಲುದಾರಿಕೆ ನೀಡಲಾಗುತ್ತಿದೆ ಎಂದು ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜು ತಿಳಿಸಿದ್ದಾರೆ.
ಪ್ರಮುಖ ಅಂಶಗಳು ಏನು?
- ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದ್ದ ಯೋಜನೆ.
- ಅಂದಾಜು 20 ಸಾವಿರ ಕೋಟಿ ವೆಚ್ಚದಲ್ಲಿ ನವನಗರ ನಿರ್ಮಾಣ
- ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸುವ ನಿರೀಕ್ಷೆ
- 10 ಸಾವಿರ ಹಿಸ್ಸಾ ನಂಬರ್‌ಗಳ ಭೂಸ್ವಾಧೀನ ಪ್ರಕ್ರಿಯೆ
- ಸಮಗ್ರ ಉಪನಗರ ಬಳಿಯೇ ಎರಡನೇ ಅಂತಾರಾಷ್ಟೀಯ ವಿಮಾನ ನಿಲ್ದಾಣ ತಲೆ ಎತ್ತುವ ನಿರೀಕ್ಷೆ
- ಎಕರೆಗೆ 2.07 ಕೋಟಿಯಿಂದ 2.55 ಕೋಟಿ ಭೂ ಪರಿಹಾರ
- ತೆಂಗಿನ ಮರಕ್ಕೆ ಗರಿಷ್ಠ 40 ಸಾವಿರ, ಮಾವಿನ ಮರಕ್ಕೆ ಗರಿಷ್ಠ 64000 ಸಾವಿರ ಪರಿಹಾರ ನಿರೀಕ್ಷೆ
- ಶೇ.50:50 ಅನುಪಾತದಲ್ಲಿವಸತಿ ನಿವೇಶ ಹಾಗೂ ಶೇ.55:45 ಅನುಪಾತದ ವಾಣಿಜ್ಯ ನಿವೇಶನ ಪಾಲುದಾರಿಕೆ.
- 2000 ಕೋಟಿ ವೆಚ್ಚದಲ್ಲಿಬೈರಮಂಗಲ ಕೆರೆ ಅಭಿವೃದ್ಧಿ
- ಐಟಿ ಕಂಪನಿಗಳ ಹಬ್‌ಗಾಗಿ 2 ಸಾವಿರ ಎಕರೆ ಮೀಸಲಿಡಲು ಚಿಂತನೆ
- 1100 ಎಕರೆಗೂ ಅಧಿಕ ವ್ಯಾಪ್ತಿಯಲ್ಲಿಉದ್ಯಾನ, ಮೈದಾನ, ಹಸಿರು ಮತ್ತು ಸುಸ್ಥಿರ ನಗರ ನಿರ್ಮಾಣ
- 70 ಮೀಟರ್ ಅಗಲದ ರಸ್ತೆ ನಿರ್ಮಾಣ. 30 ಕಿ.ಮೀಟರ್‌ಗೂ ಹೆಚ್ಚು ಸಂಪರ್ಕ ರಸ್ತೆಗಳು

