ರಾಮನಗರ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರು -ಮೈಸೂರು ದಶಪಥ ಹೆದ್ದಾರಿ ಆರಂಭದಲ್ಲಿ ಬಿಡದಿ, ರಾಮನಗರ ಹಾಗೂ ಚನ್ನಪಟ್ಟಣ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಹಲವೆಡೆ ತಾತ್ಕಾಲಿಕ ಪ್ರವೇಶ (ಎಂಟ್ರಿ) ಮತ್ತು ನಿರ್ಗಮನ (ಎಕ್ಸಿಟ್) ದ್ವಾರಗಳನ್ನು ಕಲ್ಪಿಸಲಾಗಿತ್ತು.
ಆದರೆ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಒಂದೊಂದೇ ಕಡೆ ಈ ಸಂಪರ್ಕ ದ್ವಾರಗಳನ್ನು ಮುಚ್ಚಲು ಮುಂದಾಗಿದ್ದು, ಸ್ಥಳೀಯ ವಾಹನ ಸವಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳಿಗಾಗಿ 2025ರಲ್ಲಿ ಕೇಂದ್ರ ಸರ್ಕಾರ712 ಕೋಟಿ ಮಂಜೂರು ಮಾಡಿತ್ತು. ಈ ಯೋಜನೆಯಡಿ 14 ಕಡೆಗಳಲ್ಲಿ ಎಂಟ್ರಿ -ಎಕ್ಸಿಟ್ ವ್ಯವಸ್ಥೆ, ಟೋಲ್ ಪ್ಲಾಜಾಗಳು, ಬಸ್ ಶೆಲ್ಟರ್ ಹಾಗೂ ಸರ್ವಿಸ್ ರಸ್ತೆಗಳ ನಿರ್ಮಾಣಕ್ಕೆ ಎರಡು ವರ್ಷದ ಗಡುವು ನೀಡಲಾಗಿತ್ತು. ಆದರೆ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ.
ಸ್ಥಿರ ಟೋಲ್ ವ್ಯವಸ್ಥೆ ಜಾರಿಯಾಗದಿದ್ದರೂ, ಬಿಡದಿ ಮತ್ತು ರಾಮನಗರ ಸೇರಿದಂತೆ ಪ್ರಮುಖ ಸಂಪರ್ಕ ದ್ವಾರಗಳನ್ನು ದಿಢೀರ್ ಮುಚ್ಚುತ್ತಿರುವ ಕ್ರಮ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ದಾಸಪ್ಪನದೊಡ್ಡಿ ಬಳಿ ಬಿಡದಿಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಮೊದಲು ಪ್ರವೇಶ ಹಾಗೂ ನಿರ್ಗಮನ ಎರಡೂ ವ್ಯವಸ್ಥೆ ಇತ್ತು. ಈಗ ಮೈಸೂರು-ಬೆಂಗಳೂರು ಮಾರ್ಗದಲ್ಲಿ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ನಿರ್ಗಮನವನ್ನು ಬಂದ್ ಮಾಡಲಾಗಿದೆ. ಅದೇ ರೀತಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರವೇಶ ದ್ವಾರವನ್ನು ಮುಚ್ಚಿ, ನಿರ್ಗಮನವನ್ನು ಮಾತ್ರ ತೆರೆಯಲಾಗಿದೆ.
ರಾಮನಗರ ಸಮೀಪದ ಸಂಗನಬಸವನದೊಡ್ಡಿ ಬಳಿಯೂ ಇದೇ ಕ್ರಮ ಜಾರಿಗೊಳಿಸಲು ಎನ್‌ಎಚ್‌ಎಐ ಮುಂದಾಗಿದೆ. ಮೈಸೂರು ಕಡೆಯಿಂದ ರಾಮನಗರ ಪ್ರವೇಶಿಸಲು ಬಳಸುತ್ತಿದ್ದ ನಿರ್ಗಮನ ದ್ವಾರವನ್ನು ಮುಚ್ಚಲು ಸಿದ್ಧತೆ ನಡೆದಿದೆ.
ಮಂಡ್ಯ, ಮದ್ದೂರು ಹಾಗೂ ಚನ್ನಪಟ್ಟಣ ಭಾಗದಿಂದ ಬರುವ ವಾಹನಗಳು ಟೋಲ್ ತಪ್ಪಿಸಲು ಈ ನಿರ್ಗಮನ ಬಳಸಿಕೊಂಡು ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರಿಂದ ಟೋಲ್ ಸಂಗ್ರಹಕ್ಕೆ ನಷ್ಟವಾಗುತ್ತಿದೆ ಎಂಬ ಕಾರಣವನ್ನು ಪ್ರಾಧಿಕಾರ ಮುಂದಿಟ್ಟಿದೆ. ಅದೇ ರೀತಿ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗುವ ಕೆಲ ವಾಹನಗಳು ಬಿಡದಿ ಮಾರ್ಗವಾಗಿ ಬಂದು ಸಂಗನಬಸವನದೊಡ್ಡಿ ಬಳಿ ಎಕ್ಸ್‌ಪ್ರೆಸ್‌ವೇ ಪ್ರವೇಶಿಸುತ್ತಿರುವುದರಿಂದ ಅಲ್ಲಿನ ಎಂಟ್ರಿಯನ್ನೂ ಮುಚ್ಚಲು ನಿರ್ಧರಿಸಲಾಗಿದೆ.
ನನೆಗುದಿಗೆ ಬಿದ್ದ ಎಂಟ್ರಿ-ಎಕ್ಸಿಟ್ ಟೋಲ್ ಕಾಮಗಾರಿ
"ಜಿಲ್ಲಾ ಕೇಂದ್ರವಾದ ರಾಮನಗರಕ್ಕೆ ಮಂಡ್ಯ, ಮೈಸೂರು ಭಾಗದಿಂದ ಪ್ರತಿದಿನ ಸಾವಿರಾರು ಜನರು ಬರುತ್ತಾರೆ. ಸಮಯ ಉಳಿತಾಯಕ್ಕಾಗಿ ಎಕ್ಸ್‌ಪ್ರೆಸ್‌ವೇ ಬಳಸುತ್ತಾರೆ. ಈಗ ಟೋಲ್ ನೆಪದಲ್ಲಿ ರಾಮನಗರದ ನಿರ್ಗಮನವನ್ನೇ ಮುಚ್ಚಿದರೆ ಪ್ರಯಾಣಿಕರಿಗೆ ಅನ್ಯಾಯವಾಗುತ್ತದೆ."
-ರಮೇಶ್ ಗೌಡ, ಸ್ಥಳೀಯ ನಿವಾಸಿ
"ಕೋಟ್ಯಂತರ ರೂಪಾಯಿ ವೆಚ್ಚದ ಎಕ್ಸ್‌ಪ್ರೆಸ್‌ವೇಯಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣದ ಜನರು ಸಂಚರಿಸಬಾರದೇ? ಒಂದು ಕಡೆ ದುಬಾರಿ ಟೋಲ್, ಮತ್ತೊಂದು ಕಡೆ ಎಂಟ್ರಿ- ಎಕ್ಸಿಟ್‌ಗಳನ್ನು ಮುಚ್ಚಿದರೆ ಈ ಹೆದ್ದಾರಿಯ ಪ್ರಯೋಜನವೇನು?"
-ನಿರಂಜನ್, ರಾಮನಗರ ನಿವಾಸಿ

