ಹೊಸದಿಲ್ಲಿ/ಕೋಲ್ಕೊತಾ: ದೇಶದ ಹಲವು ಭಾಗಗಳಲ್ಲಿ ಏಪ್ರಿಲ್ ದ್ವಿತೀಯಾರ್ಧದಲ್ಲಿ ತಾಪ ಪ್ರಕೋಪದಿಂದ ತಂಪು ಪಾನೀಯಗಳು, ಐಸ್‌ಕ್ರೀಂ, ಏರ್ ಕಂಡೀಷನರ್‌ಗಳು ಮತ್ತು ರೆಫ್ರಿಜರೇಟರ್‌ಗಳ ಒಟ್ಟು ಮಾರಾಟದಲ್ಲಿ ಶೇ.50ರಷ್ಟು ಏರಿಕೆಯಾಗಿದೆ. ಮುಂಬರುವ ವಾರಗಳಲ್ಲಿ ಉಷ್ಣಾಂಶ ಇನ್ನಷ್ಟು ತೀಕ್ಷ್ಣವಾಗುವ ಸಾಧ್ಯತೆ ಇರುವುದರಿಂದ ಈ ಉತ್ಪನ್ನಗಳ ತಯಾರಿಕೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಹಲವು ಕಂಪನಿಗಳು ಸಜ್ಜಾಗಿವೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕೆಲ ಅಗತ್ಯ ಉತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಇದನ್ನು ಸರಿದೂಗಿಸಿಕೊಳ್ಳಲು ಬೆಲೆ ಏರಿಕೆ ಮೊರೆ ಹೋಗಿವೆ. ಶೇ.8-15ರಷ್ಟು ಧಾರಣೆ ಏರಿದರೂ ಗ್ರಾಹಕರು ತಂಪು ಸಾಧನಗಳು ಹಾಗೂ ತಿನಿಸುಗಳಿಗೆ ಮುಗಿ ಬೀಳುತ್ತಿದ್ದಾರೆ. ಮಾರ್ಚ್ ವರೆಗೆ ದುರ್ಬಲ ಬೇಡಿಕೆಯಿಂದಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು ಅಥವಾ ಕಡಿತಗೊಳಿಸಲಾಗಿತ್ತು. ಇದರಿಂದ ಏಪ್ರಿಲ್‌ನಲ್ಲಿ ಉತ್ಪನ್ನಗಳ ಕೊರತೆ ಉಂಟಾಗಿತ್ತು ಎಂದು ಎಸಿ ತಯಾರಕರು ತಿಳಿಸಿದ್ದಾರೆ.
ಮತ್ತೊಂದೆಡೆ ತಂಪು ಪಾನೀಯ ಮತ್ತು ಐಸ್‌ಕ್ರೀಂ ಕಂಪನಿಗಳು ಕಳೆದ ವರ್ಷವೇ ಉತ್ಪಾದನಾ ಸಾಮರ್ಥ ಹೆಚ್ಚಳಕ್ಕೆ ಬೇಕಾದ ಪೂರಕ ವ್ಯವಸ್ಥೆ ಮಾಡಿಕೊಂಡಿದ್ದವು. ಈಗ ಅದನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿವೆ. ಕಳೆದ 2 ವಾರಗಳಲ್ಲಿ ಎಸಿ, ಏರ್ ಕೂಲರ್ ಮತ್ತು ರೆಫ್ರಿಜರೇಟರ್‌ಗಳ ಮಾರಾಟದಲ್ಲಿ ಶೇ. 40ರಷ್ಟು ಹೆಚ್ಚಿದೆ. ''ದೇಶಾದ್ಯಂತ ಏಪ್ರಿಲ್‌ನಲ್ಲಿ ಮಾರಾಟದ ಭರಾಟೆ ಇದೆ. ಕಳೆದ ವರ್ಷ ಅನಿರೀಕ್ಷಿತ ಮಳೆಯಿಂದಾಗಿ ಬೇಡಿಕೆಯಲ್ಲಿ ಹಿನ್ನಡೆಯಾಗಿತ್ತು,'' ಎಂದು ತಂಪು ಪಾನೀಯ ಕಂಪನಿಯೊಂದರ ಅಧ್ಯಕ್ಷ ರವಿ ಜೈಪುರಿಯಾ ಹೇಳಿದ್ದಾರೆ.
''ಕೋಕಾ-ಕೋಲಾ ಮತ್ತು ಪೆಪ್ಸಿ ಕಂಪನಿ ಪಾಲುದಾರರು ಕಳೆದ ವರ್ಷ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆ, ವಿತರಣೆ ಮತ್ತು ಕೋಲ್ಡ್ ಚೈನ್ ಮೂಲಸೌಕರ್ಯಗಳ ಮೇಲೆ ಹೊಸ ಹೂಡಿಕೆಗಳನ್ನು ಘೋಷಿಸಿದ್ದರು. ಆದರೆ ಮಾರ್ಚ್ ನಿಂದ ಸೆಪ್ಟೆಂಬರ್ ತನಕ ಅಕಾಲಿಕ ಮಳೆಯಿಂದಾಗಿ ಸಾಮರ್ಥ್ಯ ವರ್ಧನೆಯ ಪೂರ್ಣ ಲಾಭವನ್ನು ಬಳಸಿಕೊಳ್ಳಲು ಆಗಿರಲಿಲ್ಲ. ಈಗ ಹೂಡಿಕೆಯು ಲಾಭವಾಗಿ ಪರಿವರ್ತನೆಯಾಗುವ ಕಾಲ ಬಂದಿದೆ,'' ಎಂದಿದ್ದಾರೆ.
''ದೇಶಾದ್ಯಂತ ತಾಪಮಾನ ಹೆಚ್ಚಾದಂತೆ ಉಷ್ಣಾಂಶ ತಗ್ಗಿಸುವ ಸಾಧನ, ಸಲಕರಣೆಗಳು ಮತ್ತು ತಂಪು ಪಾನೀಯಗಳಿಗೆ ಬೇಡಿಕೆ ಏರುಗತಿಯಲ್ಲಿದೆ ಹಳೆಯ ಬ್ರ್ಯಾಂಡ್‌ಗಳಿಂದ ಹೊಸ ಕಂಪನಿಗಳ ತನಕ ಐಸ್‌ಕ್ರೀಮ್ ತಯಾರಕರು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ದೇಶಾದ್ಯಂತ ಏರುತ್ತಿರುವ ತಾಪಮಾನದಿಂದ ಪ್ರಮುಖ ವಿಭಾಗಗಳಲ್ಲಿ ಶೇ. 30 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ,'' ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ ಜಯತೀರ್ಥ ಚಾರಿ ಹೇಳಿದ್ದಾರೆ.
''ಬೇಸಿಗೆ ಹಂಗಾಮದಲ್ಲಿ ಏರುತ್ತಿರುವ ಬೇಡಿಕೆಯನ್ನು ಗಮನಿಸಿದರೆ ಮೇ ಮಾಸದಲ್ಲಿ ಇದು ಇನ್ನಷ್ಟು ಹೆಚ್ಚಲಿದೆ.

