ನವದೆಹಲಿ: 2024ರ ಟಿ20 ವಿಶ್ವಕಪ್ ಬಳಿಕ ಹಿರಿಯ ಆಟಗಾರರಾಗಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ನಿವೃತ್ತಿ ಸಾರಿದ್ದರು. ಆ ಬಳಿಕ ತಂಡದ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್ ಅವರು 2026ರ ಟಿ20 ವಿಶ್ವಕಪ್ ಜಯಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
35 ವರ್ಷದ ಅವರು ಟೂರ್ನಿ ಬಳಿಕ ನಾಯಕತ್ವಕ್ಕೆ ವಿದಾಯ ಸಾರಬಹದು ಎಂದು ವದಂತಿಯಾಗಿತ್ತು. ಆದರೆ ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಸಿಸಿಐ ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ ಅವರನ್ನು ಭಾರತ ಟಿ20ಐ ತಂಡದ ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಲು ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಪಂಜಾಬ್ ಕಿಂಗ್ಸ್ (PBKS) ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಶೀಘ್ರದಲ್ಲೇ ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಕ್ರಿಕೆಟ್‌ನ ಚುಟುಕು ಮಾದರಿಯಲ್ಲಿ ಈ ನಾಯಕತ್ವದ ಬದಲಾವಣೆಯು ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆಯುವಂತೆ ಮಾಡಲು ಬಿಸಿಸಿಐ (BCCI), ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಮಾತುಕತೆ ನಡೆಸಿ ಅವರನ್ನೂ ಒಂದೇ ನಿರ್ಧಾರಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಟೈಂಸ್ ಆಫ್ ಇಂಡಿಯಾ ವರದಿ ಮಾಡಿದೆ.
ಯಾಕೆ ನಾಯಕತ್ವ ಬದಲಾವಣೆ?
ಪ್ರಸ್ತುತ ಟಿ20ಐ ನಾಯಕರಾಗಿರುವ ಸೂರ್ಯಕುಮಾರ್ ಯಾದವ್ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವುದಿಂದ ತೀವ್ರ ಒತ್ತಡದಲ್ಲಿದ್ದಾರೆ ಎಂದು ವರದಿ ಹೇಳಿದೆ. ಆದರೆ ವದಂತಿಗಳನ್ನು ನಿರಾಕರಿಸಿರುವ ಮುಂಬೈ ಇಂಡಿಯನ್ಸ್ (MI) ಸ್ಟಾರ್ ಆಟಗಾರ ಸೂರ್ಯಕುಮಾರ್, ತಾವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಬಯಸುವುದಾಗಿ ಘೋಷಿಸಿದ್ದಾರೆ. ಇದರ ನಡುವೆ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಸೀಮಿತ ಓವರ್‌ಗಳ ಎರಡೂ ಮಾದರಿಗಳಿಗೆ (ಏಕದಿನ ಮತ್ತು ಟಿ20) ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ಪ್ರಮುಖ ಸ್ಥಾನ ನೀಡಿದ್ದಾರೆ ಎಂದು ವರದಿ ತಿಳಿಸಿದೆ.ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟರ್
ಶ್ರೇಯಸ್ ಅಯ್ಯರ್ ಅವರನ್ನು 20 ಓವರ್‌ಗಳ ಮಾದರಿಯಲ್ಲಿ ಭಾರತದ ಹೊಸ ನಂ.4 ಬ್ಯಾಟರ್ ಆಗಿ ಪರಿಗಣಿಸಲಾಗುತ್ತಿದ್ದು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಪ್ರಸ್ತುತ ಸೂರ್ಯಕುಮಾರ್ ಯಾದವ್ ನಿರ್ವಹಿಸುತ್ತಿರುವ ಸ್ಥಾನವನ್ನು ಅವರು ತುಂಬುವ ಸಾಧ್ಯತೆ ಇದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಹಲವು ವಿಷಯಗಳಲ್ಲಿ, ವಿಶೇಷವಾಗಿ ಟೆಸ್ಟ್ ತಂಡದಲ್ಲಿ ಪರಿಣತ ಆಟಗಾರರ ಆಯ್ಕೆಯ ವಿಚಾರದಲ್ಲಿ ಒಂದೇ ಅಭಿಪ್ರಾಯ ಹೊಂದಿಲ್ಲದಿರುವುದು ವರದಿಯಾಗಿದೆ.ಟಿ20 ತಂಡದ ನಾಯಕತ್ವದ ಈ ರೇಸ್‌ನಲ್ಲಿ ಶ್ರೇಯಸ್ ಅಯ್ಯರ್ ಅವರಲ್ಲದೆ ಶುಭಮನ್ ಗಿಲ್, ಅಕ್ಷರ್ ಪಟೇಲ್, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅವರ ಹೆಸರುಗಳೂ ಕೇಳಿಬರುತ್ತಿವೆ. ಆದರೆ, ಸಂಜು ಸ್ಯಾಮ್ಸನ್ ಅವರ ಹೆಸರನ್ನು ಸದ್ಯಕ್ಕೆ ಈ ರೇಸ್‌ನಲ್ಲಿ ಪರಿಗಣಿಸಲಾಗಿಲ್ಲ. ಮುಖ್ಯವಾಗಿ 2028ರ ಟಿ20 ವಿಶ್ವಕಪ್, ಲಾಸ್ ಎಂಜಲೀಸ್ ಒಲಿಂಪಿಕ್ಸ್ ಸೇರಿದಂತೆ ಭವಿಷ್ಯದ ವಿವಿಧ ಟೂರ್ನಿಗಳನ್ನು ಗಮನದಲ್ಲಿರಿಸಿ ಬಿಸಿಸಿಐ ಈ ಬದಲಾವಣೆ ಮಾಡಲು ಬಯಸುತ್ತಿದೆ ಎಂದು ತಿಳಿದು ಬಂದಿದೆ.

