ಅಯೋಧ್ಯೆ: "ಭಕ್ತರು ದೇಣಿಗೆಯಾಗಿ ನೀಡಿದ ಇತರ ಬೆಲೆಬಾಳುವ ವಸ್ತುಗಳ ಜೊತೆಗೆ, ಪ್ರಸ್ತುತ 30 ಕೆಜಿಗೂ ಹೆಚ್ಚು ಚಿನ್ನದಂತಹ ವಸ್ತುಗಳು ಮತ್ತು 1,518 ಕೆಜಿ ಬೆಳ್ಳಿಯಂತಹ ವಸ್ತುಗಳು ತಮ್ಮ ಬಳಿ ಇವೆ" ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಸ್ಪಷ್ಟಪಡಿಸಿದ್ದಾರೆ.
"ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಲಾದ ಎಲ್ಲಾ 2,926 ಅಮೂಲ್ಯ ವಸ್ತುಗಳು ಸುರಕ್ಷಿತವಾಗಿವೆ. ಅವುಗಳ ದಾಖಲೆಗಳನ್ನು ಸರಿಯಾಗಿ ನಿರರ್ವಹಣೆ ಮಾಡಲಾಗಿದೆ" ಎಂದು ಸ್ವಾಮಿ ಗೋವಿಂಧ ದೇವ್ ಗಿರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಇಂದು (ಜುಲೈ 7-ಮಂಗಳವಾರ_ಟ್ರಸ್ಟ್ ಮಾಧ್ಯಮಗಳ ಮುಂದೆ ಚಿನ್ನದ ರಾಮಚರಿತಮಾನಸ ಮತ್ತು ವಜ್ರಖಚಿತ ಹಾರದಂತಹ ಕಾಣಿಕೆಗಳನ್ನು ಪ್ರದರ್ಶಿಸಿದೆ. ಇತ್ತೀಚಿಗೆ ರಾಮ ಮಂದಿರಕ್ಕೆ ಶಿವಸೇನೆ ನೀಡಿದ್ದ 4 ಕೆಜಿ ಬೆಳ್ಳಿ ಇಟ್ಟಿಗೆ ಬಗ್ಗೆ ಸಂಜಯ್ ರಾವತ್ ಪ್ರಶ್ನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣೆಯಾದ ಪಟ್ಟಿಯಲ್ಲಿ ಸೇರಿಲಾಗಿದ್ದ ಬೆಳ್ಳಿಯ ಚರಣ ಪಾದುಕೆ ಮತ್ತು ಬೆಳ್ಳಿಯ ಕಾಕಭುಶುಂಡಿ
ಕಲಾಕೃತಿಯನ್ನು ಕೂಡ, ರಾಮ ಜನ್ಮಭೂಮಿ ಟ್ರಸ್ಟ್ ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರದರ್ಶಿಸಿದೆ. ರಾಮ ಮಂದಿರದ ಪ್ರತಿಷ್ಠಾಪನೆಯ ನಂತರ ಭಕ್ತರು ಅರ್ಪಿಸಿದ ಚಿನ್ನ, ಬೆಳ್ಳಿ ಮತ್ತು ವಜ್ರಖಚಿತ ಆಭರಣಗಳು, ಕಲಾಕೃತಿಗಳು, ಕಿರೀಟಗಳು, ಹಾರಗಳು, ಚರಣ ಪಾದುಕೆ, ಬೆಳ್ಳಿ ಇಟ್ಟಿಗೆಗಳು ಮತ್ತು ಇತರ ಕಾಣಿಕೆಗಳು ಸುರಕ್ಷಿತವಾಗಿವೆ ಎಂದು ಟ್ರಸ್ಟ್ ಹೇಳಿದೆ.
"ದಾನ ಮಾಡಿದ ಪ್ರತಿಯೊಂದು ವಸ್ತುವನ್ನು ದಾನಿ ವಿವರಗಳು, ದಾನದ ದಿನಾಂಕ ಮತ್ತು ಇತರ ಸಂಬಂಧಿತ ದಾಖಲೆಗಳೊಂದಿಗೆ ದಾಸ್ತಾನು ಪಟ್ಟಿಯಲ್ಲಿ ನಮೂದಿಸಲಾಗಿದೆ. ಇದರಲ್ಲಿ ಅನಿತಾ ಭಾರದ್ವಾಜ್ ಎಂಬ ಭಕ್ತೆ ದಾನ ಮಾಡಿದ ಬೆಳ್ಳಿ ಕಾಕಭುಶುಂಡಿ ಕಲಾಕೃತಿಯೂ ದೇವಾಲಯದ ವಶದಲ್ಲಿ ಸುರಕ್ಷಿತವಾಗಿದೆ" ಎಂದು ಸ್ವಾಮಿ ಗೋವಿಂದ್ ದೇವ್ ಗಿರಿ ಹೇಳಿದ್ದಾರೆ.
ಮಾರ್ಚ್ 31, 2024 ರವರೆಗೆ ಟ್ರಸ್ಟ್ 16.765 ಕೆಜಿ ತೂಕದ ಚಿನ್ನದಂತಹ ವಸ್ತುಗಳನ್ನು ಸ್ವೀಕರಿಸಿತ್ತು. ನಂತರ 2024-25 ರಲ್ಲಿ 10.445 ಕೆಜಿ ಮತ್ತು 2025-26 ರಲ್ಲಿ 5.050 ಕೆಜಿ ವಸ್ತುಗಳನ್ನು ಪಡೆಯುವ ಮೂಲಕ, ಮಾರ್ಚ್ 31, 2026 ರ ವೇಳೆಗೆ ಒಟ್ಟು ಸಂಗ್ರಹವು 32.259 ಕೆಜಿ ತಲುಪಿದೆ.
ಟ್ರಸ್ಟ್‌ನ ಬೆಳ್ಳಿ ಸಂಗ್ರಹವು ಮೂಲ ರೂಪದಲ್ಲಿಯೇ ಉಳಿಸಿಕೊಳ್ಳಲಾದ ಬೆಳ್ಳಿಯ ವಸ್ತುಗಳು ಹಾಗೂ ದೇಣಿಗೆಯಾಗಿ ಬಂದ ಬೆಳ್ಳಿಯ ವಸ್ತುಗಳನ್ನು ಸರ್ಕಾರದ ಮೇಲ್ವಿಚಾರಣೆಯಲ್ಲಿ ಕರಗಿಸಿ ಮತ್ತು ಶುದ್ಧೀಕರಿಸಿ ಪಡೆದ 849.272 ಕೆಜಿ ಶುದ್ಧೀಕರಿಸಿದ ಬೆಳ್ಳಿಯನ್ನು ಒಳಗೊಂಡಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
ಮಾರ್ಚ್ 31, 2026 ರ ವೇಳೆಗೆ ಟ್ರಸ್ಟ್ ಬಳಿ 849.272 ಕೆಜಿ ಶುದ್ಧೀಕರಿಸಿದ ಬೆಳ್ಳಿ ಸೇರಿದಂತೆ ಒಟ್ಟು 1,518.925 ಕೆಜಿ ಬೆಳ್ಳಿ ಹಾಗೂ 32.259 ಕೆಜಿ ಚಿನ್ನದ ವಸ್ತುಗಳು ಇವೆ. ದೇಣಿಗೆಯಾಗಿ ಬಂದ ಎಲ್ಲಾ ವಸ್ತುಗಳನ್ನು ದಾಖಲಿಸಲಾಗಿದೆ ಮತ್ತು ಸ್ವತಂತ್ರ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯೊಂದರಿಂದ ವಾರ್ಷಿಕ ಭೌತಿಕ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಸ್ವಾಮಿ ಗೋವಿಂದ್ ದೇವ್ ಗಿರಿ ತಿಳಿಸಿದರು.
ಸಂಸ್ಕರಣೆಗಾಗಿ ಕಳುಹಿಸಲಾದ ಬೆಳ್ಳಿ ವಸ್ತುಗಳನ್ನು ಭಾರತ ಸರ್ಕಾರದ ಟಂಕಸಾಲೆಯ ಮೂಲಕ ಸಂಸ್ಕರಿಸಿ, ಛಾಯಾಚಿತ್ರಗಳು, ತೂಕದ ದಾಖಲೆಗಳು ಮತ್ತು ಶುದ್ಧತೆಯ ಪ್ರಮಾಣಪತ್ರಗಳನ್ನು ನಿರ್ವಹಿಸಲಾಗಿದೆ. ದಾನ ಮಾಡಿದ ಪ್ರತಿ ವಸ್ತುವಿಗೆ ರಶೀದಿಯನ್ನು ನೀಡಲಾಗಿದೆ ಎಂದು ಟೆಸ್ಟ್ ಸ್ಪಷ್ಟವಾಗಿ ಹೇಳಿದೆ.
ಆಭರಣಗಳು, ಅಮೂಲ್ಯ ಲೋಹಗಳು ಮತ್ತು ಇತರ ಬೆಲೆಬಾಳುವ ವಸ್ತುಗಳಿಗೆ ಪ್ರತ್ಯೇಕ ದಾಸ್ತಾನುಗಳು ಮತ್ತು ನೋಂದಣಿಗಳನ್ನು ಟ್ರಸ್ಟ್ ನಿರ್ವಹಿಸುತ್ತದೆ ಎಂದು ದಾಖಲೆಗಳು ತೋರಿಸುತ್ತವೆ, ಜೊತೆಗೆ ಮೌಲ್ಯಮಾಪನ ಮತ್ತು ಲೆಕ್ಕಪತ್ರ ದಾಖಲೆಗಳು ಮತ್ತು ಟ್ರಸ್ಟ್ ಸ್ವತ್ತುಗಳು ಮತ್ತು ದಾನ ಮಾಡಿದ ವಸ್ತುಗಳ ವಿವರವಾದ ವೇಳಾಪಟ್ಟಿಗಳನ್ನು ಸಹ ನಿರ್ವಹಿಸುತ್ತದೆ.
ಆಡಳಿತವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಾಂಸ್ಥಿಕ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲು ಟ್ರಸ್ಟ್ ನಿರ್ಧರಿಸಿದೆ. ಅದೇ ರೀತಿ ಸಭೆಯು ಕೃಷ್ಣ ಮೋಹನ್ ಅವರನ್ನು, ರಾಮ ಜನ್ಮಭೂಮಿ ಟ್ರಸ್ಟ್‌ನ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದೆ.
ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಅಂಗೀಕರಿಸಿರುವ ಟ್ರಸ್ಟ್, ಎಸ್‌ಐಟಿ ತಮನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.

