ಕಠ್ಮಂಡು: ಒಂದು ವಾರದ ಹಿಂದೆ ಭೋಟ್‌ಕೋಶಿ ನದಿಯಲ್ಲಿ ಸಂಭವಿಸಿದ ಮಾರಣಾಂತಿಕ ಹಠಾತ್ ಪ್ರವಾಹವು, ನೇಪಾಳದ ಕನಿಷ್ಠ ಮೂರು ಜಿಲ್ಲೆಗಳಲ್ಲಿನ ಹಳ್ಳಿಗಳನ್ನು ಸರ್ವನಾಶ ಮಾಡಿದೆ. ಈ ದುರಂತಕ್ಕೆ ಕಾರಣವಾದ ಹಸಿರುಮನೆ ಅನಿಲಗಳ ಪ್ರಮುಖ ಹೊರಸೂಸುವ ದೇಶಗಳೆಂದು, ನೇಪಾಳವು ಅಮೆರಿಕ, ಭಾರತ ಮತ್ತು ಚೀನಾ ದೇಶಗಳನ್ನು ಗುರುತಿಸಿದೆ.
ಅಲ್ಲದೇ ಈ ಮೂರೂ ದೇಶಗಳಿಂದ ಹವಾಮಾನ-ಸಂಬಂಧಿತ ಪರಿಹಾರವನ್ನು ಕೋರಿದೆ.
ಅಂತಾರಾಷ್ಟ್ರೀಯ ಆರ್ಥಿಕ ನೆರವನ್ನು ಕೋರುವ ನಿಟ್ಟಿನಲ್ಲಿ ರಾಜತಾಂತ್ರಿಕ ಪ್ರಯತ್ನವನ್ನು ಆರಂಭಿಸಿರುವ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್, ವಿಪತ್ತಿನ ನಂತರದ ನೆರವನ್ನು ದಾನ ಎಂದು ಪರಿಗಣಿಸದೆ ನೈತಿಕ ಹೊಣೆಗಾರಿಕೆಯ ವಿಷಯವೆಂದು ಪರಿಗಣಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಈಗಾಗಲೇ ನೇಪಾಳ ಪ್ರವಾಹದ ಮುನ್ಸೂಚನೆ ನೀಡದ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು.
ನೇಪಾಳದ ಕಾಂತಿಪುರ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ಶಿಶಿರ್ ಖನಾಲ್ ಅವರು, "ನಾವು ಸೃಷ್ಟಿಸದ ಜಾಗತಿಕ ಬಿಕ್ಕಟ್ಟಿಗೆ ನಾವು ಅತ್ಯಂತ ಭಾರಿ ಬೆಲೆ ತೆರುತ್ತಿದ್ದೇವೆ. ಹಿಮನದಿಗಳ ತ್ವರಿತ ಕರಗುವಿಕೆ ಮತ್ತು ಪರ್ವತ ಪ್ರದೇಶಗಳಲ್ಲಿ ಸಂಭವಿಸುವ ಇಂತಹ ವಿನಾಶಕಾರಿ ಸುನಾಮಿಗಳು ಜಾಗತಿಕ ಹವಾಮಾನ ಬದಲಾವಣೆಯ ನೇರ ಪರಿಣಾಮಗಳಾಗಿವೆ" ಎಂದು ಹೇಳಿದ್ದಾರೆ.
"ನೇಪಾಳವು ತನ್ನ ರಾಜತಾಂತ್ರಿಕ ನಿಲುವನ್ನು ಸಹಾಯದಿಂದ ನ್ಯಾಯ ಮತ್ತು ಪರಿಹಾರದತ್ತ ಬದಲಾಯಿಸುತ್ತಿದೆ. ಏಕೆಂದರೆ ಇದು ದಾನ-ಧರ್ಮದ ವಿಷಯವಲ್ಲ, ಇದು ಕಾನೂನುಬದ್ಧ ಮತ್ತು ನೈತಿಕ ಹೊಣೆಗಾರಿಕೆಯ ವಿಷಯವಾಗಿದೆ" ಎಂದು ನೇಪಾಳದ ವಿದೇಶಾಂಗ ಸಚಿವರು ಸೂಚ್ಯವಾಗಿ ಹೇಳಿದ್ದಾರೆ.
ಹೊಣೆಗಾರರು ಯಾರು?
"ಅತಿ ಹೆಚ್ಚು ಹಸಿರುಮನೆ ಅನಿಲಗಳನ್ನು ಹೊರಸೂಸುವ ಪ್ರಮುಖ ಕೈಗಾರಿಕಾ ರಾಷ್ಟ್ರಗಳಾದ ಚೀನಾ (ವಿಶ್ವದಲ್ಲೇ ಅಗ್ರಸ್ಥಾನ), ಅಮೆರಿಕ (ಎರಡನೇ ಸ್ಥಾನ) ಮತ್ತು ಭಾರತ (ಮೂರನೇ ಸ್ಥಾನ), ನೇಪಾಳದಂತಹ ದುರ್ಬಲ ರಾಷ್ಟ್ರಗಳಿಗೆ ಪರಿಹಾರ ನೀಡುವ ಐತಿಹಾಸಿಕ ಜವಾಬ್ದಾರಿಯನ್ನು ಹೊಂದಿವೆ" ಎಂದು ಶಿಶಿರ್ ಖನಾಲ್ ಅಭಿಪ್ರಾಯಪಟ್ಟಿದ್ದಾರೆ."ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹವಾಮಾನ ಬದಲಾವಣೆಯ ವಿಷಯವನ್ನು ಅತ್ಯಂತ ದೃಢತೆ ಮತ್ತು ಸ್ಪಷ್ಟತೆಯೊಂದಿಗೆ ಪ್ರಸ್ತಾಪಿಸಲು ಕಠ್ಮಂಡು ಯೋಜಿಸುತ್ತಿದೆ. ಹವಾಮಾನ ಬದಲಾವಣೆಯಿಂದಾಗಿ ದುರ್ಬಲ ರಾಷ್ಟ್ರಗಳು ಅನುಭವಿಸಿದ ನಷ್ಟಗಳಿಗೆ ಪರಿಹಾರ ನೀಡುವಂತೆ ಪ್ರಮುಖ ಹೊರಸೂಸುವ ರಾಷ್ಟ್ರಗಳನ್ನು ತಮ್ಮ ದೇಶವು ಒತ್ತಾಯಿಸಲಿದೆ" ಎಂದು ನೇಪಾಳದ ವಿದೇಶಾಂಗ ಸಚಿವರು ಸಂದರ್ಶನದಲ್ಲಿ ಹೇಳಿದ್ದಾರೆ.
"ಇದು ನಾಗರಿಕತೆಯ ಅಸ್ತಿತ್ವಕ್ಕೆ ಸಂಬಂಧಿಸಿದ ವಿಷಯವಾಗಿದೆ. ನಮ್ಮ ಹಿಮಾಲಯದ ಹಿಮನದಿಗಳು ಕಣ್ಮರೆಯಾದರೆ, ಗಂಗಾ ಮತ್ತು ತ್ರಿಶೂಲಿಯಂತಹ ನದಿಗಳನ್ನು ಅವಲಂಬಿಸಿರುವ ದಕ್ಷಿಣ ಏಷ್ಯಾದ 200 ಕೋಟಿಗೂ ಹೆಚ್ಚು ಜನರ ನೀರಿನ ಭದ್ರತೆಗೆ ಶಾಶ್ವತವಾಗಿ ಧಕ್ಕೆ ಉಂಟಾಗುತ್ತದೆ. ನಾವು ಕೇವಲ ನೇಪಾಳಕ್ಕಾಗಿ ಮಾತ್ರವಲ್ಲ, ದಕ್ಷಿಣ ಏಷ್ಯಾದ ನಾಗರಿಕತೆಯ ಉಳಿವಿನ ಪರವಾಗಿಯೂ ಧ್ವನಿ ಎತ್ತುತ್ತಿದ್ದೇವೆ" ಎಂದು ಶಿಶಿರ್ ಖನಾಲ್ ನುಡಿದರು.
ಭಾರತದ ನಿಲುವು:
ಭಾರತವು ಹವಾಮಾನ ಸಮಾನತೆಯನ್ನು ಪದೇ ಪದೇ ಒತ್ತಿಹೇಳಿದೆ ಮತ್ತು ಅದರ ಕಡಿಮೆ ತಲಾ ಹೊರಸೂಸುವಿಕೆಯನ್ನು ಎತ್ತಿ ತೋರಿಸಿದೆ. ಹವಾಮಾನ ಬಾಧ್ಯತೆಗಳು ದೇಶಗಳ ಐತಿಹಾಸಿಕ ಹೊರಸೂಸುವಿಕೆ, ಅಭಿವೃದ್ಧಿ ಅಗತ್ಯಗಳು ಮತ್ತು ಸಾಮರ್ಥ್ಯಗಳಲ್ಲಿನ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನವದೆಹಲಿ ವಾದಿಸುತ್ತದೆ.ದುರ್ಬಲ ಅಭಿವೃದ್ಧಿಶೀಲ ರಾಷ್ಟ್ರಗಳು ಅನುಭವಿಸುವ ನಷ್ಟ ಮತ್ತು ಹಾನಿಯನ್ನು ಪರಿಹರಿಸುವ ಪ್ರಯತ್ನಗಳನ್ನು ನವದೆಹಲಿ ಬೆಂಬಲಿಸಿದೆ ಮತ್ತು ಮೊದಲು ಕೈಗಾರಿಕೀಕರಣಗೊಂಡ ಪಾಶ್ಚಿಮಾತ್ಯ ರಾಷ್ಟ್ರಗಳು ಜಾಗತಿಕ ಇಂಗಾಲದ ಬಜೆಟ್‌ನ ಬಹುಪಾಲು ಭಾಗವನ್ನು ಆಕ್ರಮಿಸಿಕೊಂಡಿವೆ ಎಂದು ಪ್ರತಿಪಾದಿಸಿದೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಂತಹ ರಾಷ್ಟ್ರಗಳಿಗೆ ಹವಾಮಾನ ಪರಿಣಾಮಗಳನ್ನು ನಿಭಾಯಿಸಲು ಸಹಾಯ ಮಾಡಲು ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ಭಾರತ ಪದೇ ಪದೇ ಹೇಳಿದೆ. ಪ್ರವಾಹದ ಬಳಿಕ ನೇಪಾಳಕ್ಕೆ ಭಾರತದ ಮಾನವೀಯ ನೆರವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

