ಬೆಂಗಳೂರು: ಬಿಡದಿ ಟೌನ್‌ಶಿಪ್ ವಿರೋಧಿಸಿ ಪ್ರತ್ಯೇಕವಾಗಿ ಪಾದಯಾತ್ರೆ ನಡೆಸಲು ಮುಂದಾಗಿದ್ದ ಬಿಜೆಪಿ, ಜೆಡಿಎಸ್ ನಾಯಕರು ಪಕ್ಷಗಳ ಉದ್ದೇಶಿತ ಪಾದಯಾತ್ರೆಯ ಬಗ್ಗೆ ಶನಿವಾರ ಅಧಿಕೃತವಾಗಿ ಪ್ರಕಟಿಸಲು ನಿರ್ಧರಿಸಿವೆ.
ದಿಲ್ಲಿಯಲ್ಲಿ ಬುಧವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.
ಅಶೋಕ್ ಅವರು ಟೌನ್‌ಶಿಪ್ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ನಡೆಸುವ ಹೋರಾಟ ವಿಚಾರವಾಗಿ ಚರ್ಚಿಸಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ. ಮೋಹನ್ ಇತರರು ಪಾಲ್ಗೊಂಡಿದ್ದರು. ಸುಮಾರು ಒಂದೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳು ಹಾಗೂ ಟೌನ್‌ಶಿಪ್ ವಿರುದ್ಧ ಪಾದ-ಯಾತ್ರೆ ವಿಚಾರವಾಗಿ ಚರ್ಚೆ ನಡೆಯಿತು.
ಶನಿವಾರ ಚರ್ಚಿಸಿ ತೀರ್ಮಾನ
ಪಾದಯಾತ್ರೆಯನ್ನು ಬಿಜೆಪಿ, ಜೆಡಿಎಸ್ ಜಂಟಿಯಾಗಿ ನಡೆಸಬೇಕೆ ಅಥವಾ ಈಗಾಗಲೇ ಘೋಷಿಸಿರುವಂತೆ ಪ್ರತ್ಯೇಕವಾಗಿ ಮುಂದುವರಿಯಬೇಕೆ ಎಂಬ ಬಗ್ಗೆ ಶನಿವಾರ ವಿಸ್ತ್ರತ ಚರ್ಚಿಸಿ ತೀರ್ಮಾನಿಸಿವೆ. ಸಭೆಯ ನಂತರ ಪಾದಯಾತ್ರೆ ರೂಪುರೇಷೆಯನ್ನು ಅಂತಿಮಗೊಳಿಸಲಿದ್ದಾರೆ. ''ರಾಜ್ಯದ ನಾಯಕರೊಂದಿಗೂ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಶನಿವಾರ ಸಭೆ ಸೇರಿ ಚರ್ಚಿಸುವುದು ಸೂಕ್ತ,'' ಎಂದು ಕುಮಾರಸ್ವಾಮಿ ಸಲಹೆ ನೀಡಿದರು. ಅದಕ್ಕೆ ಅಶೋಕ್ ಇತರೆ ನಾಯಕರು ಒಪ್ಪಿದ್ದಾರೆ.ಇದೇ 13ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಹೊರಗೆ ಪಾದಯಾತ್ರೆ ನಡೆಸಿ ಬಳಿಕ ಸದನದಲ್ಲೂ ಟೌನ್‌ಶಿಪ್‌ಗೆ ವಿರೋಧವನ್ನು ವ್ಯಕ್ತಪಡಿಸಲು ಪ್ರತಿಪಕ್ಷಗಳು ತೀರ್ಮಾನಿಸಿವೆ. ರೈತರ ಪರವಾಗಿ ಪ್ರಖರ ಧ್ವನಿಯನ್ನು ಈ ಸಲದ ಕಲಾಪದಲ್ಲಿಮೊಳಗಿಸಬೇಕು. ಸದನದ ಸಮಯವನ್ನು ರಾಜ್ಯದ ಬರ, ಅತಿವೃಷ್ಟಿ, ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದಕ್ಕೆ ವಿನಿಯೋಗಿಸಲು ಚರ್ಚೆ ನಡೆಸಿದ್ದಾರೆ.
ಬಿಜೆಪಿ- ಜೆಡಿಎಸ್ ಹೋರಾಟದ ಬಗ್ಗೆ ಚರ್ಚೆ
ಭೇಟಿ ನಂತರ ಪ್ರತಿಕ್ರಿಯಿಸಿದ ಆರ್ ಅಶೋಕ, ''ಪ್ರತಿ ಬಾರಿಯಂತೆ ಈ ಬಾರಿಯೂ ವಿಧಾನಮಂಡಲ ಅಧಿವೇಶನಕ್ಕೂ ಮೊದಲು ಕುಮಾರಸ್ವಾಮಿ ಅವರೊಂದಿಗೆ ಸದನದಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳು, ರಾಜ್ಯ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುವ ವಿಚಾರವಾಗಿ ಚರ್ಚಿಸಲಾಗಿದೆ. ಮುಖ್ಯವಾಗಿ ರಿಯಲ್ ಎಸ್ಟೇಟ್‌ನ ವ್ಯವಹಾರದ ಭಾಗದಂತಿರುವ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಈಗಾಗಲೇ ಬಿಜೆಪಿ, ಜೆಡಿಎಸ್ ಹೋರಾಟ ನಡೆಸುತ್ತಿವೆ. ಹಾಗೆಯೇ ಎರಡೂ ಪಕ್ಷಗಳು ಪಾದಯಾತ್ರೆ ನಡೆಸುವುದಾಗಿಯೂ ಘೋಷಿಸಿವೆ. ಅಧಿವೇಶನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ವಿಷಯವಾಗಿ ಶನಿವಾರ ಉಭಯ ಪಕ್ಷಗಳ ನಾಯಕರು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ,'' ಎಂದು ಹೇಳಿದರು.''ಬಿಜೆಪಿ ಹಾಗೂ ಜೆಡಿಎಸ್‌ನಿಂದ ತಲಾ ಮೂರ್ನಾಲ್ಕು ಮಂದಿ ಸಭೆ ಸೇರಲಿದ್ದೇವೆ. ಪಾದಯಾತ್ರೆ ಹೋರಾಟವನ್ನು ಜಂಟಿಯಾಗಿ ನಡೆಸಬೇಕೆ ಅಥವಾ ಹೇಗೆ ಎಂಬ ಬಗ್ಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆಯನ್ನು ಅಂತಿಮಗೊಳಿಸಿ ಅಧಿಕೃತವಾಗಿ ಘೋಷಿಸ-ಲಾಗು-ವುದು. ಯಾವುದೇ ಟೌನ್‌ಶಿಪ್ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ. ರೈತರನ್ನು ಒಕ್ಕಲೆಬ್ಬಿಸಲು ಬಿಡುವು-ದಿಲ್ಲ. ಸದನದಲ್ಲೂದೊಡ್ಡ ಹೋರಾಟ ನಡೆಸಲಾಗುವುದು. ಬಿಜೆಪಿ- ಜೆಡಿಎಸ್ ಸಮನ್ವಯ ಸಮಿತಿಯೂ ರಚನೆಯಾಗ-ಬೇಕಿದ್ದು, ಆ ಬಗ್ಗೆಯೂ ಸಮಾಲೋಚಿಸಲಾಗುವುದು,'' ಎಂದು ತಿಳಿಸಿದರು.

