Dailyhunt
ಬಿಕೆ ಹರಿಪ್ರಸಾದ್‌ ಸೇರಿ ಕರ್ನಾಟಕದ 12 ಎಂಎಲ್‌ಸಿಗಳು ಶೀಘ್ರ ನಿವೃತ್ತಿ; ಯಾರೆಲ್ಲಾ? ನೂರಾರು ಆಕಾಂಕ್ಷಿಗಳು!

ಬಿಕೆ ಹರಿಪ್ರಸಾದ್‌ ಸೇರಿ ಕರ್ನಾಟಕದ 12 ಎಂಎಲ್‌ಸಿಗಳು ಶೀಘ್ರ ನಿವೃತ್ತಿ; ಯಾರೆಲ್ಲಾ? ನೂರಾರು ಆಕಾಂಕ್ಷಿಗಳು!

Vijay Karnataka 2 weeks ago

ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನಲ್ಲಿ ಇದೇ ಜೂನ್‌/ ಜುಲೈನಲ್ಲಿ ತೆರವಾಗಲಿರುವ ಒಟ್ಟು 12 ಸದಸ್ಯ ಸ್ಥಾನಗಳನ್ನು ಗಿಟ್ಟಿಸಲು ಕಾಂಗ್ರೆಸ್‌ನಲ್ಲಿ ಜಾತಿ, ಸಮುದಾಯದ ಕೋಟಾದಲ್ಲಿ ನೂರಾರು ಆಕಾಂಕ್ಷಿಗಳು ಪ್ರಯತ್ನ ಆರಂಭಿಸಿದ್ದಾರೆ.ವಿಧಾನಸಭೆಯಿಂದ ಆಯ್ಕೆಯಾಗುವ 7 ಸ್ಥಾನಗಳು ಹಾಗೂ ಐವರು ನಾಮನಿರ್ದೇಶನ ಸದಸ್ಯ ಸ್ಥಾನಗಳು ತೆರವಾಗುತ್ತಿದೆ.

ವಿಧಾನಸಭೆಯಿಂದ ಚುನಾಯಿತರಾಗಬೇಕಾದ 7 ಸ್ಥಾನಗಳಲ್ಲಿ ಕನಿಷ್ಠ 4 ಸ್ಥಾನಗಳು ಕಾಂಗ್ರೆಸ್‌ಗೆ ಸಿಗುತ್ತಿವೆ. ಹಿರಿಯರ ಸದನ ಪ್ರವೇಶಿಸುವ ಉಮೇದಿಯಲ್ಲಿ ಆಕಾಂಕ್ಷಿಗಳು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌, ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎ ಐ ಸಿ ಸಿ ನಾಯಕರ ಬೆನ್ನು ಬಿದ್ದಿದ್ದಾರೆ.

ಸಾಮಾಜಿಕ ನ್ಯಾಯದ ಸೂತ್ರ

ವಿಧಾನ ಪರಿಷತ್‌ನಲ್ಲಿ ತೆರವಾಗುತ್ತಿರುವ ಸ್ಥಾನಗಳ ಭರ್ತಿಯಲ್ಲಿ ಎಲ್ಲ ಜಾತಿ, ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ಕಾಂಗ್ರೆಸ್‌ ಬಯಸಿದೆ. ಸಣ್ಣ ಪುಟ್ಟ ಸಮುದಾಯಗಳನ್ನೂ ಗುರುತಿಸಲು ಉದ್ದೇಶಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಣ್ಣ ಸಮಾಜಗಳ ಸಾಧಕರಿಗೆ ಈ ಬಾರಿ ಅವಕಾಶ

ನಾಮನಿರ್ದೇಶನ ಅವಕಾಶ ಬಳಸಿಕೊಂಡು ಪಕ್ಷಕ್ಕೆ ಕೊಡುಗೆ ನೀಡಿರುವ ಸಣ್ಣ ಸಮಾಜಗಳ ಪ್ರಮುಖರನ್ನು ಸಾಧಕರ ಕೋಟಾದಲ್ಲಿ ವಿಧಾನ ಪರಿಷತ್‌ನಲ್ಲಿ ಅವಕಾಶ ಕಲ್ಪಿಸಲಾಗುತ್ತಿದ್ದು, ಈ ಪೈಕಿ ಪಕ್ಷದ ಥಿಂಕ್‌ಟ್ಯಾಂಕ್‌ ಆಗಿ ಗುರುತಿಸಿಕೊಂಡಿರುವ ಕೆಲವರಿಗೂ ಚಾನ್ಸ್‌ ಸಿಗುವ ನಿರೀಕ್ಷೆಯಿದೆ. (ಕರ್ನಾಟಕ ವಿಧಾನಪರಿಷತ್ ಚುನಾವಣೆ)

ಮುಸ್ಲಿಂ ಸಮುದಾಯದವರಿಗೆ ಟಿಕೆಟ್‌

ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಕೋಮಿಗೆ ಒಂದೊಂದು ಸ್ಥಾನದ ಜತೆಗೆ, ಪರಿಶಿಷ್ಟ ಪಂಗಡದ ಒಬ್ಬರಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ದಾವಣಗೆರೆ ಕ್ಷೇತ್ರದ ವಿಧಾನ ಸಭೆ ಉಪಚುನಾವಣೆಯಲ್ಲಿ ಟಿಕೆಟ್‌ ಕೈ ತಪ್ಪಿ ಆಗಿ ಅಸಮಾಧಾನಗೊಂಡಿರುವ ಮುಸ್ಲಿಂ ಸಮುದಾಯದವರಿಗೆ ಒಂದು, ಲಂಬಾಣಿ, ಒಕ್ಕಲಿಗ, ಲಿಂಗಾಯಿತ, ಬ್ರಾಹ್ಮಣ ಹಾಗೂ ಒಬಿಸಿಗೆ ತಲಾ ಒಂದೊಂದು ಸ್ಥಾನ ಹಂಚಲು ಪಕ್ಷದಲ್ಲಿ ಸಾಮಾಜಿಕ ನ್ಯಾಯದ ಸೂತ್ರ ಸಿದ್ಧವಾಗುತ್ತಿದೆ. ಬಾಕಿ ಉಳಿದ ಸ್ಥಾನಗಳಿಗೆ ಬಿಜೆಪಿಯಲ್ಲೂ ಪೈಪೋಟಿ ಇದೆ ಎನ್ನಲಾಗಿದೆ.

ನಿವೃತ್ತಿಯಾಗುತ್ತಿರುವ ಎಂಎಲ್‌ಸಿಗಳು (ಜೂನ್ 30ಕ್ಕೆ ನಿವೃತ್ತಿ)

  • ಕಾಂಗ್ರೆಸ್‌: ಬಿ.ಕೆ.ಹರಿಪ್ರಸಾದ್‌, ನಜೀರ್‌ ಅಹ್ಮದ್‌, ತಿಪ್ಪಣಪ್ಪ ಕಮಕನೂರ
  • ಬಿಜೆಪಿ: ಎಂಟಿಬಿ ನಾಗರಾಜ್‌, ಪ್ರತಾಪ್‌ ಸಿಂಹ ನಾಯಕ್‌, ಸುನೀಲ್‌ ವಲ್ಯಾಪುರ್‌
  • ಜೆಡಿಎಸ್‌: ಗೋವಿಂದರಾಜ್‌.
  • ನಾಮನಿರ್ದೇಶನ ಸದಸ್ಯರು: ಭಾರತಿ ಶೆಟ್ಟಿ , ಶಾಂತಾರಾಮ್‌ ಬುಡ್ನ ಸಿದ್ದಿ , ಡಾ.ತಳವಾರ್‌ ಸಾಬಣ್ಣ , ಅಡಗೂರು ಎಚ್‌.ವಿಶ್ವನಾಥ್‌ ಹಾಗೂ ರಮೇಶ್‌ ಬಾಬು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka