ವಾಷಿಂಗ್ಟನ್ ಡಿಸಿ: ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಅಲೆದಾಡಿದ ನಂತರ, ಸ್ಪೇಸ್‌ಎಕ್ಸ್ ರಾಕೆಟ್‌ನ ನಾಲ್ಕು ಟನ್ ತೂಕದ ಅವಶೇಷವೊಂದು, ಗಂಟೆಗೆ ಸುಮಾರು 8,700 ಕಿಲೋಮೀಟರ್ ವೇಗದಲ್ಲಿ ಚಂದ್ರನ ಮೇಲ್ಮೈಗೆ ಅಪ್ಪಳಿಸಿರಬಹುದು ಎಂದು ಖಗೋಳ ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಶಕ್ತಿಯುತ ದೂರದರ್ಶಕಗಳು ಮತ್ತು ಕ್ಯಾಮೆರಾಗಳ ಮೂಲಕ ಈ ಘಟನೆಯನ್ನು ಗಮನಿಸುತ್ತಿದ್ದ ಖಗೋಳಶಾಸ್ತ್ರಜ್ಞರಿಗೆ, ಈ ಡಿಕ್ಕಿಯ ಪರಿಣಾಮವನ್ನು ತಕ್ಷಣವೇ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಡಿಕ್ಕಿ ಸಂಭವಿಸಿದ ಸ್ಥಳವು ಚಂದ್ರನ ಗೋಚರ ಅಂಚಿನ ಸಮೀಪವಿರುವುದರಿಂದ, ಭೂಮಿಯಿಂದ ಅದನ್ನು ವೀಕ್ಷಿಸುವುದು ಕಷ್ಟಕರವಾಗಿದೆ. ರಾಯಿಟರ್ಸ್ ವರದಿಯ ಪ್ರಕಾರ, ಈ ಕುರಿತಾದ ಖಚಿತ ಮಾಹಿತಿಯನ್ನು ಪಡೆಯಲು ಕೆಲವು ಗಂಟೆಗಳು ಬೇಕಾಗಬಹುದು. 2025ರಲ್ಲಿ ಚಂದ್ರನ ದಕ್ಷಿಣ ಧ್ರುವದತ್ತ ಸ್ಪೇಸ್‌ಎಕ್ಸ್ ರಾಕೆಟ್ ಉಡಾವಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಡಿಕ್ಕಿಯು ಸುಮಾರು 18 ಮೀಟರ್ ಅಗಲ ಮತ್ತು 4 ಮೀಟರ್ ಆಳದ ಕುಳಿಯನ್ನು ನಿರ್ಮಿಸುವ ಹಾಗೂ ಚಂದ್ರನ ಮೇಲ್ಮೈಯಲ್ಲಿ ಧೂಳು ಮತ್ತು ಬಂಡೆಯ ಚೂರುಗಳನ್ನು ಬಾಹ್ಯಾಕಾಶಕ್ಕೆ ಚಿಮ್ಮಿಸುವ ನಿರೀಕ್ಷೆ ಇದೆ. ಇದರಿಂದ ಉಂಟಾಗುವ ಧೂಳಿನ ರಾಶಿಯು ಮೈಲುಗಟ್ಟಲೆ ವ್ಯಾಪಿಸಬಹುದು ಮತ್ತು ಟೆಲಿಸ್ಕೋಪ್‌ಗಳಲ್ಲಿ ಸ್ಪಷ್ಟವಾಗಿ ಕಂಡುಬರಬಹುದು. ಆದರೆ ಈ ವಿದ್ಯಮಾನ ಬರಿಗಣ್ಣಿಗೆ ಕಾಣಿಸುವುದಿಲ್ಲ.
ಭೂಮಿಗೆ ಅಪಾಯವಿಲ್ಲ:
ಸ್ಪೇಸ್‌ಎಕ್ಸ್ ರಾಕೆಟ್ ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆಯುವುದರಿಂದ, ಭೂಮಿಗೆ ಯಾವುದೇ ಅಪಾಯವಿಲ್ಲ. ಚಂದ್ರನ ಮೇಲ್ಮೈಗೆ ಅಪ್ಪಳಿಸುವ ವಸ್ತುಗಳು ಅಲ್ಲಿನ ಮೇಲ್ಮೈಯನ್ನು ಹೇಗೆ ಬದಲಾಯಿಸುತ್ತವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಆ ಸ್ಥಳದ ಚಿತ್ರಗಳನ್ನು ಅಧ್ಯಯನ ಮಾಡಲು ಮತ್ತು ಡಿಕ್ಕಿಗೂ ಮುನ್ನ ಹಾಗೂ ನಂತರದ ಮೇಲ್ಮೈಯನ್ನು ಹೋಲಿಸಿ ನೋಡಲು ನಾಸಾ ಯೋಜಿಸಿದೆ.ಈ ವಸ್ತುವು ಜನವರಿ 2025ರಲ್ಲಿ 'ಫೈರ್‌ಫ್ಲೈ ಏರೋಸ್ಪೇಸ್'ನ ಚಂದ್ರನ ಅಂಗಳಕ್ಕಿಳಿಯುವ ನೌಕೆಯನ್ನು ಉಡಾವಣೆ ಮಾಡಲು ಬಳಸಲಾದ 'ಫಾಲ್ಕನ್ 9' ರಾಕೆಟ್‌ನ ಎರಡನೇ ಹಂತವಾಗಿತ್ತು. ಸಾಮಾನ್ಯವಾಗಿ, ರಾಕೆಟ್ ತನ್ನ ಹೊತ್ತೊಯ್ದ ಉಪಕರಣ ಅಥವಾ ನೌಕೆಯನ್ನು ತಲುಪಿಸಿದ ನಂತರ, ಅವಶೇಷವು ಭೂಮಿಯ ವಾತಾವರಣದ ಮೂಲಕ ಕೆಳಗೆ ಬಿದ್ದು ಉರಿದುಹೋಗುತ್ತದೆ ಅಥವಾ ಸಾಗರದಲ್ಲಿ ಲೀನವಾಗುತ್ತದೆ.
ಆದರೆ ಈ ಕಾರ್ಯಾಚರಣೆ ವಿಭಿನ್ನವಾಗಿತ್ತು. ಏಕೆಂದರೆ ಲ್ಯಾಂಡರ್‌ನ್ನು ಚಂದ್ರನತ್ತ ಕಳುಹಿಸಲು ರಾಕೆಟ್ ಸಾಕಷ್ಟು ಚಾಲಕ ಬಲವನ್ನು ಒದಗಿಸಬೇಕಿತ್ತು. ಆದ್ದರಿಂದ, ತನ್ನ ಕೆಲಸವನ್ನು ಪೂರೈಸಿದ ನಂತರ ಅದರ ಎರಡನೇ ಹಂತವು ಬಾಹ್ಯಾಕಾಶದಲ್ಲೇ ಉಳಿದುಕೊಂಡಿತು. ಈ ವೇಳೆ ರಾಕೆಟ್‌ನ ಇಂಧನ ಸಂಪೂರ್ಣವಾಗಿ ಖಾಲಿಯಾಗಿದ್ದರಿಂದ, ಅದರ ದಿಕ್ಕನ್ನು ಬದಲಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ.
ಸೌರ ಚಟುವಟಿಕೆ ಮತ್ತು ಗುರುತ್ವಾಕರ್ಷಣೆಯಿಂದ ಉಂಟಾದ ಬದಲಾವಣೆಗಳು ರಾಕೆಟ್‌ನ ಅವಶೇಷದ ಕಕ್ಷೆಯನ್ನು ಕ್ರಮೇಣ ಬದಲಿಸಿ, ಚಂದ್ರನ ಪಥವನ್ನು ಸಂಧಿಸುವ ಹಾದಿಗೆ ಕೊಂಡೊಯ್ದಿದ್ದವು ಎಂದು ಖಗೋಳಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ.
ಅಸಾಮಾನ್ಯವಾಗಿದ್ದರೂ ಇಂತಹ ಘಟನೆ ಸಂಭವಿಸುತ್ತಿರುವುದು ಇದೇ ಮೊದಲ ಬಾರಿಗೆ ಅಲ್ಲ. 2022ರಲ್ಲಿ ಚೀನಾದ ರಾಕೆಟ್‌ನ ಒಂದು ಭಾಗವು ಚಂದ್ರನಿಗೆ ಅಪ್ಪಳಿಸಿತ್ತು. ಈ ಅಪ್ಪಳಿಸುವಿಕೆಯಿಂದ ಮೇಲೆಳುವ ಧೂಳು, ಬಂಡೆಗಳು ಮತ್ತು ಭೂಕಂಪನ ಪರಿಣಾಮಗಳನ್ನು ಅಧ್ಯಯನ ಮಾಡಲು, ನಾಸಾ ಈ ಹಿಂದೆಯೂ ಉದ್ದೇಶಪೂರ್ವಕವಾಗಿಯೇ ರಾಕೆಟ್ ಭಾಗಗಳನ್ನು ಚಂದ್ರನ ಮೇಲ್ಮೈಗೆ ಅಪ್ಪಳಿಸುವಂತೆ ಮಾಡಿದೆ.

