ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಐಪಿಎಲ್ ನ 2 ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್(CSK) ಇದೀಗ ಸತ್ವ ಪರೀಕ್ಷೆಗೆ ಸಜ್ಜಾಗಿವೆ. ಹಾಲಿ ಚಾಂಪಿಯನ್ ಆರ್ ಸಿಬಿ ತನ್ನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲುವ ಮೂಲಕ ಗೆಲುವಿನ ಅಭಿಯಾನವನ್ನು ಮುಂದುವರಿಸಿದ್ದರೆ, 5 ಬಾರಿಯ ಚಾಂಪಿಯನ್ ಚೆನ್ನೈ ತಂಡದ ವೈಫಲ್ಯ ಕಳೆದ ಸೀಸನ್ ನಂತೆಯೇ ಮುಂದುವರಿದಿದೆ.
ಈ ಸೀಸನ್ ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವುದರಿಂದ ಇದೀಗ ಗೆಲುವಿಗಾಗಿ ಹಪಹಪಿಸುತ್ತಿದೆ. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 5ರ ಭಾನುವಾರದಂದು ನಡೆಯಲಿರುವ ಪಂದ್ಯ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರುವ ನಿರೀಕ್ಷೆ ಇದೆ.
RCBಯೇ ಸ್ಟಾಂಗ್
ಇತ್ತಂಡಗಳ ಬಲಾಬಲ ಲೆಕ್ಕ ಹಾಕಿದರೆ ಆರ್ ಸಿಬಿಯೇ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ಪ್ರಧಾನ ವೇಗಿ ಜೋಶ್ ಹೇಜಲ್ವುಡ್ , ಕಳೆದ ಸೀಸನ್ ನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ್ದ ಯಶ್ ದಯಾಳ್ ಅವರು ತಂಡದಲ್ಲಿ ಇಲ್ಲದಿರುವುದು ದೊಡ್ಡ ಹೊಡೆತ ನೀಡಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜಾಕೋಬ್ ಡಫಿ ಹೇಜಲ್ವುಡ್ ಅವರಿಗೆ ಪರ್ಫೆಕ್ಟ್ ಬದಲಿ ಆಟಗಾರರಾಗಿ ಮೂಡಿಬಂದಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಅವರು ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗ ಮಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಅಭಿನಂದನ್ ಸಿಂಗ್ ಅವರನ್ನು ಆಡಿಸಲು ತಂಡದ ಮ್ಯಾನೇಜ್ ಮೆಂಟ್ ಮನಸ್ಲು ಮಾಡದೇ ಇದ್ದಲ್ಲಿ ಆಗ ಯುವ ವೇಗಿ ಮಂಗೇಶ್ ಯಾದವ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಬಹುದು.ಇನ್ನು ಆರ್ ಸಿಬಿಯ ಬ್ಯಾಟಿಂಗ್ ವಿಚಾರಕ್ಕೆ ಬಂದಾಗ ಮಾತ್ರ ಮಾತನಾಡುವ ಹಾಗೆಯೇ ಇಲ್ಲ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಅವರು ಉತ್ತಮ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳಿಗೆ ಹೆಚ್ಚು ಕೆಲಸ ಉಳಿದಿರಲಿಲ್ಲ. ಆರಂಭಕಾರ ಫಿಲ್ ಸಾಲ್ಟ್ ಆಟಕ್ಕೆ ಕುದುರಿಕೊಳ್ಳುವುದನ್ನು ಆರ್ ಸಿಬಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
CSKಯಲ್ಲಿ ಸಮಸ್ಯೆಗಳ ಸರಮಾಲೆ
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಂದಲ್ಲಿ ತಂಡದಲ್ಲಿ ಯಾವುದೂ ಸರಿಯಿಲ್ಲ ಎಂಬುದಂತೂ ಸ್ಪಷ್ಚ. ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ಸಂಪೂರ್ಣ ನೆಲಕಚ್ಚಿದ್ದರಿಂದ ಬೌಲರ್ ಗಳು ಯಾವ ಮ್ಯಾಜಿಕನ್ನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಪಂಜಾಬ್ ವಿರುದ್ಧ 2ನೇ ಪಂದ್ಯದಲ್ಲಿ ಬ್ಯಾಟರ್ ಗಳು ಉತ್ತಮ ಆಟ ಪ್ರದರ್ಶಿಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದರೂ ಅದನ್ನು ಉಳಿಸಿಕೊಳ್ಳಲು ಬೌಲಿಂಗ್ ವಿಭಾಗದಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಧೋನಿ ಇಲ್ಲ ಎಂಬುದೊಂದೇ ತಂಡದ ಸಮಸ್ಯೆಯಾಗಿ ಉಳದಿಲ್ಲ.ಏತನ್ಮಧ್ಯೆ ಬಹಳ ಲೆಕ್ಕಾಚಾರವನ್ನು ಇಟ್ಟಿಕೊಂಡು ಚೆನ್ನೈ ಫ್ರಾಂಚೈಸಿಯು ಟ್ರೇಡ್ ಮೂಲಕ ಖರೀದಿಸದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರಿಂದ ಉತ್ತಮ ಪ್ರದರ್ಶನ ಬಾರದೇ ಇರುವುದ ಸಹ ತಂಡದ ಮ್ಯಾನೇಜ್ ಮೆಂಟ್ ನ ಚಿಂತೆಗೆ ಕಾರಣವಾಗಿದೆ. ಆದರೆ ಯುವ ಆಟಗಾರ ಆಯುಷ್ ಮ್ಹಾತ್ರೆ ಭರವಸೆ ಮೂಡಿಸಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ.
ಪಿಚ್ ರಿಪೋರ್ಟ್
ಇಡೀ ದೇಶದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಷ್ಟು ಸಮತೋಲಿತ ಪಿಚ್ ಮತ್ತೊಂದಿಲ್ಲ ಎಂಬ ಮಾತಿದೆ. ಆಧರೆ ವೈಟ್ ಬಾಲ್ ಕ್ರಿಕೆಟ್ ಅದರಲ್ಲೂ ಟಿ20 ವಿಚಾರಕ್ಕೆ ಬಂದಾಗ ಮಾತ್ರ ಇದು ಪಕ್ಕಾ ಬ್ಯಾಟಿಂಗ್ ಸ್ನೇಹಿ ಪಿಚ್. ಇನ್ನು ಬೌಂಡರಿಗಳಂತೂ ತೀರಾ ಚಿಕ್ಕದಾಗಿರುವುದರಿಂದ ಸಿಕ್ಸರ್ ಗಳ ಸುರಿಮಳೆಯಾಗುವುದು ಖಚಿತ. ಪಿಚ್ ನಲ್ಲಿ ಸ್ಥಿರವಾದ ವೇಗ ಮತ್ತು ಬೌನ್ಸ್ ಇದೆ. ಹಾಗಾಗಿ ವೇಗದ ಬೌಲರ್ ಗಳು ಸರಿಯಾದ ಜಾಗದಲ್ಲಿ ಚೆಂಡು ಎಸೆದಲ್ಲಿ ಲಾಭ ಪಡೆಯಬಹುದು. ಇಲ್ಲಿನ ಮೊದಲ ಇನ್ನಿಂಗ್ಸ್ ಸರಾಸರಿ 179 ಇರುವ ಕಾರಣಕ್ಕೆ ಮತ್ತು ಸಂಜೆ ಬಳಿಕ ಇಬ್ಬನಿ ಬೀಳುವ ಸಾಧ್ಯತೆ ಇರುವುದರಿಂದ ಟಾಸ್ ವಿಜೇತರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.- ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
- ಪಂದ್ಯ ಆರಂಭ: ಸಂಜೆ 7.30
- ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಆರ್ ಸಿಬಿ ಸಂಭಾವ್ಯ ಇಲೆವೆನ್
ರಜತ್ ಪಾಟಿದಾರ್ (ನಾಯಕ), ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಅಭಿನಂದನ್ ಸಿಂಗ್/ಮಂಗೇಶ್ ಯಾದವ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾಸಿಎಸ್ ಕೆ ಸಂಭಾವ್ಯ ಇಲೆವೆನ್
ಋತುರಾಜ್ ಗಾಯಕ್ವಾಡ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಆಯುಷ್ ಮ್ಹಾತ್ರೆ, ಶಿವಂ ದುಬೆ, ಕಾರ್ತಿಕ್ ಶರ್ಮಾ, ಸರ್ಫರಾಝ್ ಖಾನ್, ಪ್ರಶಾಂತ್ ವೀರ್, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮ್ಯಾಟ್ ಹೆನ್ರಿ
