ಬೆಂಗಳೂರು : ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಪೂರೈಸಿರುವ ಹಿನ್ನಲೆಯಲ್ಲಿ, ಈ ಮೂವತ್ತು ದಿನಗಳ ಅವಧಿಯಲ್ಲಿ ಏನೇನು ಕೆಲಸವನ್ನು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಮಾಡಿತು ಎನ್ನುವ 51 ಲಿಸ್ಟ್ ಇರುವ ಪಟ್ಟಿಯನ್ನು ಮುಖ್ಯಮಂತ್ರಿಗಳ ಕಚೇರಿ ಪ್ರಕಟಿಸಿತ್ತು.
ಇದಕ್ಕೆ, ವಿಧಾನಸಭೆಯಲ್ಲಿ ವಿಪಕ್ಷದ ನಾಯಕ ಆರ್.ಅಶೋಕ, ವೈಫಲ್ಯದ ಪಟ್ಟಿಯನ್ನು ನೀಡುವ ಮೂಲಕ ತಿರುಗೇಟನ್ನು ನೀಡಿದ್ದಾರೆ.
ಲೋಕಭವನದ (ರಾಜಭವನ) ಗಾಜಿನ ಮನೆಯಲ್ಲಿ, ರಾಜ್ಯದ 25ನೇ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್, ಜೂನ್ ಮೂರರಂದು ಪ್ರಮಾಣವಚನ ಸ್ವೀಕರಿಸಿದ್ದರು. ಈ ಮೂವತ್ತು ದಿನಗಳಲ್ಲಿ ಡಿಕೆಶಿ ನೇತೃತ್ವದ ಹೊಸ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರಗಳೇನು ಎನ್ನುವುದನ್ನು ಮುಖ್ಯಮಂತ್ರಿ ಕಚೇರಿ ಹೊರಡಿಸಿತ್ತು. ಇದರಲ್ಲಿ, ರಾಜ್ಯದೆಲ್ಲೆಡೆ 'ಬಿ' ಯಿಂದ 'ಎ' ಖಾತಾ ಪರಿವರ್ತನೆ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಮುಂತಾದವುಗಳು ಇದ್ದವು. ಇದಕ್ಕೆ, ವಿಪಕ್ಷದ ನಾಯಕರು, ತಿರುಗೇಟನ್ನು ನೀಡಿದ್ದಾರೆ.
ಒಂದು ತಿಂಗಳಲ್ಲೇ ಕೋಟ್ಯಂತರ ಕನ್ನಡಿಗರಿಗೆ ಭ್ರಮನಿರಸನ
"ಡಿಕ ಶಿವಕುಮಾರ್ ಮುಖ್ಯಮಂತ್ರಿಯಾಗಿ ಒಂದು ತಿಂಗಳಾಗಿದೆ, ಆಗಲೇ, ರಾಜ್ಯದ ಎಲ್ಲ ಜಲಾಶಯಯಗಳು ಖಾಲಿಯಾಗಿವೆ. ಕೆಆರ್‌ಎಸ್‌ನಲ್ಲಿ 6 ಟಿಎಂಸಿ ನೀರು ಮಾತ್ರ ಇದೆ. ಒಳಹರಿವು 900 ಕ್ಯೂಸೆಕ್ಸ್ ಇದೆ. ಆದರೆ ಹೊರಗೆ ಹೆಚ್ಚು ನೀರು ಬಿಡಲಾಗುತ್ತಿದೆ ಎಂಬ ಅನುಮಾನವಿದೆ" ಎಂದು ವಿಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಆರ್.ಅಶೋಕ, ಪ್ರತಿಕ್ರಿಯೆಯನ್ನು ನೀಡಿದ್ದಾರೆ.ಅತ್ತು-ಸುರಿದು, ಕಾಡಿ-ಬೇಡಿ, ದೆಹಲಿಯ ಹೈಕಮಾಂಡ್ ಬಾಗಿಲು ಕಾದು ಕೊನೆಗೂ ಮುಖ್ಯಮಂತ್ರಿ ಕುರ್ಚಿಯ ಕನಸನ್ನು ನನಸಾಗಿಸಿಕೊಂಡ ಡಿಕೆ ಶಿವಕುಮಾರ್ ಅವರ ಸರ್ಕಾರಕ್ಕೆ ಇಂದಿಗೆ ಭರ್ತಿ ಒಂದು ತಿಂಗಳು. ಡಿಕೆ ಶಿವಕುಮಾರ್ ಅವರೇ, ನಿಮ್ಮ ರಾಜಕೀಯ ಕನಸೇನೋ ನನಸಾಗಿದೆ. ಆದರೆ ಕೇವಲ ಒಂದು ತಿಂಗಳಲ್ಲೇ ಕೋಟ್ಯಂತರ ಕನ್ನಡಿಗರ ಕನಸುಗಳು ಸಂಪೂರ್ಣ ಭ್ರಮನಿರಸನವಾಗಿವೆ ಎಂದು ಆರ್.ಅಶೋಕ ಹೇಳಿದ್ದಾರೆ.
ಕೋಟ್ಯಾಂತರ ಕನ್ನಡಿಗರ ಕನಸು ನುಚ್ಚುನೂರು ಎಂದ ಆರ್.ಅಶೋಕ
ಕೇವಲ 30 ದಿನಗಳ ಟ್ರೈಲರ್‌ನಲ್ಲೇ ಇಡೀ ರಾಜ್ಯದ ಕನಸನ್ನು ನುಚ್ಚು ನೂರು ಮಾಡಿರುವ ನಿಮ್ಮ ಸರ್ಕಾರ, ಇನ್ನು ಎರಡು ವರ್ಷ ಮುಂದುವರಿದರೆ ಕರ್ನಾಟಕದ ಸ್ಥಿತಿ ಏನಾಗಬಹುದು ಎಂಬ ಆತಂಕ ಪ್ರತಿಯೊಬ್ಬ ಕನ್ನಡಿಗನಲ್ಲಿದೆ. ಕುರ್ಚಿಯ ಕನಸು ನನಸುಗೊಂಡಿದೆ, ಆದರೆ ಕರ್ನಾಟಕದ ಜನತೆಯ ಕನಸುಗಳು, ಆಶೋತ್ತರಗಳು, ನಿರೀಕ್ಷೆಗಳು ಮಾತ್ರ ಸಂಪೂರ್ಣವಾಗಿ ಭ್ರಮನಿರಸನಗೊಂಡಿವೆ ಎಂದು ಆರ್.ಅಶೋಕ, ಹೇಳಿದ್ದಾರೆ. ಜೊತೆಗೆ, ಒಂದು ತಿಂಗಳಲ್ಲಿನ ಆರು ವೈಫಲ್ಯಗಳನ್ನು ಪಟ್ಟಿ ಮಾಡಿದ್ದಾರೆ.ವಿಪಕ್ಷದ ನಾಯಕ ಆರ್.ಅಶೋಕ ಹೇಳಿರುವ ಆರು ವೈಫಲ್ಯಗಳು
- 1. ರೈತನಿಗೆ ನೆಮ್ಮದಿ ಇಲ್ಲ: ರಸಗೊಬ್ಬರಕ್ಕಾಗಿ ಸಾಲಿನಲ್ಲಿ ಚಪ್ಪಲಿ ಇಟ್ಟು ದಿನಗಟ್ಟಲೆ ಕಾಯಬೇಕಾದ ದುಸ್ಥಿತಿ, ನೀರಿಗಾಗಿ ಹೋರಾಟ, ಬರದ ಭೀತಿ, ಭೂಸ್ವಾಧೀನದ ಆತಂಕ, ಅನ್ನದಾತ ನಿಮ್ಮ ಆಡಳಿತದಲ್ಲಿ ತನ್ನದೇ ಜಮೀನಿನಲ್ಲಿ ಭಿಕ್ಷುಕನಂತಾಗಿದ್ದಾನೆ!
- 2. ಯುವಕರಿಗೆ ವಿಶ್ವಾಸ ಇಲ್ಲ: ಭರವಸೆಯಾಗಿಯೇ ಉಳಿದ ನೇಮಕಾತಿಯ ಆಶ್ವಾಸನೆ, ಹೊಸ ಉದ್ಯೋಗದಲ್ಲಿ ಶೂನ್ಯ ಸಾಧನೆ.
- 3. ಮಹಿಳೆಯರಿಗೆ ಭದ್ರತೆ ಇಲ್ಲ: ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ; ಪರಿಷ್ಕರಣೆಯ ಹೆಸರಿನಲ್ಲಿ ಸ್ವಾಭಿಮಾನಿ ಗೃಹಲಕ್ಷ್ಮಿಯರ ಮೇಲೆ ಅನುಮಾನ.
- 4. ಬಡವರು ಮತ್ತು ಮಧ್ಯಮ ವರ್ಗಕ್ಕೆ ನೆಮ್ಮದಿ ಇಲ್ಲ: ಬೆಲೆ ಏರಿಕೆ, ತೆರಿಗೆಗಳ ಹೊರೆ, ದೈನಂದಿನ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದೆ. ಇದು ಗ್ಯಾರೆಂಟಿ ಸರ್ಕಾರವಲ್ಲ, ಲೂಟಿ ಸರ್ಕಾರ.
- 5. ಉದ್ಯಮಿಗಳಿಗೆ ಆತ್ಮವಿಶ್ವಾಸ ಇಲ್ಲ: ಅನಿಶ್ಚಿತ ಆಡಳಿತ ಮತ್ತು ಕಮಿಷನ್ ದಂಧೆಗೆ ಹೆದರಿ ಹೂಡಿಕೆದಾರರು ನೆರೆರಾಜ್ಯಗಳಿಗೆ ಪಲಾಯನ ಮಾಡುತ್ತಿದ್ದಾರೆ.
- 6. ಬೆಂಗಳೂರಿಗೆ ದಿಕ್ಕಿಲ್ಲ: ಟ್ರಾಫಿಕ್ ನರಕ, ಗುಂಡಿ ಬಿದ್ದ ರಸ್ತೆಗಳು, ಯೋಜನಾ ರಹಿತ ಅವ್ಯವಸ್ಥೆ, ಪರಿಹಾರದ ಸುಳಿವೇ ಕಾಣುತ್ತಿಲ್ಲ.

