ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) vs ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಡುವಿನ ಐಪಿಎಲ್ ಪಂದ್ಯದಲ್ಲಿ, ಸಿಎಸ್‌ಕೆ ಬ್ಯಾಟ್ಸಮನ್ ಆಯುಷ್ ಮಾತ್ರೆ ಅವರ ಬ್ಯಾಟ್‌ನ್ನು ಪಂದ್ಯದ ಅಂಪೈರ್ ಎರಡು ಬಾರಿ ಪರೀಕ್ಷೆ ನಡೆಸಿದ ಘಟನೆ ನಡೆದಿದೆ.
ಪಂದ್ಯದಲ್ಲಿ ಸಿಎಸ್‌ಕೆ ಪರವಾಗಿ ಮೂರನೇ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿದ ಆಯುಷ್ ಮಾತ್ರೆ, ಮೈದಾನಕ್ಕೆ ಬರುತ್ತಿದ್ದಂತೇ, ಅಂಪೈರ್ ಅವರ ಬ್ಯಾಟ್‌ನ್ನು ಪರೀಕ್ಷಿಸಿದರು. ಅಲ್ಲದೇ ಬ್ಯಾಟ್‌ನ್ನು ಬದಲಿಸುವಂತೆ ಆಯುಷ್ ಮಾತ್ರೆ ಅವರಿಗೆ ಅಂಪೈರ್ ಸೂಚಿಸಿದರು. ಬಳಿಕ ಮತ್ತೆ ಎರಡನೇ ಬ್ಯಾಟ್‌ನ್ನು ಪರೀಕ್ಷಿಸಿದ ಬಳಿಕ , ಮೊದಲನೇ ಬ್ಯಾಟ್‌ನಲ್ಲೇ ಆಡುವಂತೆ ಸೂಚಿಸಿದರು.
ಇದು ಕೆಲಕಾಲ ಮೈದಾನದಲ್ಲಿ ಗೊಂದಲಮಯ ಪರಿಸ್ಥಿತಿಯನ್ನು ಸೃಷ್ಟಿಸಿತು. ಆದರೆ ಕೊನೆಯಲ್ಲಿ ಆಯುಷ್ ಮಾತ್ರೆ ತಾವು ಮೊದಲ ಬಾರಿಗೆ ಮೈದಾನಕ್ಕೆ ತಂದಿದ್ದ ಬ್ಯಾಟ್‌ನಲ್ಲೇ ಆಟವಾಡಿದರು.
ಆದರೆ ಅಂಪೈರ್ ಆಯುಷ್ ಮಾತ್ರೆ ಅವರ ಬ್ಯಾಟ್ ಪರಿಶೀಲಿಸಿದ್ದು ಮತ್ತು ಬ್ಯಾಟ್ ಬದಲಿಸಿ ಆಮೇಲೆ ಮತ್ತೆ ಹಳೆಯ ಬ್ಯಾಟ್‌ನ್ನೇ ಮರಳಿ ನೀಡಿದ್ದು ಹಲವು ರೀತಿಯ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿದ್ದು, ಅನೇಕರು ಸಿಎಸ್‌ಕೆ ತಂಡದ ವಿರುದ್ಧ ಫಿಕ್ಸಿಂಗ್ ಆರೋಪ ಹೊರಿಸಲಾರಂಭಿಸಿದ್ದಾರೆ.
"ನೀವು ಪಂದ್ಯವನ್ನು ನೋಡಿದ್ದರೆ ಆಯುಷ್ ಮಾತ್ರೆ ಹೈ ಮೌಂಟ್ ಬ್ಯಾಟ್‌ನೊಂದಿಗೆ ಮೈದಾನಕ್ಕೆ ಇಳಿದಿದ್ದು ಸ್ಪಷ್ಟವಾಗುತ್ತದೆ. ಸಿಎಸ್‌ಕೆ ತಂಡಕ್ಕೆ ಫಿಕ್ಸಿಂಗ್ ಹೊಸದೇನಲ್ಲ" ಎಂದು ಓರ್ವ ನೆಟ್ಟಿಗ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಮತ್ತೋರ್ವ ಸಾಮಾಜಿಕ ಮಾಧ್ಯಮ ಬಳಕೆದಾರ "ಈ ಆಯುಷ್ ಮಾತ್ರೆ ಆಟದಲ್ಲಿ ಯಾವುದೇ ಅರ್ಥವಿಲ್ಲ, ಪ್ರತಿಯೊಂದು ಚೆಂಡನ್ನು ಕುರುಡಾಗಿ ಸ್ಲಾಗರ್ ಮಾಡುತ್ತಾನೆ. ಈ ವಿಧಾನದಿಂದ ಅವನು ತನ್ನ ಸ್ಟ್ರೈಕ್‌ರೇಟ್ ಕಾಯ್ದುಕೊಳ್ಳಬಹುದೇ ಹೊರತು ಎಂದಿಗೂ ಸ್ವಂತವಾಗಿ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ" ಎಂದು ಹರಿಹಾಯ್ದಿದ್ದಾನೆ.
ಆದರೆ ಇನ್ನೂ ಕೆಲವರು ಆಯುಷ್ ಮಾತ್ರೆಗೆ ಅಂಪೈರ್ ಮೊದಲ ಬ್ಯಾಟ್ ಮರಳಿಸಿದ್ದನ್ನು ಒತ್ತಿ ಹೇಳಿದ್ದು, ಅಂಪೈರ್ ಕೇವಲ ಬ್ಯಾಟ್ ಪರಿಶೀಲನೆ ನಡೆಸಿದ್ದಾರೆ. ಎಲ್ಲವೂ ಸರಿ ಇದೆ ಎಂದ ಬಳಿಕ ಮರಳಿ ಮೊದಲ ಬ್ಯಾಟ್‌ನ್ನೇ ನೀಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.
ಮತ್ತೋರ್ವ ಸಾಮಾಜಿಕ ಬಳಕೆದಾರ "ಕೊನೆಗೂ ಆಯುಷ್ ಮಾತ್ರೆ ಅವರ ಬ್ಯಾಟ್ ಅಂಪೈರ್ ಗೇಜ್ ಪರೀಕ್ಷೆಯಲ್ಲಿ ಉತ್ತೀರ್ಣವಾಯಿತು" ಎಂದು ಲಘು ಹಾಸ್ಯಚಟಾಕಿ ಹಾರಿಸಿದ್ದಾರೆ.
ಅಂಪೈರ್ ಬ್ಯಾಟ್ ಏಕೆ ಚೆಕ್ ಮಾಡುತ್ತಾರೆ?
ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ವಿಶೇಷವಾಗಿ ಐಪಿಎಲ್ ಪಂದ್ಯಾವಳಿಗಳಲ್ಲಿ ಗರಿಷ್ಠ ಅನುಮತಿಸಬಹುದಾದ ಆಯಾಮಗಳಿಗೆ (10.8 ಸೆಂ.ಮೀ ಅಗಲ, 6.7 ಸೆಂ.ಮೀ ಆಳ ಮತ್ತು 4 ಸೆಂ.ಮೀ ಅಂಚು) ಸಂಬಂಧಿಸಿದ ನಿಯಮಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು, ಅಂಪೈರ್‌ಗಳು ಬ್ಯಾಟ್ ಗೇಜ್‌ನೊಂದಿಗೆ ಕ್ರಿಕೆಟ್ ಬ್ಯಾಟ್‌ಗಳನ್ನು ಪರಿಶೀಲಿಸುತ್ತಾರೆ. ಈ ಇನ್-ಮ್ಯಾಚ್ ಪರಿಶೀಲನೆಯು ಬ್ಯಾಟರ್‌ಗಳಿಗೆ ಅನ್ಯಾಯದ ಪ್ರಯೋಜನವನ್ನು ನೀಡುವ ದೊಡ್ಡ ಗಾತ್ರದ ಬ್ಯಾಟ್‌ಗಳ ಬಳಕೆಯನ್ನು ತಡೆಯುವ ಮೂಲಕ, ನ್ಯಾಯಯುತ ಆಟವನ್ನು ಖಚಿತಪಡಿಸುತ್ತದೆ.
